ಅದು ಆಕ್ರೋಶವಾ.. ಅದು ಹತಾಶೆಯಾ.. ಅದು ಅಸಹಾಯಕತೆಯಾ.. ಕನ್ನಡಿಗರಿಗೆ ಯಮುನಾ ಎಂಬ ನಟಿ ರವಿಚಂದ್ರನ್ ಜೊತೆಗಿನ ಚಿನ್ನ, ಶಿವರಾಜ್ ಕುಮಾರ್ ಜೊತೆಗೆ ನಟಿಸಿದ್ದ ಮೋಡದ ಮರೆಯಲ್ಲಿ ಚಿತ್ರದ ಮೂಲಕ ಗೊತ್ತು. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ದೊಡ್ಡ ಹೆಸರು ಮಾಡಿದ್ದ ನಟಿ ಮೂಲತಃ ಕನ್ನಡತಿಯೇ. ಇಂತಹ ಯಮನಾ ಅವರಿಗೆ 12 ವರ್ಷಗಳ ಹಿಂದೆ ಆಘಾತವೊಂದು ಸಂಭವಿಸಿತ್ತು. ಬೆಂಗಳೂರಿನ ಐಷಾರಾಮಿ ಹೋಟೆಲ್ನಲ್ಲಿ ನಾಲ್ಕು ಮಹಡಿಗಳನ್ನು ಬಾಡಿಗೆ ಪಡೆದುಕೊಂಡು, ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಪೊಲೀಸರು ರೇಡ್ ಮಾಡಿ, ನಟಿ ಯಮುನಾರನ್ನು ವಶಕ್ಕೆ ಪಡೆದಿದ್ದರು. ಅರೆಸ್ಟ್ ಕೂಡಾ ಆಗಿದ್ದರು. ಆದರೆ ಯಮುನಾ ಹೋರಾಟ ಬಿಟ್ಟಿರಲಿಲ್ಲ. ನಾನು ಆ ಕೀಳು ಕೆಲಸ ಮಾಡಿಲ್ಲ. ನಾನು ವೇಶ್ಯಾವಾಟಿಕೆ ನಡೆಸಿಲ್ಲ. ಪೊಲೀಸರ ಆರೋಪ ಸುಳ್ಳು ಎಂದು ಕೋರ್ಟಿನಲ್ಲಿ ವಾದ ಮಾಡಿದ್ದಷ್ಟೇ ಅಲ್ಲ, ಕೇಸ್`ನ್ನೂ ಗೆದ್ದಿದ್ದರು ಯಮುನಾ. ಆದರೆ ಯಮುನಾ ಪೊಲೀಸ್, ಕೋರ್ಟುಗಳಲ್ಲಿ ಗೆದ್ದರೂ ಸೋಷಿಯಲ್ ಮೀಡಿಯಾ ಅವರನ್ನು ಬಿಟ್ಟಿಲ್ಲ. ಇಂದಿಗೂ ಯಮುನಾ ಅವರ ಹೆಸರು, ಫೋಟೋ, ವಿಡಿಯೋಗಳು ಮತ್ತೆ ಮತ್ತೆ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಕೆಟ್ಟಾಕೊಳಕ ಭಾಷೆಯಲ್ಲಿ ಯಮುನಾ ಅವರನ್ನು ಟೀಕಿಸಲಾಗುತ್ತದೆ. ಇದರ ಬಗೆ ಸ್ವತಃ ಯಮುನಾ ಮಾತನಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ. ಜೀವನದಲ್ಲಿ ನನ್ನನ್ನು ನಾನು ಎಷ್ಟು ಮೋಟಿವೇಟ್ ಮಾಡಿಕೊಂಡರೂ ಕಾಡುತ್ತಿರುವುದು ಒಂದೇ ನೋವು. ಇಷ್ಟು ವರ್ಷವಾದರೂ ಆ ನೋವು ನನ್ನಲ್ಲಿ ಉಳಿದು ಬಿಟ್ಟಿದೆ. ಪದೇ ಪದೇ ನೋವಾಗಲು ಕಾರಣ ಸೋಷಿಯಲ್ ಮೀಡಿಯಾ. ಬಹಳ ವರ್ಷಗಳ ಹಿಂದೆಯೇ ದೊಡ್ಡ ಸಮಸ್ಯೆಯೊಂದನ್ನು ಎದುರಿಸಿ ಅದರಿಂದ ಹೊರ ಬಂದು ನಿಶ್ಚಿಂತೆಯಿಂದ ಜೀವನ ನಡೆಸುತ್ತಿರುವೆ. ಆ ಸಮಸ್ಯೆಯಲ್ಲಿ ಹೇಗೆ ಸಿಲುಕಿಕೊಂಡೆ ಎಂದು ಈಗಾಗಲೇ ಅನೇಕ ಸಂದರ್ಶನದಲ್ಲಿ ಹೇಳಿಕೊಂಡು, ನಾನಾ ರೀತಿಯಲ್ಲಿ ಕ್ಲಾರಿಟಿ ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಸ್ವತಃ ಕೋರ್ಟ್ ಕೂಡ ನನಗೆ ಕ್ಲೀನ್ ಚಿಟ್ ಕೊಟ್ಟಿದೆ. ನನ್ನನ್ನು ನ್ಯಾಯ ಗೆಲ್ಲಿಸಿದೆ. ನ್ಯಾಯಯುತವಾಗಿ ನಾನು ಗೆಲ್ಲುವು ಸಾಧಿಸಿರುವೆ. ಆದರೆ ಸಾಮಾಜಿಕ ಜಾಲತಾಣವನ್ನು ನಾನು ಕಂಟ್ರೋಲ್ ಮಾಡಲು ಆಗುತ್ತಿಲ್ಲ. ಇಂದಿಗೂ ಅ ಘಟನೆ ಬಗ್ಗೆ ವಿವಿಧ ರೀತಿಯಲ್ಲಿ ಥಂಬ್ನೇಲ್ನ ಸೃಷ್ಟಿಸಿ, ಸಂಬಂಧ ಇಲ್ಲದ ರೀತಿಯಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಅದಕ್ಕೆ ಸಂಬಂಧ ಪಟ್ಟ ಯಾವುದೇ ವಿಡಿಯೋ ನೋಡಲ್ಲ. ಅದರಲ್ಲಿ ಏನೋ ಇದೆ ಎಂದು ಜನರು ನೋಡಬಹುದು ಆದರೆ ನಾನು ಮುಟ್ಟುವುದಿಲ್ಲ. ವಿಡಿಯೋದಲ್ಲಿ ಏನೂ ಇಲ್ಲವಾದರೂ, ಥಂಬ್ನೇಲ್ಸ್ ಮಾತ್ರ ನನಗೆ ತುಂಬಾ ನೋವು ಕೊಡುತ್ತಿದೆ. ನಾನು ಕೂಡ ಮನುಷ್ಯಳೇ ಅಲ್ವಾ? ಆ ಥಂಬ್ನೇಲ್ಸ್ ನೋಡಿದರೆ ಏನೋ ಗೊತ್ತಿಲ್ಲದ ನೋವು ಅಗುತ್ತದೆ. ನಾನು ಸತ್ತರೂ ಜನರು ಆ ಒಂದು ಘಟನೆಯನ್ನು ಬಿಡುವುದಿಲ್ಲ ಅನಿಸುತ್ತದೆ
ಸುದ್ದಿ ಚಾನೆಲ್ಲುಗಳು ಈ ಬಗ್ಗೆ ನಾನು ಸ್ಪಷ್ಟನೆ ಕೊಟ್ಟ ನಂತರ ಸುಮ್ಮನಾದವು. ನ್ಯೂಸ್ ಚಾನೆಲ್ಲುಗಳಿಗೆ ಅರ್ಥವಾದ ಸತ್ಯ ಸೋಷಿಯಲ್ ಮೀಡಿಯಾದವರಿಗೆ ಏಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ ಎನ್ನುವ ಮೂಲಕ ಸೋಷಿಯಲ್ ಮೀಡಿಯಾದವರ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಯಮುನಾ ಅವರು ಕೋರ್ಟಿನಲ್ಲಿ ಗೆದ್ದಿರುವುದು ನಿಜ. ಆರೋಪ ಮುಕ್ತರಾಗಿರುವುದೂ ನಿಜ. ಯಮುನಾ ಅವರು ನಿರ್ದೋಷಿ ಎಂದು ನ್ಯಾಯಾಲಯ ಹೇಳಿರುವುದು ಕೂಡಾ ನಿಜ.