ಜಾಕಿ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಭಾವನಾ, ಈಗ ಕನ್ನಡತಿಯೇ. ಕರ್ನಾಟಕದ ಸೊಸೆಯಾಗಿರುವ ಭಾವನಾ ಮದುವೆಯ ನಂತರ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸಕ್ರಿಯರಾಗಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಹೆಸರು ಪಿಂಕ್ ನೋಟ್.
ಪಿಂಕ್ ನೋಟ್ ಎಂದರೆ ಜನಸಾಮಾನ್ಯರ ಮಾತಿನಲ್ಲಿ 2 ಸಾವಿರ ರೂ. ನೋಟು ಎಂದರ್ಥ. ಅದೇ ಹಿನ್ನೆಲೆಯಲ್ಲಿ ಚಿತ್ರಕ್ಕೆ ಪಿಂಕ್ ನೋಟ್ ಅನ್ನೋ ಟೈಟಲ್ ಇಟ್ಟಿದ್ದಾರೆ ಡೈರೆಕ್ಟರ್ ರಕ್ಷಣ್. ರಕ್ಷಣ್ ಅವರ ವೊರಿಜಿನಲ್ ಹೆಸರು ರುದ್ರೇಶ್. ಜ್ಯೋತಿಷ್ಯದ ಕಾರಣಕ್ಕಾಗಿ ಹೆಸರು ಬದಲಿಸಿಕೊಂಡಿದ್ದಾರೆ.
ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡುತ್ತಿರುವ ರಕ್ಷಣ್ ಅವರು ಕಥೆಗೆ ಆಯ್ಕೆ ಮಾಡಿಕೊಂಡಿರೋದು 2010ರಲ್ಲಿ ಮಂಗಳೂರಿನಲ್ಲಿ ನಡೆದ ಘಟನಾವಳಿಗಳನ್ನು. ಮಧ್ಯಮವರ್ಗದ ಮನೆಯ ಅಕ್ಕ-ತಂಗಿ ಪಾತ್ರದಲ್ಲಿ ಭಾವನಾ ನಟಿಸುತ್ತಿದ್ದಾರೆ. ದ್ವಿಪಾತ್ರ ಎನ್ನುವುದು ಬಿಟ್ಟರೆ, ಉಳಿದಂತೆ ಕಥೆ ಸೀಕ್ರೆಟ್ ಆಗಿಯೇ ಇದೆ.
ದುಬೈನ ರಾಸೆಲ್‍ರೈಖ್, ಉಡುಪಿ, ಮಲ್ಪೆ, ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಪೊಲಿಟಿಕಲ್ ಲೀಡರ್ ಹೆಚ್.ಆನಂದಪ್ಪ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.