ಕೆಜಿಎಫ್ ಚಾಪ್ಟರ್ 2ನಲ್ಲಿ ಬರೋ ಪಾತ್ರಗಳ ಜೊತೆ ನೀವು ಮಾತನಾಡಬಹುದು. ಗೇಮ್ ಆಡಬಹುದು. ಓಡಾಡಬಹುದು... ಇದು ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್. ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳಬೇಡಿ. ಡಿಜಿಟಲ್ ಕ್ರಾಂತಿಯ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ಇದಕ್ಕಾಗಿಯೇ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಹೊಸ ವರ್ಚುವಲ್ ಜಗತ್ತನ್ನೇ ಸೃಷ್ಟಿಸಿದೆ. ಅದೇ ಕೆಜಿಎಫ್ ವರ್ಸ್.
ಮೆಟಾವರ್ಸ್ ಅನ್ನೋದು ವರ್ಚುವಲ್ ಜಗತ್ತಿನ ಒಂದು ವರ್ಷನ್. ಅದರಲ್ಲಿಯೇ ಕೆಜಿಎಫ್ ಟೀಂ ಕೆಜಿಎಫ್ ವರ್ಸ್ ಸೃಷ್ಟಿಸಿದೆ. ಏಪ್ರಿಲ್ 7ನೇ ತಾರೀಕು ಅದಕ್ಕೆ ಸಂಬಂಧಪಟ್ಟಂತೆ ವೆಬ್‍ಸೈಟ್ ಅನಾವರಣವಾಗಲಿದೆ. ನೀವು ಆ ವೆಬ್‍ಸೈಟ್‍ಗೆ ಭೇಟಿ ಕೊಟ್ಟು, ಟೋಕನ್ ಪಡೆದರೆ ಆಯಿತು. ಚಿತ್ರದಲ್ಲಿ ಬರೋ ರಾಕೀಭಾಯ್, ರೀನಾ, ಅಧೀರ, ರುಮಿಕಾ ಸೇನ್.. ಹೀಗೆ ಪ್ರತಿಯೊಂದು ಪಾತ್ರಗಳೂ ನಿಮ್ಮನ್ನು ಎದುರುಗೊಳ್ಳಲಿವೆ.
ಚಿತ್ರದಲ್ಲಿರೋ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಅವರ ವರ್ಚುವಲ್ ಪಾತ್ರಗಳು ನಿಮ್ಮೊಂದಿಗೆ ಆಟವಾಡುತ್ತವೆ. ಮಾತನಾಡುತ್ತವೆ. ಓಡಾಡುತ್ತವೆ.. ಇದೆಲ್ಲವೂ ಪ್ರಶಾಂತ್ ನೀಲ್ ಅವರ ಕಲ್ಪನೆ. ಇನ್ನೂ ಅನುಮಾನವಿದ್ದರೆ.. ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿದ್ದರೆ.. ತಲೆಕೆಡಿಸಿಕೊಳ್ಳಬೇಡಿ. ಏಪ್ರಿಲ್ 7ರವರೆಗೆ ಕಾಯಿರಿ.