ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಪಟಾಕಿ, ಹಾರ, ಕೇಕುಗಳನ್ನು ದೂರವಿಟ್ಟು, ಸರಳವಾಗಿ ಆಚರಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯವೇ. ಮನೆ ಹತ್ತಿರ ಬನ್ನಿ, ದವಸ ಧಾನ್ಯ ತನ್ನಿ. ಅನಾಥಾಶ್ರಮ, ವೃದ್ಧಾಶ್ರಮ, ಮಠಗಳಿಗೆ ಹಂಚುವ ಕೆಲಸ ನನ್ನದು ಎನ್ನುವ ದರ್ಶನ್ ಕಳೆದೆರಡು ವರ್ಷಗಳಿಂದ ಹುಟ್ಟುಹಬ್ಬದ ಸಂಭ್ರಮಕ್ಕೆ ಸ್ವತಃ ತಾವೇ ಬ್ರೇಕ್ ಹಾಕಿದ್ದಾರೆ.
ದರ್ಶನ್ ಹೇಳಿದ ಎಲ್ಲ ಮಾತನ್ನೂ ಪಾಲಿಸುತ್ತಿರೋ ಅಭಿಮಾನಿಗಳು, ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ ಎಂಬ ಮನವಿಯನ್ನು ಮಾತ್ರ ಪುರಸ್ಕರಿಸುತ್ತಿಲ್ಲ. ಬರುವ ಸಾವಿರಾರು ಅಭಿಮಾನಿಗಳಲ್ಲಿ ಕೆಲವೇ ಕೆಲವು ಅಭಿಮಾನಿಗಳು ಮಾಡಿರುವ ದುರ್ವರ್ತನೆ, ಈಗ ದರ್ಶನ್ ಮನೆಯೆದುರಿನ ಹುಟ್ಟುಹಬ್ಬಕ್ಕೇ ಸಂಚಕಾರ ತಂದಿದೆ.
ಹುಟ್ಟುಹಬ್ಬದ ದಿನ ದರ್ಶನ್ ಮನೆಗೆ ಬಂದಿದ್ದ ಕೆಲವು ಅಭಿಮಾನಿಗಳು, ಪಕ್ಕದ ಮನೆಯವರ ಕಾರ್‍ನ್ನು ಗೀಚಿ ಕೆಡಿಸಿದ್ದಾರೆ. ಇನ್ನೂ ಕೆಲವರ ಮನೆಯ ಹೂಕುಂಡಗಳನ್ನು ಒಡೆದು ಹಾಕಿದ್ದಾರೆ. ಪಕ್ಕದ ಮನೆಯವರ ಕಾಂಪೌಂಡ್ ಹತ್ತಿ ಗಲೀಜು ಮಾಡಿದ್ದಾರೆ. ರಸ್ತೆಯಲ್ಲಿ ವಾಹನಗಳೂ ಚಲಿಸಲು ಅವಕಾಶ ನೀಡದೆ ಕಿರಿಕಿರಿ ಮಾಡಿದ್ದಾರೆ. ಕೆಲವರ ಮನೆಯ ಟೆರೇಸ್ ಹತ್ತಿ ಮನೆಯವರಿಗೇ ಕಿರಿಕಿರಿ ಮಾಡಿದ್ದಾರೆ. ಅಷ್ಟೇ ಅಲ್ಲ, ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಪೇದೆಯೊಬ್ಬರಿಗೆ ನೂಕುನುಗ್ಗಲಿನಲ್ಲಿ ಮೂಗು ಡ್ಯಾಮೇಜ್ ಆಗಿ ಆಸ್ಪತ್ರೆ ಸೇರಿದ್ದಾರೆ.
ಇದೆಲ್ಲದರ ಎಫೆಕ್ಟ್ `ಮುಂದಿನ ಬಾರಿ ದರ್ಶನ್ ಮನೆ ಎದುರು ಹುಟ್ಟುಹಬ್ಬದ ಸೆಲಬ್ರೇಷನ್ ಇಲ್ಲ'.
ದಕ್ಷಿಣ ವಲಯ ಡಿಸಿಪಿ ರಮೇಶ್ ಅವರೇ ಈ ಕುರಿತು ಹೇಳಿಕೆ ನೀಡಿದ್ದು ಇನ್ನು ಮುಂದೆ ದರ್ಶನ್ ಹುಟ್ಟುಹಬ್ಬದ ಸಾರ್ವಜನಿಕ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.