ಬೆಂಕಿಯಲ್ಲಿ ಅರಳಿದ ಹೂವು, 1983ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಕೆ. ಬಾಲಚಂದರ್ ನಿರ್ದೇಶನದ ಆ ಸಿನಿಮಾದಲ್ಲಿ ಸುಹಾಸಿನಿಯೇ ನಾಯಕಿ ಹಾಗೂ ನಾಯಕ. ಆ ಚಿತ್ರದಲ್ಲಿ ಸುಹಾಸಿನಿ ಅವರ ಸೋದರ ಕಮಲ್‍ಹಾಸನ್ ಒಂದು ಹಾಡಿನಲ್ಲಿ ಬಂದು ಹೋಗ್ತಾರೆ. ಬಸ್ ಕಂಡಕ್ಟರ್ ಆಗಿ ಬರೋ ಕಮಲ್‍ಹಾಸನ್ ಹಾಡುವ ಮುಂದೆ ಬನ್ನಿ.. ಮುಂದೆ ಬನ್ನಿ.. ಹಾಡು ಇಂದಿಗೂ ಜನಪ್ರಿಯ. ಆ ಹಾಡು ಮರುಸೃಷ್ಟಿಯಾಗಿದೆ.
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ರಾಜರಥದಲ್ಲಿ ಈ ಹಾಡನ್ನು ಮರುಸೃಷ್ಟಿ ಮಾಡಲಾಗಿದೆ. ಈ ಹಾಡಿಗೆ ಧ್ವನಿ ನೀಡಿರುವುದು ಸ್ವತಃ ಅನೂಪ್ ಭಂಡಾರಿ. ಆ ಹಾಡನ್ನು ಬಿಡುಗಡೆ ಮಾಡಿರುವುದು ರಾಕಿಂಗ್ ಸ್ಟಾರ್ ಯಶ್.
ಆ ಹಾಡಿನಲ್ಲಿ ಬರುವ ``ಕನ್ನಡ ನಾಡಲಿ ನೀನು ಕನ್ನಡ ಮಾತಾಡು.. ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು'' ಲೈನ್ ತುಂಬಾ ಇಷ್ಟ ಎಂದಿರುವ ರಾಕಿಂಗ್ ಸ್ಟಾರ್‍ಗೆ ತುಂಬಾ ಇಷ್ಟವಾಗಿದ್ದು ಚಿತ್ರದ ಹಾಡಿನ ಮೇಕಿಂಗ್. ಚಿತ್ರದ ಮೇಕಿಂಗ್ ಇಂಟರ್‍ನ್ಯಾಷನಲ್ ಲೆವೆಲ್ಲಿನಲ್ಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಯಶ್.
ಇಷ್ಟೆಲ್ಲ ಇರುವ ಇರುವ ಹಿಟ್ ಆಗದೇ ಇರುತ್ತಾ..? ಸೂಪರ್ ಹಿಟ್ ಆಗಿಬಿಟ್ಟಿದೆ. ಆನ್‍ಲೈನ್‍ನಲ್ಲಿ ಟ್ರೆಂಡ್ ಕೂಡಾ ಆಗಿದೆ. ಅಷ್ಟೇ ಅಲ್ಲ, ಈ ಹಾಡು ಚಿತ್ರದ ಕುರಿತ ನಿರೀಕ್ಷೆಗಳನ್ನೂ ಹೆಚ್ಚಿಸಿದೆ.
ಮೂಲ ಚಿತ್ರದಲ್ಲಿ ಅಂದರೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಸಂಗೀತ ನೀಡಿದ್ದವರು ಎಲ್.ವೈದ್ಯನಾಥನ್. ಸಾಹಿತ್ಯ ಒದಗಿಸಿದ್ದವರು ಚಿ.ಉದಯಶಂಕರ್. ರಾಜರಥ ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಭಂಡಾರಿ. ಗಾಯಕರೂ ಅವರೇ. ಆ ಚಿತ್ರದ ಈ ಹಾಡಿನ ಸೃಷ್ಟಿಕರ್ತರಿಗೆ ಕ್ರೆಡಿಟ್‍ನ್ನೂ ನೀಡಿರುವ ರಾಜರಥ ಟೀಂ, ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧವಾಗಿದೆ.