ತಮಿಳರ ಆರಾಧ್ಯ ದೈವ ಸೂಪರ್ ಸ್ಟಾರ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..? ಇಂಥಾದ್ದೊಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿ.31ರಂದು ಅಧಿಕೃತ ಘೋಷಣೆ ಮಾಡೋದಾಗಿ ಹೇಳಿದ್ದ ರಜಿನಿಕಾಂತ್, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಬೇರೆ ರಾಜ್ಯದವರು ತಮಿಳುನಾಡನ್ನು ಆಡಿಕೊಂಡು ಗೇಲಿ ಮಾಡುವಾಗ ನನಗೆ ಬೇಸರವಾಗುತ್ತೆ. ರಾಜಕಾರಣಿಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮನ್ನೇ ಲೂಟಿ ಮಾಡಿ, ಉದ್ಧಾರಕರಂತೆ ತೋರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಏನಾದರೂ ಬದಲಾವಣೆ ಮಾಡಬೇಕು ಎನ್ನಿಸಿ ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಘೋಷಿಸಿದ್ದಾರೆ ರಜಿನಿಕಾಂತ್.
ಅಭಿಮಾನಿಗಳ ಜೊತೆ ನಿರಂತರ ಸಂವಾದ ನಡೆಸುತ್ತಿದ್ದ ರಜನಿ, ನನಗೆ ಈಗಲೂ ತಮಿಳು ಕನ್ನಡದಷ್ಟು ಸರಾಗವಾಗಿ ಬರುವುದಿಲ್ಲ. ತಮಿಳು ನನಗೆ ಅನ್ನ ಕೊಟ್ಟ ಭಾಷೆ. ಗುರುಗಳಾದ ಬಾಲಚಂದರ್ ಅವರ ಸಲಹೆಯಂತೆ ನಾನು ತಮಿಳು ಕಲಿತೆ ಎಂದಿದ್ದ ರಜಿನಿ, ತಮ್ಮ ಕನ್ನಡತನವನ್ನು ಮೆರೆದಿದ್ದರು. ಮನೆ ಮಾತು ಕನ್ನಡ ಎಂದಿದ್ದ ರಜನಿಕಾಂತ್, ಡಾ.ರಾಜ್ ಕುಮಾರ್ ಮೇಲಿನ ಅಭಿಮಾನವನ್ನೂ ಮುಕ್ತವಾಗಿ ಹೇಳಿಕೊಂಡಿದ್ದರು.
ಭಾಷೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಮಿಳಿಗರ ಎದುರು ರಜನಿಕಾಂತ್ ನೀಡಿದ್ದ ಈ ಹೇಳಿಕೆಗಳು, ರಜಿನಿ ರಾಜಕೀಯಕ್ಕೆ ಬರುವುದೇ ಇಲ್ಲ ಎಂಬ ಧ್ವನಿಗೆ ಮಹತ್ವ ಕೊಟ್ಟಿದ್ದವು. ಆದರೆ, ಅವೆಲ್ಲವನ್ನೂ ಸುಳ್ಳು ಮಾಡುವಂತೆ ರಜಿನಿಕಾಂತ್ ತಮ್ಮ ರಾಜಕೀಯ ಪ್ರವೇಶ ಘೋಷಿಸಿದ್ದಾರೆ.
ಇಷ್ಟು ದಿನ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದ ರಜಿನಿಕಾಂತ್, ಈಗ ಅಧಿಕೃತವಾಗಿ, ಅನುಮಾನಕ್ಕೆ ಅವಕಾಶವೇ ಇಲ್ಲದಂತೆ ತಮ್ಮ ರಾಜಕೀಯ ಪ್ರವೇಶ ಘೋಷಿಸಿದ್ದಾರೆ.