ಶಿವರಾಜ್ ಕುಮಾರ್ ಇತ್ತೀಚೆಗೆ ಪದ್ಮಾವತಿ ಚಿತ್ರದ ಕುರಿತು ಹೇಳಿಕೆ ನೀಡಿದ್ದರು. ಸಂಜಯ್ ಲೀಲಾ ಬನ್ಸಾಲಿ ಒಬ್ಬ ಉತ್ತಮ ನಿರ್ದೇಶಕ. ಪದ್ಮಾವತಿ ಚಿತ್ರದ ಬಗ್ಗೆ ಬಿಡುಗಡೆಗೆ ಮುನ್ನವೇ ಮಾತನಾಡಬೇಡಿ. ಚಿತ್ರದಲ್ಲಿ ಏನಿದೆ..ಏನಿಲ್ಲ ಎಂದು ಮೊದಲು ನೋಡಿ. ಚಿತ್ರವನ್ನೇ ನೋಡದೆ, ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲದೆ ಚಿತ್ರವನ್ನು ಟೀಕಿಸಬೇಡಿ ಎಂದಿದ್ದರು. ಆ ಮೂಲಕ ಬನ್ಸಾಲಿಗೆ ಬೆಂಬಲ ಘೋಷಿಸಿದ್ದರು.
ಶಿವಣ್ಣನವರ ಈ ಹೇಳಿಕೆ, ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ. ಇದಕ್ಕೂ ಮೊದಲು ಕೆಲವರು ಬೆಂಬಲ ವ್ಯಕ್ತಪಡಿಸಿದ್ದು ನಿಜ. ಆದರೆ, ಸ್ಟಾರ್ ನಟರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡುವ ಸಾಹಸ ಮಾಡಿರಲಿಲ್ಲ. ಶಿವಣ್ಣ ಇಂಥಾದ್ದೊಂದು ಹೇಳಿಕೆ ನೀಡಿದ್ದೇ ತಡ, ಪದ್ಮಾವತಿ ವಿರುದ್ಧ ಆ್ಯಕ್ಟಿವ್ ಆಗಿರುವವರು ಶಿವಣ್ಣ ವಿರುದ್ಧ ತಿರುಗಿಬಿದ್ದಿದ್ದಾರೆ.
ನಿಮಗ್ಯಾಕೆ, ಊರ ಉಸಾಬರಿ..? ಎಂದು ಕೆಲವರು ಪ್ರಶ್ನಿಸಿದ್ದಾರೆ. ನಿಮ್ಮ ತಂದೆ ಮಯೂರ, ಶ್ರೀಕೃಷ್ಣದೇವರಾಯದಂತಹ ಸಿನಿಮಾ ಮಾಡಿ, ಹಿಂದೂ ಸಂಸ್ಕøತಿಯನ್ನು ಎತ್ತಿ ಹಿಡಿದು ಅಣ್ಣಾವ್ರಾದರು ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.
ಇನ್ನೂ ಕೆಲವರು ಶಿವರಾಜ್ ಕುಮಾರ್ ಬೆಂಬಲಕ್ಕೆ ಬಂದಿದ್ದಾರೆ. ಶಿವಣ್ಣ ಹೇಳಿರೋದ್ರಲ್ಲಿ ತಪ್ಪೇನಿಲ್ಲ. ಸಿನಿಮಾದಲ್ಲಿ ಏನಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ರಿಲೀಸ್‍ಗೆ ಮುಂಚೆ ಹೀಗ್ಯಾಕೆ ಕೂಗಾಡ್ತಾರೋ ಅರ್ಥವಾಗುತ್ತಿಲ್ಲ. ಶಿವರಾಜ್ ಕುಮಾರ್ ಈಸ್ ರೈಟ್ ಎಂದಿದ್ದಾರೆ.
ಈ ಟ್ರೋಲ್‍ಗಳಿಗೆಲ್ಲ ಶಿವರಾಜ್ ಕುಮಾರ್ ಹೇಳಿರೋದು ಇಷ್ಟೆ. ಆ ಸಿನಿಮಾ ರಿಲೀಸ್ ಆಗುತ್ತೆ. ಆಗ, ಚಿತ್ರದಲ್ಲಿ ಇವರು ಹೇಳ್ತಿರೋ ರೀತಿ ಪದ್ಮಾವತಿಯನ್ನು ತಪ್ಪಾಗಿ ತೋರಿಸಿಲ್ಲ ಎಂದರೆ, ಆಗ ಏನು ಮಾಡ್ತಾರೆ..? ಇದು ಅವರು ಕೇಳುತ್ತಿರುವ ಪ್ರಶ್ನೆ. ನನ್ನ ವಿರುದ್ಧ ಟ್ರೋಲ್ ಮಾಡುವುದರಿಂದ ನನಗೇನೂ ಆಗೋದಿಲ್ಲ. ಒಬ್ಬ ಕಲಾವಿದನಾಗಿ ಇನ್ನೊಬ್ಬ ಕಲಾವಿದನಿಗೆ ಬೆಂಬಲ ನೀಡಿದ್ದೇನೆ. ನಾನು ಪ್ರಾಮಾಣಿಕವಾಗಿದ್ದೇನೆ ಎಂದಿದ್ದಾರೆ.