ಅನಿಕಾ ಎಂಬ ಯುವತಿಯ ಅರೆಸ್ಟ್ ಆಗಿದ್ದೇ ತಡ, ಬೆನ್ನಲ್ಲೇ ಹೊರಬಿದ್ದ ಸತ್ಯ, ಸ್ಯಾಂಡಲ್‍ವುಡ್ ಮತ್ತು ಡ್ರಗ್ಸ್ ದುನಿಯಾ ಲಿಂಕ್. ಇಲ್ಲ ಬಿಡಿ, ಕನ್ನಡ ಚಿತ್ರರಂಗದಲ್ಲಿ ಅಂತಹುದ್ದಕ್ಕೆಲ್ಲ ಆಸ್ಪದವೇ ಇಲ್ಲ ಎನ್ನುತ್ತಿರುವಾಗ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಇಂದ್ರಜಿತ್ ಲಂಕೇಶ್ ಡ್ರಗ್ಸ್ ಸೀಕ್ರೆಟ್ ಸ್ಪೋಟಿಸಿದ್ದಾರೆ.
ಹೌದು, ಕನ್ನಡ ಚಿತ್ರರಂಗದಲ್ಲೂ ಡ್ರಗ್ಸ್ ಬಿಸಿನೆಸ್ ನಡೆಯುತ್ತಿದೆ. ಈ ಡ್ರಗ್ಸ್ ಮಾರ್ಕೆಟ್ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯರಿಗೂ ಗೊತ್ತಿದೆ. ಕನ್ನಡದ ಹಲವು ನಟ ನಟಿಯರು ಈ ಜಾಲದಲ್ಲಿದ್ದಾರೆ. ನಮ್ಮಲ್ಲಿ ಕೇವಲ ಡ್ರಗ್ಸ್ ಮಾರ್ಕೆಟ್ ಅಲ್ಲ, ಗಾಂಜಾ ಪಾರ್ಟಿ, ರೇವ್ ಪಾರ್ಟಿ ಮಾಡ್ತಾರೆ. ಹಾಗೆ ಮಾಡುತ್ತಿರುವವರ ಬಗ್ಗೆ ನನಗೆ ಮಾಹಿತಿ ಇದೆ.
ಇದು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಲ್ಲಿ ಒಬ್ಬರಾಗಿರೋ ಪತ್ರಕರ್ತ ಇಂದ್ರಜಿತ್ ಲಂಕೇಶ್ ಸ್ಫೋಟಿಸಿರುವ ಸುದ್ದಿ. ಇದು ಕನ್ನಡದ ಹಿರಿಯ ನಟರಿಗೂ ಗೊತ್ತು. ಆದರೆ ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಅವರಿದ್ದಾರೆ. ಸ್ಟಾರ್ ನಟರಿಗೆ ಇಂತಹವು ಇಷ್ಟವಾಗುತ್ತಿಲ್ಲ. ಆದರೆ ಚಿತ್ರರಂಗಕ್ಕೆ ಎಲ್ಲೆಲ್ಲಿಂದಲೋ ಬಂದವರು ಹಿರಿಯರ ಕಂಟ್ರೋಲಿನಲ್ಲಿ ಇಲ್ಲ. ಚಿತ್ರರಂಗದ ದೊಡ್ಡ ದೊಡ್ಡ ನಟರು, ಕಲಾವಿದರು, ತಂತ್ರಜ್ಞರು ಈ ದಂಧೆಯಲ್ಲಿ ಇಲ್ಲ ಎನ್ನುವುದು ಇಂದ್ರಜಿತ್ ಲಂಕೇಶ್ ನೀಡಿರುವ ಒಟ್ಟಾರೆ ಹೇಳಿಕೆಯ ಸಾರಾಂಶ.
ಇದಷ್ಟೇ ಅಲ್ಲ, ಇತ್ತೀಚೆಗೆ ಹನಿ ಟ್ರ್ಯಾಪ್, ಬೆಟ್ಟಿಂಗ್.. ಹೀಗೆ ಬೇರೆ ಬೇರೆ ದಂಧೆಗಳಲ್ಲಿ ಚಿತ್ರರಂಗದ ಹಲವು ನಟಿಯರ ಹೆಸರು ಕೇಳಿಬಂತು. ಅವರೆಲ್ಲ ಈಗ ಐಷಾರಾಮಿ ಕಾರು, ಅಪಾರ್ಟ್‍ಮೆಂಟ್ ಹೊಂದಿದ್ದಾರೆ. ತನಿಖೆ ಮಾಡಿದರೆ ಅವರೆಲ್ಲರ ದುಡ್ಡಿನ ಮೂಲ ಗೊತ್ತಾಗಲಿದೆ ಅನ್ನೋದು ಇಂದ್ರಜಿತ್ ಮಾತು. ತನಿಖೆ ಮಾಡೋರ್ಯಾರು..?