ಅವಮಾನಗಳು ಒಬ್ಬರನ್ನು ಹೇಗೆಲ್ಲ ಕಾಡ್ತವೆ ಅನ್ನೋದನ್ನ ಹೇಳಬೇಕಿಲ್ಲ. ಸ್ಟಾರ್‍ಗಳಾದರೂ.. ಹಣ, ಖ್ಯಾತಿ ಎಲ್ಲ ಬಂದರೂ.. ಅನುಭವಿಸಿದ ಅವಮಾನಗಳು ಕಾಡುತ್ತಲೇ ಇರುತ್ತವೆ. ತೆಲುಗು ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ತಮ್ಮ ಆಚಾರ್ಯ ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಅಂಥಾದ್ದೊಂದು ಅವಮಾನ ಅನುಭವಿಸಿದ ಕಥೆ ಹೇಳಿಕೊಂಡಿದ್ದಾರೆ.
ಚಿರು ಹೇಳಿದ ಆ ಅವಮಾನದ ಕಥೆ : ನನಗೆ ರುದ್ರವೀಣಾ ಚಿತ್ರಕ್ಕೆ ನರ್ಗಿಸ್ ದತ್ ಚಿತ್ರ ಪ್ರಶಸ್ತಿ ಬಂದಿತ್ತು. ರಾಷ್ಟ್ರೀಯ ಪ್ರಶಸ್ತಿ. ತಮ್ಮ ನಾಗಬಾಬು ನಿರ್ಮಿಸಿದ್ದ ಚಿತ್ರವದು. ಖುಷಿಯಾಗಿಯೇ ದೆಹಲಿಗೆ ಹೋಗಿದ್ದೆ. ಅಲ್ಲಿ ಎಲ್ಲ ಕಡೆ ಕಲಾವಿದರ ಪೋಸ್ಟರ್ ಇಟ್ಟಿದ್ದರು. ಅಲ್ಲಿ ದಿಲೀಪ್ ಕುಮಾರ್, ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲ ಹಿಂದಿ ನಟರ ಪೋಸ್ಟರ್ ಇದ್ದವು. ಅವೆಲ್ಲವನ್ನೂ ನೋಡುತ್ತಾ ಖುಷಿಯಾಗಿಯೇ ಮುಂದೆ ಹೋದಾಗ ನಮ್ಮ ದಕ್ಷಿಣ ಭಾರತದ ಚಿತ್ರಗಳನ್ನು ನೋಡುವ ಕಾತುರವೂ ಇತ್ತು. ಆದರೆ..
ಅಲ್ಲಿ ಇದ್ದದ್ದು ಎರಡೇ ಪೋಸ್ಟರ್. ಒಂದು ಎಂಜಿಆರ್ ಮತ್ತು ಜಯಲಲಿತಾ ನೃತ್ಯದ ಭಂಗಿಯಲ್ಲಿದ್ದ ಒಂದು ಪೋಸ್ಟರ್ ಮತ್ತು ಮತ್ತೊಂದು ಮಲಯಾಳಂನಲ್ಲಿ ಗಿನ್ನಿಸ್ ದಾಖಲೆ ಬರೆದಿರುವ ನಟ ಪ್ರೇಮ್ ನಜೀರ್ ಅವರ ಪೋಸ್ಟರ್. ಅಷ್ಟೇನಾ ಸೌಥ್ ಸಿನಿಮಾ ಎನ್ನಿಸಿತ್ತು. ಅಲ್ಲಿ ಕನ್ನಡ ಕಂಠೀರವ ಡಾ.ರಾಜಕುಮಾರ್, ವಿಷ್ಣುವರ್ಧನ್ ಫೋಟೋ ಇರಲಿಲ್ಲ. ನಮ್ಮ ಎನ್‍ಟಿಆರ್, ನಾಗೇಶ್ವರ ರಾವ್, ಶಿವಾಜಿ ಗಣೇಶನ್.. ಯಾರೊಬ್ಬರ ಫೋಟೋಗಳೂ ಇರಲಿಲ್ಲ. ನಂತರ ಚೆನ್ನೈಗೆ ಬಂದು ಪ್ರೆಸ್‍ಮೀಟ್ ಮಾಡಿ ಅದೆಲ್ಲವನ್ನೂ ಹೇಳಿದೆ. ಆದರೆ.. ಅದಕ್ಕೆ ಕನಿಷ್ಠ ಪ್ರತಿಕ್ರಿಯೆಯೂ ಯಾರಿಂದಲೂ ಬರಲಿಲ್ಲ.
ರಾಜಮೌಳಿ ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ : ಆ ಅವಮಾನದ ಕಥೆ ಹಾಗೆಯೇ ಇತ್ತು. ಅದಾದ ನಂತರ ಈಗ ಅವರೆಲ್ಲರನ್ನೂ ನಮ್ಮ ತೆಲುಗು ಚಿತ್ರರಂಗದತ್ತ ನೋಡುತ್ತಿದ್ದಾರೆ. ರಾಜಮೌಳಿ ಈಗ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ. ಈಗ ನಾವು ನೋಡುತ್ತಿರೋದು ಇಂಡಿಯನ್ ಸಿನಿಮಾ. ಸಿನಿಮಾ ಎನ್ನುವುದು ಧರ್ಮ ಎನ್ನುವುದಾದರೆ ಆ ಧರ್ಮಕ್ಕೆ ಪೀಠಾಧಿಪತಿ ರಾಜಮೌಳಿ.
ಅವರೆಲ್ಲರನ್ನೂ ಅಭಿನಂದಿಸಿದ ಚಿರು : ರಾಜಮೌಳಿ ಅಷ್ಟೇ ಅಲ್ಲ, ದಕ್ಷಿಣ ಭಾರತ ಚಿತ್ರರಂಗ ಪುಷ್ಪ ಮಾಡಿದೆ. ಕೆಜಿಎಫ್ ಮಾಡಿದೆ. ಸುಕುಮಾರ್, ಪ್ರಶಾಂತ್ ನೀಲ್, ಅಲ್ಲು ಅರ್ಜುನ್, ರಾಮ್ ಚರಣ್, ಪ್ರಭಾಸ್, ಯಶ್ ಎಲ್ಲರೂ ಈಗ ಪ್ಯಾನ್ ಇಂಡಿಯಾ ಸ್ಟಾರ್‍ಗಳೇ. ನಿಜವಾದ ಇಂಡಿಯನ್ ಸಿನಿಮಾಗಳಿವು.