ಆರ್.ಎನ್. ಸುದರ್ಶನ್ ಎಂದರೆ ಪದೇ ಪದೇ ನೆನಪಾಗುವುದು ಅದೇ ಹಾಡು..ಅಪಾರ ಕೀರ್ತಿ ಗಳಿಸಿ ಮೆರೆವ ಭವ್ನ ನಾಡಿದು.. ಕರ್ನಾಟಕವಿದುವೆ ನೃತ್ಯಶಿಲ್ಪ ಕಲೆಯ ಬೀಡಿದು.. ಕುದುರೆಯ ಮೇಲೆ ಹಾಡುತ್ತಾ ಬಂದ ಆ ಹುಡುಗನನ್ನು ಚಿತ್ರರಸಿಕರು ಮೆಚ್ಚುಗೆಯಿಂದ ಅಪ್ಪಿಕೊಂಡಿದ್ದರು. ಬಹುಶಃ ಕನ್ನಡದ ಮೊದಲ ಆರಡಿ ನಟ ಎಂದರೆ ಆರ್.ಎನ್. ಸುದರ್ಶನ್ ಇರಬೇಕು. ಅಜಾನುಬಾಹು.
ಅವರ ಕುಟುಂಬವೂ ಹಾಗೆಯೇ..ಅದು ಕನ್ನಡದ ಅಪಾರ ಕೀರ್ತಿ ಗಳಿಸಿ ಮೆರೆದ ಕುಟುಂಬ. ರಂಗಭೂಮಿಯ ಭೀಷ್ಮ ಎಂದೇ ಖ್ಯಾತರಾದ ಆರ್.ಎನ್. ನಾಗೇಂದ್ರ ರಾವ್, ಸುದರ್ಶನ್ ಅವರ ತಂದೆ. ಖ್ಯಾತ ಛಾಯಾಗ್ರಾಹಕ ಕೃಷ್ಣಪ್ರಸಾದ್ ಮತ್ತು ಕನ್ನಡದ ಸುಮಧುರ ಗೀತೆಗಳ ಮೋಡಿಗಾರ ಆರ್.ಎನ್.ಜಯಗೋಪಾಲ್ ಅವರ ಸಹೋದರ. ಅವರ ಪತ್ನಿ ಶೈಲಶ್ರೀ ಕೂಡಾ ನಟಿಯಾಗಿದ್ದವರು.
ವಿಶೇಷವೆಂದರೆ, ಅವರಿಗೆ ಶೂಟಿಂಗ್ ಸೆಟ್ಗಳಲ್ಲಿ ಬಳಸುತ್ತಿದ್ದ ಪೇಂಯ್ಟ್ನ ವಾಸನೆ ಸೋಕಿದರೇ ಆಗುತ್ತಿರಲಿಲ್ಲ. ಸೆಟ್ಗಳಲ್ಲಿ ಬಳಸುತ್ತಿದ್ದ ಪರಿಕರಗಳ ಶಬ್ಧವೆಂದರೆ ಕಿರಿಕಿರಿ. ಆದರೆ, ಅದೇ ಚಿತ್ರರಂಗದಲ್ಲಿ ಅವರು ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶಿಸಿದರು. ಸ್ವತಃ ನಿರ್ಮಾಪಕರಾದರು. ಆದರೆ, ಕೊನೆ ಕೊನೆಯ ದಿನಗಳಲ್ಲಿ ಚಿತ್ರರಂಗ ಅವರನ್ನು ಮರೆತೇ ಹೋಗಿತ್ತು.
ಅದ್ಭುತ ಕಂಠಸಿರಿಯಿದ್ದ ಸುದರ್ಶನ್ ಗಾಯಕರೂ ಹೌದು. ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..ಹಾಡು ಕೇಳಿದರೆ ಶ್ರೀನಾಥ್ ನೆನಪಾಗುತ್ತರಲ್ಲವೇ. ಆ ಹಾಡಿನ ಹಿಂದಿನ ಧ್ವನಿ ಸುದರ್ಶನ್. ನಗುವ ಹೂವು ಚಿತ್ರದ ಇರಬೇಕು...ಇರಬೇಕು..ಅರಿಯದ ಮಗುವಿನ ಹಾಗೆ ಎನ್ನುವ ಹಾಡು ಕೂಡಾ ಜನಪ್ರಿಯವಾಗಿತ್ತು.
ಏರ್ಹೋಸ್ಟೆಸ್ ಆಗಿದ್ದ ಶೈಲಶ್ರೀ, ನಂತರ ಸುದರ್ಶನ್ ಚಿತ್ರಗಳಲ್ಲಿ ನಾಯಕಿಯಾದರು. ಚಿತ್ರಗಳ ಮೂಲಕ ಪರಿಚಯ ಬೆಳೆದು, ಪ್ರೀತಿಯಾಗಿ ಮದುವೆಯೂ ಆದರು. ಮಕ್ಕಳಿರಲಿಲ್ಲ. ಪ್ರೀತಿಯೇ ಬದುಕಾಗಿತ್ತು. ಅವರದ್ದು ಸುದೀರ್ಘ ಸುಖೀ ದಾಂಪತ್ಯ. 21ನೇ ವಯಸ್ಸಿನಿಂದ 78ನೇ ವಯಸ್ಸಿನವರೆಗೆ ಬಣ್ಣದ ಬದುಕಿನಲ್ಲಿಯೇ ಇದ್ದ ಸುದರ್ಶನ್, ಹಳೆಯ ಕಲಾವಿದರು, ತಂತ್ರಜ್ಞರನ್ನು ಮರೆಯಬೇಡಿ ಎಂದು ಚಿತ್ರರಂಗವನ್ನು ಕೇಳಿಕೊಂಡಿದ್ದರು. ಕನ್ನಡ ಚಿತ್ರರಂಗದ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಕುಟುಂಬದ ಕಲಾವಿದರೊಬ್ಬರು ಹಾಗೆ ಅಂಗಲಾಚುವ ಪರಿಸ್ಥಿತಿ ಬರಬಾರದಿತ್ತು.
ಅವರ ಸಂಕಷ್ಟದ ದಿನಗಳಲ್ಲಿ ನೆರವಿನ ಹಸ್ತ ಚಾಚಿದ್ದವರು ನಟ ಜಗ್ಗೇಶ್. ನಂತರ ಅವರ ನಟನೆಯ ಮಠ ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಂಗ ಪ್ರವೇಶಿಸಿದ್ದ ಸುದರ್ಶನ್, ಸ್ವಾಮೀಜಿ ಪಾತ್ರದಲ್ಲಲಿ ಮನಸೂರೆಗೊಂಡಿದ್ದರು. ಪೋಷಕ ಪಾತ್ರಗಳಿಗೆ ಹೇಳಿ ಮಾಡಿಸಿದ ಹಾಗಿದ್ದ ಸುದರ್ಶನ್ ಅವರ ವ್ಯಕ್ತಿತ್ವದಲ್ಲೊಂದು ಘನತೆಯಿತ್ತು.
ತಮಿಳಿನ ಪಾಯಂ ಪುಲಿ, ಸಂಧಿಪು, ಪುನ್ನಗೈ ಮನ್ನನ್, ವೇಲೈಕಾರನ್, ನಾಯಗನ್, ಪಾರಿಜಾತಮ್ ಸುದರ್ಶನ್ ನಟಿಸಿದ್ದ ತಮಿಳು ಚಿತ್ರಗಳ ಪೈಕಿ ಕೆಲವು. ಮಲಯಾಳಂನಲ್ಲಿ ಜಾಕ್ಪಾಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಸುದರ್ಶನ್, ತೆಲುಗಿನ ಮಾಯಾ ಮಚ್ಚಿಂದ್ರ, ಮೈ ಡಿಯರ್ ಭೂತಮ್, ತಮಿಳಿನ ಮರಗಥಾ ವೀಣೈ, ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಗಳಲ್ಲಿ ನಟಿಸಿದ್ದರು.
ವಿಜಯನಗರದ ವೀರಪುತ್ರ ಚಿತ್ರದ ವೀರ ಸೈನಿಕ, ಪ್ರಚಂಡ ಕುಳ್ಳ ಚಿತ್ರದ ಕಿಂಕಿಣಿ ಶರ್ಮ, ಮಠ ಚಿತ್ರದ ಸ್ವಾಮೀಜಿ, ಸೂಪರ್ ಚಿತ್ರದಲ್ಲಿ ಉಪೇಂದ್ರ ಅವರ ತಂದೆ..ಸುದರ್ಶನ್ ಅವರ ಅಭಿನಯ ಪ್ರತಿಭೆಗೆ ಈ ಕೆಲವು ಪಾತ್ರಗಳು ಸಾಕು. ಆದರೆ, ಕಲಾವಿದನ ಆ ಬದುಕಿಗೆ ಕಲಾ ಜಗತ್ತು ಸೂಕ್ತ ಬೆಲೆ ಕೊಡಲಿಲ್ಲ ಎಂಬುದು ವಾಸ್ತವ.