ಐಶ್ವರ್ಯಾ ರಾಜೇಶ್. ಕನ್ನಡದಲ್ಲಿ ನಟಿಸಿಲ್ಲದೇ ಇದ್ದರೂ ಅಪರಿಚಿತರೇನಲ್ಲ. ತಮಿಳುನಾಡಿನಲ್ಲಿ ಫೇಮಸ್ ನಟಿ. ನಾಯಕಿಯಷ್ಟೇ ಅಲ್ಲ, ಕ್ಯಾರೆಕ್ಟರ್ ಇಷ್ಟವಾದರೆ ಪೋಷಕ ಪಾತ್ರದಲ್ಲೂ ನಟಿಸ್ತಾರೆ. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯಾ ರಾಜೇಶ್, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತ ರಶ್ಮಿಕಾ ಮಂದಣ್ಣ ಕೂಡಾ ಫೇಮಸ್ ನಟಿ. ಕನ್ನಡದವರಾದರೂ, ಫೇಮಸ್ ಆಗಿರೋದು ತೆಲುಗಿನಲ್ಲಿ. ತಮಿಳು, ಹಿಂದಿಯಲ್ಲೂ ನಟಿಸಿರೋ ರಶ್ಮಿಕಾ ನ್ಯಾಷನಲ್ ಕ್ರಶ್.
ಇತ್ತೀಚೆಗೆ ಐಶ್ವರ್ಯಾ ಅವರ ಹೇಳಿಕೆಯೊಂದು ವಿವಾದ ಸೃಷ್ಟಿಸಿತ್ತು. ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರ ನೋಡಿದ್ದೀರಲ್ಲ, ಆ ಪಾತ್ರದಲ್ಲಿ ನಾನು ನಟಿಸಿದ್ದರೆ ಇನ್ನು ಚೆನ್ನಾಗಿ ನಟಿಸುತ್ತಿದ್ದೆ ಎಂದು ಐಶ್ವರ್ಯಾ ರಾಜೇಶ್ ಹೇಳಿಕೆ ಕೊಟ್ಟಿದ್ದಾರೆ ಎಂದು ಸುದ್ದಿಯೊಂದು ಹರಿದಾಡಿತ್ತು. ಒಬ್ಬ ನಟಿ, ತನ್ನನ್ನು ತಾನು ಹೊಗಳಿಕೊಳ್ಳೋ ಭರದಲ್ಲಿ ಇನ್ನೊಬ್ಬರನ್ನು ಹೀಯಾಳಿಸಿದರಾ ಎಂಬ ಪ್ರಶ್ನೆ ಎದ್ದಿತ್ತು. ಮೊದಲೇ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಗಳಿದ್ದಷ್ಟೇ ಹಿತಶತ್ರುಗಳೂ ಜಾಸ್ತಿ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ರಾಡಿಯನ್ನೇ ಎಬ್ಬಿಸಿತ್ತು ಈ ಹೇಳಿಕೆ. ವಿವಾದ ಸುದ್ದಿಯಾದ ಮರುಕ್ಷಣವೇ ಐಶ್ವರ್ಯಾ ರಾಜೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಹೇಳಿದ್ದೇ ಒಂದು, ಸುದ್ದಿಯಾಗಿದ್ದೇ ಮತ್ತೊಂದು ಎಂದಿರುವ ಐಶ್ವರ್ಯಾ ರಾಜೇಶ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನನಗೆ ತೆಲುಗು ಚಿತ್ರರಂಗದ ಪ್ರಶ್ನೆ ಕೇಳಲಾಯಿತು. ತೆಲುಗು ಚಿತ್ರರಂಗದಲ್ಲಿ ನಾನು ಯಾವ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಕೇಳಿದ್ದರು. ನನಗೆ ತೆಲುಗು ಚಿತ್ರರಂಗವೆಂದರೆ ಇಷ್ಟ. ತೆಲುಗು ಸಿನಿಮಾಗಳನ್ನು ತುಂಬಾ ಇಷ್ಟಪಡುತ್ತೇನೆ. ನನಗೆ ಇಷ್ಟವಾಗುವಂತಹ ಪಾತ್ರಗಳು ಸಿಕ್ಕರೆ ನಾನು ಖಂಡಿತವಾಗಿಯೂ ತೆಲುಗು ಚಿತ್ರಗಳನ್ನು ಮಾಡುತ್ತೇನೆ ಎಂದು ಉತ್ತರಿಸಿದ್ದೆ. 'ಪುಷ್ಪ' ಸಿನಿಮಾದಲ್ಲಿನ ಶ್ರೀವಲ್ಲಿ ಪಾತ್ರವು ನನಗೆ ತುಂಬಾ ಇಷ್ಟವಾಗಿತ್ತು. ಅದನ್ನು ಉದಾಹರಣೆಯಾಗಿ ಕೊಟ್ಟು, ಅಂತಹ ಪಾತ್ರಗಳು ನನಗೆ ಸರಿಹೊಂದುತ್ತವೆ ಎಂದು ನಾನು ಹೇಳಿದ್ದೆ' ಅಂತ ಐಶ್ವರ್ಯಾ ರಾಜೇಶ್ ಹೇಳಿದ್ದಾರೆ.
ದುರದೃಷ್ಟವಶಾತ್, ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. 'ಪುಷ್ಪ' ಚಿತ್ರದಲ್ಲಿನ ನಟಿ ರಶ್ಮಿಕಾ ಮಂದಣ್ಣ ಅವರ ನಟನೆಯನ್ನು ನಾನು ಅವಹೇಳನ ಮಾಡುತ್ತಿದ್ದೇನೆ ಎಂಬರ್ಥದಲ್ಲಿ ಅರ್ಥೈಸಲಾಗಿದೆ. ಆದರೆ ಇದೆಲ್ಲವೂ ಸುಳ್ಳು. ನನ್ನ ಎಲ್ಲಾ ಸಹ ನಟರು ಮತ್ತು ನಟಿಯರ ಬಗ್ಗೆ ಅಪಾರ ಗೌರವವಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಪುಷ್ಪದ ರಶ್ಮಿಕಾ ಅವರ ಕೆಲಸದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಬೇಕು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ವದಂತಿ ಹಬ್ಬಿಸಬಾರದು ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ.
ಇಷ್ಟೇ ಆಗಿದ್ದು, ನನಗೆ ಅಂತಹ ಪಾತ್ರ ಮಾಡಲು ಇಷ್ಟ ಎಂದು ಐಶ್ವರ್ಯಾ ಹೇಳಿದ್ದನ್ನೇ ತಿರುಚಿ ಹೇಳಲಾಗಿದೆ ಅನ್ನೋದು ಐಶ್ವರ್ಯಾ ರಾಜೇಶ್ ವಾದ.