ನಾನೂ ಒಂದು ಸಿನಿಮಾ ಮಾಡಬೇಕು ಎಂದು ಗಾಂಧಿನಗರಕ್ಕೆ ಬರುವವರ ಸಂಖ್ಯೆಗೇನೂ ಕೊರತೆಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ, ಸಾಹಿತ್ಯ.. ಎಲ್ಲ ಗೊತ್ತಿದ್ದರೂ.. ನಿರ್ಮಾಪಕರೇ ಸಿಕ್ಕೋದಿಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದೆ. ಆದರೆ, ಜೇಬಲ್ಲಿ ಹಣ ಇರೋಲ್ಲ. ಏನ್ ಮಾಡೋದು..? ಅಂಥವರು ಒಮ್ಮೆ ಕಾಫಿತೋಟ ನಿರ್ಮಾಣವಾದ ಕಥೆ ತಿಳಿದುಕೊಳ್ಳಬೇಕು.
ಸೀತಾರಾಮ್ ಆಗಷ್ಟೇ ಸೀರಿಯಲ್ಲೊಂದನ್ನು ಮುಗಿಸಿ ಕುಳಿತಿದ್ದರು. ಬಿಡುವಿನಲ್ಲಿದ್ದ ಸಮಯದಲ್ಲಿ ನಾನೊಂದು ಸಿನಿಮಾ ಮಾಡಬೇಕು ಎನ್ನಿಸೋಕೆ ಶುರುವಾಯಿತು. ಕಥೆ ಬರೆಯೋಕೆ ಶುರುವಿಟ್ಟುಕೊಂಡರು. ಕೆಲವು ಕಥೆಗಳು ಸಿದ್ಧವಾದವು. ಆ ಸಮಯದಲ್ಲೇ ನಿರ್ದೇಶಕ ಯೋಗರಾಜ್ ಭಟ್, ಸೀತಾರಾಮ್ ಮನೆಗೆ ಹೋದರು. ಕಥೆ ಕೇಳಿ ಥ್ರಿಲ್ಲಾದ ಭಟ್ಟರು, ನಿರ್ಮಾಪಕರನ್ನು ಕ್ಯೂ ನಿಲ್ಲಿಸಿಬಿಡುತ್ತೇನೆ ಎಂದರಂತೆ. ಅದು ಸೀತಾರಾಮ್ಗೆ ಸಿಕ್ಕ ಮೊದಲ ಸ್ಫೂರ್ತಿ.
ಅದಾದ ನಂತರ ಸೀತಾರಾಮ್, ತಮ್ಮದೇ ಫೇಸ್ಬುಕ್ನಲ್ಲಿ ನಾನೊಂದು ಸಿನಿಮಾ ಮಾಡಲು ಹೊರಟಿದ್ದೇನೆ. ಯೋಗರಾಜ್ ಭಟ್ಟರು ನನ್ನ ಜೊತೆ ಇರುತ್ತಾರೆ.ಯಾರಾದರೂ ದುಡ್ಡು ಹಾಕಬಹುದು ಎಂಬ ಒಂದು ಸ್ಟೇಟಸ್ ಹಾಕಿದರು. ಇನ್ಬಾಕ್ಸ್ನಲ್ಲಿ ನಿರ್ಮಾಪಕರಾಗಲು ಕ್ಯೂ ಸಿದ್ಧವಾಯ್ತು. ಸುಮಾರು 600ರಿಂದ 700 ಜನ ಹಣ ಹಾಕಲು ಮುಂದೆ ಬಂದರು. ಅದು ಎರಡನೇ ಸ್ಫೂರ್ತಿ.
ಆದರೆ, ಸೀತಾರಾಮ್ಗೆ ಒಳಗೊಳಗೇ ಸಣ್ಣದೊಂದು ಆತಂಕ. ಅಕಸ್ಮಾತ್ ನಷ್ಟವಾದರೆ.. ಆಗ ಸೀತಾರಾಮ್, ಒಬ್ಬರ ಬಳಿ ಬೇಡ. ತುಂಬಾ ಜನರಾದರೆ, ಅಕಸ್ಮಾತ್ ನಷ್ಟವಾದರೂ ಚಿಂತೆಯಿಲ್ಲ ಎಂದು ಯೋಚಿಸಿದರು. ಆಯ್ದು ಆಯ್ದು ಕೆಲವು ನಿರ್ಮಾಪಕರನ್ನು ಆಯ್ಕೆ ಮಾಡಿದರು. ಅಂದಹಾಗೆ ಕಾಫಿತೋಟ ಚಿತ್ರಕ್ಕೆ ಒಟ್ಟು 29 ಜನ ನಿರ್ಮಾಪಕರು. ದೊಡ್ಡ ಮೊತ್ತ ಹಾಕಿರುವವರು ರಾಮಚಂದ್ರ.
ರಾಮಚಂದ್ರ ಎಂಬ ನಿರ್ಮಾಪಕ ಸಿಕ್ಕಿದ್ದೂ ಅಷ್ಟೇ ಸ್ವಾರಸ್ಯಕಾರಿ ಕಥೆ. ಅವರು ಸಿಕ್ಕಿದ್ದು ಪುಸ್ತಕದಂಗಡಿಯಲ್ಲಿ. ಮೊದಲಿನಿಂದ ಪರಿಚಯವಿದ್ದವರೇನೂ ಅಲ್ಲ. ಪುಸ್ತಕದಂಗಡಿಯಲ್ಲಿ ಸಿಕ್ಕು ಮಾತನಾಡಿದ ಮೇಲೆ ರಾಮಚಂದ್ರ, ಮತದಾನ ಚಿತ್ರದ ಕುರಿತು ಮಾತನಾಡಿದರಂತೆ. ನಿಮ್ಮ ಮುಂದಿನ ಸಿನಿಮಾಗೆ ನಾನೇ ದುಡ್ಡು ಹಾಕುತ್ತೇನೆ ಎಂದರಂತೆ. ಹೀಗೆ ಶುರುವಾಯ್ತು ಸಿನಿಮಾ ನಿರ್ಮಾಣ.
ಮೊದಲು ಇದ್ದ 80 ಲಕ್ಷದ ಬಜೆಟ್, 3 ಕೋಟಿ ದಾಟಿತು. 50 ಸಾವಿರ ಹಣ ಹಾಕುತ್ತೇನೆ ಎಂದಿದ್ದವರು 10 ಲಕ್ಷದವರೆಗೆ ಹಣ ಹಾಕಿದರು. ಎಲ್ಲರೂ ಗೆಳೆಯರೇ. ನಷ್ಟವಾದರೂ ಯೋಚನೆ ಮಾಡಬೇಡಿ. ನಿಮ್ಮ ಮೇಲಿನ ಅಭಿಮಾನದಿಂದ ಹಣ ಹಾಕಿದ್ದೇವೆ ಎಂದಿದ್ದಾರೆ ನಿರ್ಮಾಪಕರು.
ಚಿತ್ರ ಸಿದ್ಧವಾಗಿದೆ. ಆಗಸ್ಟ್ 18ಕ್ಕೆ ಥಿಯೇಟರುಗಳಲ್ಲಿ ಕಾಫಿತೋಟ ಇರುತ್ತೆ. ಸೀತಾರಾಮ್ ಜೊತೆ ಯೋಗರಾಜ್ ಭಟ್ಟರು, ಜಯಂತ್ ಕಾಯ್ಕಿಣಿ, ಜೋಗಿ ಹಾಡು ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ಕುತೂಹಲ ಹುಟ್ಟಿಸುವ ಹಾಗಿದೆ. ಸೀತಾರಾಮ್, ಕಾಫಿತೋಟದಲ್ಲಿ ಒಂದೊಳ್ಳೆ ಕಾಫಿ ಕುಡಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಥಿಯೇಟರಿಗೆ ನುಗ್ಗಬಹುದು.