ಕೆಲವು ಪತ್ರಿಕೆಗಳಲ್ಲಿ ಅವರು ತಿಳಿಸಿರುವಂತೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರಿಂದ ಅವರ ಚಾರಿತ್ರ್ಯವಧೆಯಾಗಿಲ್ಲ. ಬದಲಿಗೆ ಅವರು ಇನ್ನೂ ಮರುಪರಿಶೀಲನಾ ಸಮಿತಿ(ರಿವೈಸ್ ಕಮಿಟಿ) ಮುಂದಿರುವ ಸಿನಿಮಾ ಬಗ್ಗೆ ಇದೊಂದು ಭಿನ್ನ ಪ್ರಯೋಗ ಎಂಬ ಹೇಳಿಕೆ ನೀಡಿ ಪ್ರಭಾವ ಬೀರಲೆತ್ನಿಸಿ ಮತ್ತು ನನಗೆ ಟಿವಿ ಮಾಧ್ಯಮದ ಮೂಲಕ ಅಧಿಕಪ್ರಸಂಗತನ ಎಂಬ ಆರೋಪ ಹೊರಿಸುವ ಮೂಲಕ ತಮ್ಮ ಅಂತರಾಷ್ಟ್ರೀಯ ಖ್ಯಾತಿಯ ಚಾರಿತ್ರ್ಯ ವಧೆಯನ್ನು ತಾವೇ ಮಾಡಿಕೊಂಡಿರುತ್ತಾರೆ. ಈ ಕೂಡಲೇ ಅವರು ಆ ಸಿನಿಮಾ ಬಗ್ಗೆ ಹೇಳಿಕೆ ಕೊಡುವುದನ್ನು ನಿಲ್ಲಿಸಿ ಅಧಿಕಪ್ರಸಂಗಿತನ ಎಂದು ನನ್ನನ್ನು ಹೀಯಾಳಿಸಿರುವುದಕ್ಕೆ ಮಾಧ್ಯಮಗಳ ಮೂಲಕ ಕ್ಷಮೆ ಯಾಚಿಸಬೇಕು.
ಇಲ್ಲಿ ಕೆಲವು ವಿಷಯಗಳನ್ನು ತಮ್ಮೆಲ್ಲರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಯಾವುದೇ ಚಿತ್ರ ಪರಿಶೀಲನಾ ಸಮಿತಿ ಮುಂದೆ ಬಂದ ನಂತರ ಅದರ ನಿರ್ಧಾರವನ್ನು ಪ್ರಕಟಪಡಿಸಿದ ಮೇಲೆ ಸಂಬಂಧಪಟ್ಟ ನಿರ್ಮಾಪಕರು ಅಥವಾ ನಿರ್ದೇಶಕರು ಅದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇಲ್ಲ. ಅದನ್ನು ಮರುಪರಿಶೀಲನಾ ಸಮಿತಿಗೆ ಒಪ್ಪಿಸಿಸಬೇಕೇ ವಿನಃ ಮಾಧ್ಯಮದ ಮೂಲಕ ಅವರಾಗಲೀ ಅವರ ಕಡೆಯವರಾಗಲೀ ಹೇಳಿಕೆಗಳನ್ನು ನೀಡಿ ಮರುಪರಿಶೀಲನಾ ಸಮಿತಿಯ ಸದಸ್ಯರುಗಳ ಮೇಲೆ ಪ್ರಭಾವ ಬೀರುವಂತಿಲ್ಲ. ಇದು ವಸ್ತುನಿಷ್ಟವಾಗಿ ಒಂದು ಚಿತ್ರವನ್ನು ಪರಿಶೀಲಿಸಲು ಮಾಡಿರುವ ವ್ಯವಸ್ಥೆ. ಇಂಥ ಸನ್ನಿವೇಶದಲ್ಲಿ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಆ ಚಿತ್ರಕ್ಕೆ ತಮ್ಮ ಸರ್ಟಿಫಿಕೇಟ್ ಕೊಡುವುದರ ಜೊತೆಗೆ ಸೆನ್ಸಾರ್ ಮಂಡಳಿಯ ಸದಸ್ಯರ ಮೇಲೆ ಜಗತ್ತಿನ ಸಿನಿಮಾಗಳಲ್ಲಿ ನಡೆಯುತ್ತಿರುವ ಪ್ರಯೋಗಗಳನ್ನು ಗಮನಿಸಬೇಕು ಎಂಬ ಉಪದೇಶದ ಜೊತೆಗೆ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ತಕರಾರು ಎಂದು ಮೂದಲಿಸಿರುವುದು ದುರದೃಷ್ಟಕರ. ಇವರಿಗೆ ತಮ್ಮ ಇಂತಹ ಹೇಳಿಕೆಯಿಂದ ಮರುಪರಿಶೀಲನಾ ಸಮಿತಿ ಸದಸ್ಯರ ಮೇಲೆ ಪ್ರಭಾವ ಮತ್ತು ಒತ್ತಡ ಹೇರಿದಂತಾಗುತ್ತದೆ ಎಂಬ ಸೂಕ್ಷ್ಮಪ್ರಜ್ಞೆ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಮರುಪರಿಶೀಲನಾ ಸಮಿತಿಯ ನಿರ್ಧಾರದ ನಂತರ ಅವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಲು ಸ್ವತಂತ್ರರಾಗಿರುತ್ತಾರೆ. ಇದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲ ಬದಲಾಗಿ ಸಮಯಪ್ರಜ್ಞೆಯ ವಿಚಾರವಷ್ಟೇ.
ಇನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಿಬಿಎಫ್ ಸಿ ಯನ್ನು ಸೆನ್ಸಾರ್ ಮಂಡಳಿಯೇ ಅಲ್ಲ ಎನ್ನುತ್ತಾ ಅದರ ವ್ಯಾಪ್ತಿಯ ಬಗ್ಗೆ ತಪ್ಪುಕಲ್ಪನೆ ಹೊಂದಿದ್ದಾರೆ ಮತ್ತು ಅದರ ವ್ಯಾಪ್ತಿಯನ್ನು ಸೀಮಿತಗೊಳಿಸಿ ವ್ಯಂಗ್ಯವಾಡಿದ್ದಾರೆ. ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ, ೧೯೮೩ ರಲ್ಲಿ ಸೆನ್ಸಾರ್ ಬೋರ್ಡ್ ಅಂತ ಇದ್ದುದನ್ನು ಕೇಂದ್ರ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಮರುನೇಮಕ ಮಾಡಲಾಯಿತು. ಇದನ್ನು ನಾನು ನನ್ನ ಅಧಿಕಾರವಹಿಸಿಕೊಂಡ ಮೊದಲನೇ ದಿನವೇ ಮಾಧ್ಯಮದ ಮೂಲಕ ಎಲ್ಲರಿಗೂ ಸ್ಪಷ್ಟಪಡಿಸಿದ್ದೆ. ಇಲ್ಲಿ ಗಮನಿಸಬೇಕಾದುದೇನೆಂದರೆ, ಹೆಸರಷ್ಟೇ ಬದಲಾಯಿತೇ ವಿನಃ ಇವತ್ತಿಗೂ ಸಾವಿರದ ಒಂಬೈನೂರ ಐವತ್ತೆರಡರ ಸಿನಿಮಾಟಾಗ್ರಾಫ್ ಕಾಯಿದೆ ಮತ್ತು ಅದರ ನಿಯಮಾವಳಿಗಳ ಪ್ರಕಾರವೇ ಕಾರ್ಯನಿರ್ವಹಿಸ ಬೇಕಾಗಿದೆ. (ಸೆನ್ಸಾರ್ ಅನ್ನುವುದು ಒಂದು ರೀತಿ ಕತ್ತರಿಪ್ರಯೋಗ ಎಂಬ ನೆಗೆಟಿವ್ ಧೋರಣೆ ಬಿಂಬಿಸುತ್ತದೆ ಎನ್ನುವ ಸದುದ್ದೇಶದಿಂದ ಹೆಸರನ್ನು ಬದಲಾಯಿಸಲಾಯಿತು.) ಅದರಂತೆ ಸೆಕ್ಷನ್ ೫ಬಿ ನೋಟಿಫಿಕೇಶನ್ ೧ಇ ಪ್ರಕಾರ ಯಾವುದೇ ಚಿತ್ರವೂ ಈಸ್ತೆಟಿಕ್ ವ್ಯಾಲ್ಯೂ ಮತ್ತು ಸಿನಿಮ್ಯಾಟಿಕಲಿ ಗುಡ್ ಸ್ಟಾಂಡರ್ಡ್ ಇರಬೇಕು. ಈ ಗೈಡ್ ಲೈನ್ ಪ್ರಕಾರ ಆ ಸಿನಿಮಾವನ್ನು ತಿರಸ್ಕರಿಸಲಾಯಿತು. ಇಲ್ಲಿ ಈ ತೀರ್ಮಾನ ಅವರಿಗೆ ಒಪ್ಪಿಗೆಯಾಗದಿದ್ದಲ್ಲಿ ಅದನ್ನು ಮರುಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅವಕಾಶವನ್ನೂ ಕಾಯಿದೆಯೇ ಮಾಡಿಕೊಟ್ಟಿದೆ. ಕಾಯಿದೆಯಲ್ಲಿ ಡಾಕ್ಯುಮೆಂಟರಿ ಮತ್ತು ಫೀಚರ್ ಫಿಲಂ ಎಂದಷ್ಟೇ ವರ್ಗೀಕರಣವಿರುವುದು. ಇವರಿಗೆ ಪ್ರಯೋಗಾತ್ಮಕ ಚಿತ್ರ ಬೇಕಿದ್ದರೆ ಮೊದಲು ಅವರು ಕಾನೂನನ್ನು ಬದಲಿಸಿ ಅದರಲ್ಲಿ ಭಿನ್ನ ಪ್ರಯೋಗದ ಚಿತ್ರಗಳ ಬಗ್ಗೆ ಪ್ರತ್ಯೇಕ ಕ್ಲಾಸಿಫಿಕೇಶನ್ ಸೇರಿಸಲು ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಮಂಡಳಿಯ ಸದಸ್ಯರ ಮೇಲೆ ಹರಿಹಾಯುವುದು ಎಷ್ಟು ಸರಿ?
ಇನ್ನು ಸಬ್ಸಿಡಿಯ ಬಗ್ಗೆ ನಾನು ಮಾತನಾಡಿರುವುದನ್ನು ಗಿರೀಶ್ ಕಾಸರವಳ್ಳಿ ಅಧಿಕಪ್ರಸಂಗತನ ಎಂದು ಕರೆದಿರುವುದು ನಿಜಕ್ಕೂ ಹಾಸ್ಯಾಸ್ಪದ. ಈ ದೇಶದ ಯಾವುದೇ ಸಾಮಾನ್ಯಪ್ರಜೆಯೂ ಸರ್ಕಾರದ ಹಣ ದುರುಪಯೋಗವಾಗುವಾಗ ಅದನ್ನು ಸರಿಯಾದ ರೀತಿ ಬಳಸಲು ಸಲಹೆ ಕೊಡುವ ಹಕ್ಕು ಇದೆ. ಅದರಲ್ಲೂ ನಾನು ಮಂಡಳಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ ನನ್ನ ಗಮನಕ್ಕೆ ಬಂದ ಅಂಶಗಳನ್ನು ಸಲಹೆಯರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಸ್ವತಂತ್ರನಿದ್ದೇನೆ ಮತ್ತು ಅದು ನನ್ನ ಜವಾಬ್ದಾರಿಯೂ ಹೌದು. ಆದರೆ ಆ ಸಲಹೆಗಳನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಇಷ್ಟು ಸಣ್ಣ ವಿಷಯ ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಿಗೆ ತಿಳಿಯಲಿಲ್ಲವೇ?
ಇನ್ನು ಗಾಳಿಬೀಜ ಸಿನಿಮಾಕ್ಕೆ ಸಂಬಂಧಿಸಿದಂತೆ ಅರ್ಥವಾಗಲಿಲ್ಲ ಎಂದು ನಾನು ಎಲ್ಲಿಯೂ ಹೇಳಲಿಲ್ಲ. ಅದರಲ್ಲಿ ಅರ್ಥ ಇಲ್ಲ ಎಂದೇ ಹೇಳಿರುವುದು. ಇದನ್ನು ತಿರುಚಿ ನಮಗೆ ಅರ್ಥ ಮಾಡಿಕೊಳ್ಳಲು ಅಸಮರ್ಥರು ಎಂಬಂತೆ ಮಾತನಾಡಿರುವುದು ಅವರ ಅಹಂ ಅನ್ನು ತೋರಿಸುತ್ತದೆ. ಅವರ ದೃಷ್ಟಿಯಲ್ಲಿ ವಾಣಿಜ್ಯಸಿನಿಮಾಗಳು ಮತ್ತು ಅದನ್ನು ನೋಡುವವರನ್ನು ಅಪಮೌಲ್ಯಗೊಳಿಸುವ ಒಂದು ದನಿಯಿದೆ. ವಸ್ತುಸ್ಥಿತಿ ಎಂದರೆ ಈ ದಿನ ಸಿನಿಮಾ ಉದ್ಯಮ ನಿಂತಿರುವುದು ಬೆಳೆಯುತ್ತಿರುವುದು ಸಾವಿರಾರು ಜನಕ್ಕೆ ಅನ್ನ ನೀಡುತ್ತಿರುವುದು ಈ ವಾಣಿಜ್ಯ ಸಿನಿಮಾಗಳೇ. ಅಂದ ಮಾತ್ರಕ್ಕೆ ಕಲಾಸಿನಿಮಾಗಳ ಬಗ್ಗೆ ನನ್ನ ಅಭಿಮತವಿಲ್ಲ ಎಂದಲ್ಲ. ನನಗೂ ಎಷ್ಟೋ ವರುಷಗಳಿಂದ ಎಲ್ಲಾ ಭಾಷೆಯ ಕಲಾ ಸಿನಿಮಾಗಳ ಹಲವು ಹತ್ತು ಭಿನ್ನ ಪ್ರಯೋಗಗಳನ್ನು ನೋಡಿದ ಅನುಭವವಿದೆ. ಆದರೆ ಒಂದು ಸಂಸ್ಕೃತಿಯನ್ನು ಬೆಳೆಸಲು ಕಲಾಸಿನಿಮಾದ ಪಾತ್ರವಿದ್ದಂತೆ ವಾಣಿಜ್ಯಸಿನಿಮಾಗಳ ಪಾತ್ರವನ್ನೂ ಅಲ್ಲಗಳೆಯಲಾಗುವುದಿಲ್ಲ. ಇನ್ನು ಗಾಳಿಬೀಜದ ಬಗ್ಗೆ ಒಂದು ಮಾತು-ಇದನ್ನು ನಾನು ಮಂಡಳಿಯ ಅಧಿಕಾರಿಯಾಗಿ ಹೇಳುತ್ತಿಲ್ಲ ಸಾಮಾನ್ಯ ಸಿನಿಮಾ ಪ್ರೇಕ್ಷಕನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಇದೊಂದು ಛಿದ್ರಛಿದ್ರ ಚಿತ್ರಗಳ ಮತ್ತು ಅಸಮರ್ಪಕ ಸಂಭಾಷಣೆಯ ಚಿತ್ರ. ಇಡೀ ಚಿತ್ರದಲ್ಲಿ ಹದಿನೈದರಿಂದ ಇಪ್ಪತ್ತು ಡೈಲಾಗ್ ಇರಬಹುದು. ನನ್ನ ಸಲಹೆ ಏನೆಂದರೆ ಅಷ್ಟೂ ಸಂಭಾಷಣೆಗಳನ್ನು ತೆಗೆದು ಚಿತ್ರ ನೋಡಿದರೆ ಪ್ರಾಯಶಃ ಅಲ್ಲಿಯ ಛಿದ್ರ ಛಿದ್ರ ಚಿತ್ರಗಳಿಗೆ ಒಂದು ಆಯಾಮ ದೊರೆತು ಅರ್ಥಪೂರ್ಣವಾಗುತ್ತದೆ. ಜೊತೆಗೆ ಸಂಭಾಷಣೆಯೇ ಇಲ್ಲದೆ ದೃಶ್ಯ ಮತ್ತು ಶಬ್ದಗಳ ಮೂಲಕವೇ ಸಂವಹಿಸುವ ವಿಭಿನ್ನ ಸಿನಿಮಾವಾಗುತ್ತಿತ್ತು. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಇವರಿಗೆ ಸಿನಿಮಾಗಳ ಜ್ಞಾನವೇ ಇಲ್ಲ ಮತ್ತು ಜಗತ್ತಿನ ಸಿನಿಮಾಗಳ ಪ್ರಯೋಗ ಗೊತ್ತಿಲ್ಲ ಎಂದಿರುವುದಕ್ಕೆ ಕ್ರಿಯಾಶೀಲ ಸಲಹೆ ಅಷ್ಟೆ. ಹಾಗಾಗಿ ಚಿತ್ರ ಅರ್ಥವಾಗದಿರುವಷ್ಟು ಅಪ್ರಬುದ್ಧರಲ್ಲ ಎನ್ನುವುದು ಅವರಿಗೆ ತಿಳಿಯಲಿ ಮತ್ತು ಯಾವುದೇ ಸಂದರ್ಭದಲ್ಲೂ ಮಂಡಳಿಯು ಕನ್ನಡ ಸಿನಿಮಾಗಳ ಬೆಳವಣಿಗೆ ಮತ್ತು ಗುಣಮಟ್ಟಕ್ಕೆ ಶ್ರಮಿಸುತ್ತದೆ. ಅಲ್ಲದೆ ನಿರ್ಮಾಪಕರು ಮತ್ತು ನಿರ್ದೇಶಕರ ಒತ್ತಾಸೆಗೆ ಪೂರಕವಾಗಿಯೇ ಕಾರ್ಯನಿರ್ವಹಿಸುತ್ತದೆಯೇ ಹೊರತು ಯಾವುದೇ ರೀತಿಯ ಪ್ರಯೋಗಗಳಿಗೆ ಅಡ್ಡಿ ಆಗಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ.
M NAGENDRASWAMY
REGIOAL OFFICER