ಆಪ್ತಮಿತ್ರ, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ದ್ವಾರಕೀಶ್ ಚಿತ್ರದಲ್ಲಿ ಅತಿ ದೊಡ್ಡ ದಾಖಲೆ ಬರೆದ, ವಿಷ್ಣು ವೃತ್ತಿ ಜೀವನಕ್ಕೆ ಮತ್ತೊಂದು ಮೈಲಿಗಲ್ಲಾದ ಸಿನಿಮಾ. ಅದು ಮಲಯಾಳಂನ ಮಣಿಚಿತ್ರತ್ತಾಳ್ ಚಿತ್ರದ ರೀಮೇಕ್. ನಿರ್ದೇಶಕ ಪಿ.ವಾಸು ಇದೇ ಚಿತ್ರವನ್ನು ತಮಿಳಿನಲ್ಲೂ ನಿರ್ದೇಶಿಸಿದರು. ನಿರ್ಮಾಪಕ ದ್ವಾರಕೀಶ್ ಅವರಿಗೆ 18 ಚಿತ್ರಗಳ ಸತತ ಸೋಲಿನ ನಂತರ ಗೆಲುವು ಕೊಟ್ಟ ಸಿನಿಮಾ ಆಪ್ತಮಿತ್ರ. ತಮಿಳಿನಲ್ಲಿ ಇದೇ ಚಿತ್ರದ ರೀಮೇಕ್ ಚಂದ್ರಮುಖಿ, ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೂ ಲೈಫ್ ಕೊಟ್ಟಿತು. ಈಗ ಈ ಚಿತ್ರದ ಇನ್ನೊಂದು ಗುಟ್ಟು ಹೊರಬಿದ್ದಿದೆ.
ಆಪ್ತಮಿತ್ರ ಚಿತ್ರವನ್ನು ರವಿಚಂದ್ರನ್ ಮಾಡಬೇಕಿತ್ತಂತೆ. ಈ ವಿಷಯವನ್ನು ಸ್ವತಃ ರವಿಚಂದ್ರನ್ ಅವರೇ ಹೇಳಿರುವುದು ವಿಶೇಷ. ಆಯುಷ್ಮಾನ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್ ಆಪ್ತಮಿತ್ರ ಚಿತ್ರವನ್ನು ನಾನು ಮಾಡಬೇಕಿತ್ತು. ಕಥೆ ಇಷ್ಟವಾಗಿತ್ತು. ನಾನು ಹೆಜ್ಜೆ ಹಾಕುವ ಹೊತ್ತಿಗೆ ಅಲ್ಲಾಗಲೇ ಯೋಗೇಶ್ ಇದ್ರು. ನೀನೇ ಮಾಡು ಎಂದೆ. ಆಗಲೇ ಅವರಿಗೆ ಒಂದು ಮಾತು ಹೇಳಿದ್ದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ. ನೋಡ್ತಿರು ಎಂದಿದ್ದೆ ಎಂದಿದ್ದಾರೆ ರವಿಚಂದ್ರನ್.
ವಿಶೇಷ ಅಷ್ಟಕ್ಕೇ ಮುಗಿದಿಲ್ಲ. ಆಯುಷ್ಮಾನ್ ಭವ ಕೂಡಾ ಆಪ್ತಮಿತ್ರದಂತೆಯೇ ಹಿಟ್ ಆಗಲಿದೆ. ಏಕೆಂದರೆ ಸಿನಿಮಾ ಮಾಡಿದವರ ಮುಖದಲ್ಲಿ ಸಂಭ್ರಮವಿದೆ. ಚಿತ್ರದಲ್ಲಿ ಏನೋ ಒಂದು ವಿಶೇಷ ಕಾಣಿಸ್ತಿದೆ. ಇದೆಲ್ಲ ಇದ್ದಾಗ ಗೆಲುವಿಗೆ ಕಷ್ಟವಿಲ್ಲ. ಇದು ಕೂಡಾ ಆಪ್ತಮಿತ್ರದಂತೆಯೇ ಗೆಲುವು ಕಾಣಲಿದೆ ಎಂದಿದ್ದಾರೆ ರವಿಚಂದ್ರನ್.
ಅಂದಹಾಗೆ ರವಿಚಂದ್ರನ್ ಜ್ಯೋತಿಷಿಯಲ್ಲ. ಆದರೆ, ಇದುವರೆಗೆ ರವಿಚಂದ್ರನ್ ಹಿಟ್ ಆಗಲಿದೆ ಎಂದು ಹೇಳಿದ ಸಿನಿಮಾಗಳು ಸೋತ ಉದಾಹರಣೆ ಇಲ್ಲ. ಶಿವಣ್ಣ, ರಚಿತಾರಾಮ್, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ನಟಿಸಿರುವ ಪಿ.ವಾಸು ನಿರ್ದೇಶನದ ಸಿನಿಮಾ ಮತ್ತೊಂದು ಆಪ್ತಮಿತ್ರ ಆಗುತ್ತಾ..? ನವೆಂಬರ್ 1ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ ಆಯುಷ್ಮಾನ್ ಭವ.