ಈಗ ಆಕ್ಷನ್ ಸಿನಿಮಾಗಳ ಕಾಲ. ಕೆಜಿಎಫ್, ಪುಷ್ಪ, ಕಾಂತಾರ, ಪಠಾಣ್, ಜವಾನ್, ಜೈಲರ್, ವೇದ, ಸಲಾರ್.. ಹೀಗೆ ಎಲ್ಲರೂ ಒಂದರ ಹಿಂದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾಗಳ ಬೆನ್ನು ಹಿಡಿದು ಸಾಗುತ್ತಿರುವಾಗ.. ಅಂತಹ ಚಿತ್ರಗಳೇ ಹಿಟ್ ಆಗುತ್ತಿರುವಾಗ ಮತ್ತೊಮ್ಮೆ ರೂಲ್ಸ್ ಬ್ರೇಕ್ ಮಾಡಿದ್ದಾರೆ ರಕ್ಷಿತ್ ಶೆಟ್ಟಿ & ಹೇಮಂತ್ ರಾವ್ ಜೋಡಿ.
ಸಪ್ತಸಾಗರದಾಚೆ ಎಲ್ಲೋ.. ಸಿನಿಮಾ.. ಒಂದು ಕವಿತೆಯಂತ ಪ್ರೇಮ ಕಥೆ. ಕವಿತೆ ಎಂದುಕೊಂಡರೆ ಕವಿತೆ. ಕಥೆ ಎಂದುಕೊಂಡರೆ ಕಥೆ. ಭಾವನೆಗಳದ್ದೇ ಆಕ್ಷನ್ ಸೀಕ್ವೆನ್ಸ್. ಅಬ್ಬರವಿಲ್ಲದ ಡೈಲಾಗ್ಸ್. ಮಾತಿನಲ್ಲೇ ರೋಮಾಂಚನಗೊಳಿಸುವ ಮನು ಮತ್ತು ಪ್ರಿಯಾ. ಆ ಮಾತುಗಳಲ್ಲಿ ಒಂದು ತುಂಟತನ.. ಹೃದಯವನ್ನೇ ತುಂಬಿಕೊಳ್ಳುವ ಪ್ರೇಮ.. ಕಣ್ಣುಗಳಲ್ಲೇ ನಡೆಯೋ ಸಂಭಾಷಣೆ.. ಹೇಮಂತ್ ರಾವ್ ರೆಗ್ಯುಲರ್ ಜಾನರ್ ಬ್ರೇಕ್ ಮಾಡಿದ್ದಾರೆ. ಅವರ ಪ್ರೇಮಕಥೆಗೆ ಜೀವ ತುಂಬಿರೋದು ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್.
ಪ್ರೇಮಕಥೆಯನ್ನೂ ಇಂಟ್ರೆಸ್ಟಿಂಗ್ ಆಗಿ..ಇಂಟೆನ್ಸಿವ್ ಆಗಿ ಹೇಳಿರುವ ಹೇಮಂತ್ ರಾವ್ ಎರಡನೇ ಭಾಗಕ್ಕೆ ಕಾಯುವಂತೆ ಮಾಡಿದ್ದಾರೆ. ಇವತ್ತು ಥಿಯೇಟರಿಗೆ ಬರುತ್ತಿರೋ ಸಪ್ತಸಾಗರದಾಚೆ ಎಲ್ಲೋ.. ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿದೆ. ಹೃದಯವನ್ನು ಬಲವಾಗಿ ತಟ್ಟಿದೆ.
ಕತ್ತೆ ಮತ್ತು ಪುಟ್ಟಿ ಇಬ್ಬರ ಕೆಮಿಸ್ಟ್ರಿಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅವಿನಾಶ್, ಪವಿತ್ರಾ ಲೋಕೇಶ್, ಯಮುನಾ ಶ್ರೀನಿಧಿ, ಹರ್ಷಿಲ್ ಕೌಶಿಕ್, ಅಶ್ವಿನ್ ಹಾಸನ್, ಅಶೋಕ್ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ ಹೈಲೈಟ್ ಆಗುತ್ತಾರೆ. ಇನ್ನು, ಈ ಸಿನಿಮಾವನ್ನು ಎರಡು ಭಾಗಗಳಾಗಿ ಮಾಡಿರುವುದರ ಬಗ್ಗೆ ಹೇಳುವುದಾದರೆ, ಖಂಡಿತ ಪಾರ್ಟ್ 2ಕ್ಕೆ ಒಂದಷ್ಟು ಇಂಟರೆಸ್ಟಿಂಗ್ ಆಗಿರುವ ವಿಷಯಗಳನ್ನು ಹೇಮಂತ್ ಇಟ್ಟುಕೊಂಡಿದ್ದಾರೆ. ಮುಂದೇನಾಗಬಹುದು ಎಂಬ ಕುತೂಹಲವನ್ನು ಉಳಿಸಿಕೊಂಡು, ಪಾರ್ಟ್ 1 ಅನ್ನು ಮುಗಿಸಿದ್ದಾರೆ.