` 2018 election - chitraloka.com | Kannada Movie News, Reviews | Image

2018 election

 • ಪಕ್ಷಾತೀತ ಪ್ರಚಾರಕ್ಕೆ ಯಶ್ ಎಂಟ್ರಿ

  yash campaigns for few candidates

  ರಾಕಿಂಗ್ ಸ್ಟಾರ್ ಯಶ್, ಪ್ರಚಾರದ ಕಣಕ್ಕೆ ಧುಮುಕಿದ್ದಾರೆ. ನನಗೆ ರಾಜಕೀಯ ಆಸೆಗಳಿಲ್ಲ. ಆದರೆ, ಯಾವುದೇ ಅಭ್ಯರ್ಥಿ, ಚುನಾವಣೆ ಗೆದ್ದ ನಂತರವೂ ನಾನು ಕೇಳುವ ಜನರ ಪ್ರಶ್ನೆ, ಸಮಸ್ಯೆಗಳಿಗೆ ಉತ್ತರಿಸುವ ಭರವಸೆ ಕೊಡುತ್ತಾರೋ, ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಘೋಷಿಸಿದ್ದ ಯಶ್, ಈಗ ಅಧಿಕೃತವಾಗಿ ಪ್ರಚಾರದ ಕಣಕ್ಕೆ ಧುಮುಕಿದ್ದಾರೆ. ಪಕ್ಷಾತೀತವಾಗಿ.

  ಯಶ್ ಪ್ರಚಾರಕ್ಕೆ ಹೋಗುತ್ತಿರುವ ನಾಯಕರಲ್ಲಿ ಎಲ್ಲ ಪಕ್ಷದವರೂ ಇರುವುದು ವಿಶೇಷ. ಕಾಂಗ್ರೆಸ್‍ನ ಎಂ.ಬಿ.ಪಾಟೀಲ್ (ಬಬಲೇಶ್ವರ ಕ್ಷೇತ್ರ), ವಿನಯ್ ಕುಲಕರ್ಣಿ (ಧಾರವಾಡ) ಬಿಜೆಪಿಯಿಂದ ಸಿ.ಎಂ.ಉದಾಸಿ(ಹಾನಗಲ್), ಜ್ಯೋತಿ ಗಣೇಶ್(ತುಮಕೂರು ನಗರ), ರಾಮದಾಸ್(ಕೃಷ್ಣರಾಜ), ಸತೀಶ್ ರೆಡ್ಡಿ(ಬೊಮ್ಮನಹಳ್ಳಿ) ಹಾಗೂ ಜೆಡಿಎಸ್‍ನಿಂದ ಸಾ.ರಾ.ಮಹೇಶ್(ಕೆ.ಆರ್.ನಗರ) ಪರ ಯಶ್ ಪ್ರಚಾರ ನಡೆಸಲಿದ್ದಾರೆ.

 • ಭಟ್ಟರ ಹಾಡಿನಲ್ಲಿರೋದು ನಾವು.. ನೀವು.. 

  yogaraj bhatt's elections song

  ನಿರ್ದೇಶಕ ಯೋಗರಾಜ್ ಭಟ್, ಜನರ ಮನಸ್ಸನ್ನು ಅರಿಯೋದ್ರಲ್ಲಿ ಎತ್ತಿದ ಕೈ. ಮನಸ್ಸಿನಲ್ಲಿರೋದನ್ನು ಅಕ್ಷರ ರೂಪಕ್ಕಿಳಿಸೋದ್ರಲ್ಲಿ ಖ್ಯಾತರಾಗಿರುವ ಭಟ್ಟರು, ಈ ಬಾರಿಯೂ ಅದನ್ನೇ ಮಾಡಿದ್ದಾರೆ. ಪಂಚತಂತ್ರ ಚಿತ್ರ ತಂಡದಿಂದ ಮತದಾರರ ಮನಸ್ಸು ಮುಟ್ಟುವ ಹಾಡೊಂದನ್ನು ಬರೆದು ಮತದಾರರ ಮುಂದಿಟ್ಟಿದ್ದಾರೆ.

  ಅಮೂಲ್ಯವಾದ ಮತದಾನ ಮಾಡಿಸಲು ಚುನಾವಣಾ ಆಯೋಗಕ್ಕೂ ಒಂದು ವಿಶೇಷ ಹಾಡು ಸಂಯೋಜಸಿ ಕೊಟ್ಟಿದ್ದ ಯೋಗರಾಜ್ ಭಟ್ಟರದ್ದು, ಇದು 2ನೇ ಗೀತೆ. ಗೀತೆಯನ್ನೊಮ್ಮೆ ಓದಿಕೊಂಡು ಬಿಡಿ.

  ಯಾವನಿಗ್ ವೋಟ್ಹಾಕೋದೋ ಗೊತ್ತಾಗ್ತಾ ಇಲ್ಲ

  ಹಂಗಂತ ಸುಮ್ನೆ ಕುಂತ್ರೆ ತಪ್ಪಾಗ್ತದಲ್ಲ..

  ಯಾರನ್ನ ಕಂಡ್ರೂ ನಮ್ಗೆ ಸೆಟ್ಟಾಗ್ತಾ ಇಲ್ಲ..

  ಹಾಳೂರಿಗುಳಿದವ್ನ್ ಯಾರೋ ಗೊತ್ತಾಗ್ತಾ ಇಲ್ಲ

  ಕಾಂಪಿಟೇಶನ್ನಲ್ಲಿ ಹೇಳ್ತಾರೆ ಸುಳ್ಳನ್ನ

  ಕಾಪಾಡ್ತಾರಾ ಇವ್ರು ನಿಜವಾಗ್ಲು ನಮ್ಮನ್ನ

  ಐದು ವರ್ಷಕ್ಕೊಮ್ಮೆ ಮನೆಗೇ ಬರ್ತಾರಣ್ಣ

  ಇರೋದೊಂದೇ ಕುರ್ಚಿ ಯಾರಂಡಿಗ್ ಹಾಕಾಣ

  ಮೂರಾಲ್ಕು ಮಂದೀಗೇ ಕುರ್ಚಿ ಸಾಲೋದಿಲ್ಲ

  ಕಾರ್ಪೆಂಟ್ರಿಗ್ಹೇಳ್ಬುಟ್ಟು ಮಂಚ ಮಾಡಿಸೋಣ

  ಈ ಜಾತಿ ಆ ಜಾತ9ಇ 

  ಈ ಧರ್ಮ ಆ ಧರ್ಮ

  ಈ ಪೈಕಿ ಆ ಪೈಕಿ ವೋಟು

  ಎಲ್ರು ಒಳ್ಳೇವ್ರಪ್ಪ

  ಕೆಟ್ಟವ್ರು ಯಾರಿಲ್ಲ

  ಅವ್ರವ್ರಿಗವ್ರವ್ರೇ ಗ್ರೇಟು

  ಇವ್ನು ಅವ್ನು ಸೇರಿ

  ಫುಲ್ಲು ಹಲ್ಕಿರ್ಕೊಂಡು

  ಮಾಡ್ಕತಾವ್ರೆ ಬೈಟು ಸೀಟು

  ಒಟ್ಟು ಬಡಿದಾಡ್ತವ್ರೆ

  ಗಟ್ಟಿ ಹಿಡ್ಕಂಡವ್ರೆ

  ಒಬ್ರು ಇನ್ನೊಬ್ಬರ ಜುಟ್ಟು

  ವೋಟು ಕೊಟ್ಟ ಮೇಲೆ ನಾವೇನು ಮಾಡಾಣ?

  ಯಾರು ಮುಸೋದಿಲ್ಲ ಐದೊರ್ಸ ನಮ್ಮನ್ನ

  ಕೆಲಸ ಮಾಡ್ತಾನಂತ ನಂಬಿದ್ರೆ ಒಬ್ಬನ್ನ

  ಅವ್ನೆ ಕೈಲಿಡ್ತಾನೆ ತೆಂಗಿನಕಾಯಿ ಚಿಪ್ಪನ್ನ

  ದೇವ್ರು ಕಾಪಾಡ್ತಾನೆ ಅಂತ ಅಂದ್ಕಬಾರ್ದು

  ಅವ್ರುಸೇಕೊಂಬಿಟ್ಟ ಇಲ್ಯಾವ್ದೋ ಪಾರ್ಟಿನಾ

  ಶತಮಾನದಿಂದಾನೂ 

  ಮತದಾರನಾ ಗೋಳು

  ಕೇಳಿಲ್ಲ ಯಾವ್ದೇ ಲೀಡರ್ರು

  ನಾವ್ ನಾವೇ ಬೈಕಂಡು

  ನಾವ್ ನಾವೇ ಒರೆಸೋಣ

  ನಮ್ಮ ನಮ್ಮ ಕಂಗಳ ನೀರು

  ರಾಜಂಗೆ ತಕ್ಕಂಗೆ

  ಪ್ರಜೆಯೂ ಇರ್ತಾನಂತೆ

  ಮರ್ತೋಯ್ತು ಹೇಳಿದ್ದು ಯಾರು

  ನಮಗೆ ತಕ್ಕ ರಾಜ

  ಯಾವತ್ತೋ ಸಿಗುತಾನೆ

  ಅಲ್ಲೀಂಗ ಇರಲಿ ಉಸ್ರು

  ಮೂರು ಬಿಟ್ಟವ್ರಂತ ನಮಗೇ ಬೈಕೊಳ್ಳೋಣ

  ದೊಡ್ಡೋರಿಗಂದರೆ ಗುಮ್ತಾರೆ ಕಣಣ್ಣ..

  ಬನ್ನಿ ಒಗ್ಗಟ್ಟನ್ನು ವರ್ಕೌಟು ಮಾಡೊಣ

  ನಮ್ಮ ನಾಳೆಗಳಿಗೆ ನಾವೇ ಒದ್ದಾಡೋಣ

  ಸದ್ಯಕ್ಕೆ ಫೈನಲ್ಲು ಎಲ್ರೂ ವೋಟಾಕೋಣ

  ನೆಕ್ಸ್ಟು ಚುನಾವಣೆಗೆ ನಾವೇ ನಿಂತ್ಕಳ್ಳೋಣ

 • ಯೋಗರಾಜ್ ಭಟ್ ಅವರಿಂದ ಚುನಾವಣಾ ಗೀತೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ

  election song shot in bengaluru

  ಬೆಂಗಳೂರು, ಮಾರ್ಚ್ 30, 2018: ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ತನ್ನದೇ ಆದ ಗೀತೆ ಹೊಂದಲಿದೆ. ಈ ಚುನಾವಣಾ ಗೀತೆ ಪಾರದರ್ಶಕ ಮತದಾನ ಉತ್ತೇಜಿಸಲಿದ್ದು ಹೆಚ್ಚು ಮತದಾರರನ್ನು ಸೆಳೆಯಲಿದೆ. ಈ ಗೀತೆಯನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶಿಸುತ್ತಿದ್ದಾರೆ. ಯೋಗರಾಜ್ ಭಟ್ ತಮ್ಮ ಜನಪ್ರಿಯ ಗೀತರಚನೆಗೆ ಪ್ರಸಿದ್ಧರಾಗಿದ್ದು ಈ ಚುನಾವಣಾ ಗೀತೆ ಕೂಡಾ ಜನಪ್ರಿಯವಾಗುವ ನಿರೀಕ್ಷೆ ಇದೆ. ಚುನಾವಣಾ ಗೀತೆಗೆ ಸಂಗೀತ ಸಂಯೋಜನೆಯನ್ನು ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಮಾಡಲಿದ್ದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಅವರ ತಂಡದ ಗಾಯಕರು ಹಾಡಲಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಲಿದ್ದಾರೆ. 

  ಈ ಚುನಾವಣಾ ಗೀತೆಯನ್ನು ಕಳೆದ ಐದು ದಿನಗಳಿಂದ ರಾಜ್ಯದಾದ್ಯಂತ ಚಿತ್ರೀಕರಿಸಲಾಗುತ್ತಿದೆ. ಶುಕ್ರವಾರ ಕಂಠೀರವ ಸ್ಟೇಡಿಯಂ ಮತ್ತು ವಿಧಾನಸೌಧಗಳಲ್ಲಿ ಚಿತ್ರೀಕರಿಸಲಾಯಿತು. ಕರ್ನಾಟಕದ ನೂರಾರು ಸಾಂಸ್ಕøತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. `ಈ ಚುನಾವಣಾ ಗೀತೆಯ ಎಲ್ಲ ಗೌರವ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಸಲ್ಲಬೇಕು. ಅವರು ಈ ಚುನಾವಣೆಗಳಿಗೆ ಚುನಾವಣಾ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿದರು. ನಾವು ವಿಕಲಚೇತನರು, ಆದಿವಾಸಿಗಳು, ತೃತೀಯ ಲಿಂಗಿಗಳು ಮತ್ತು ಯುವ ಮತದಾರರನ್ನು ಈ ಚುನಾವಣಾ ಗೀತೆಯ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದೇವೆ' ಎಂದರು. 

  ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಶ್ರೀ ಸಂಜೀವ್ ಕುಮಾರ್, `ಈ ಚುನಾವಣಾ ಗೀತೆ ಆಯೋಗದ ಧ್ಯೇಯ- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳ ಅನುಸಾರ ಇದೆ. `ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ ಮತ್ತು ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ. ಈ ಗೀತೆಯನ್ನು ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತಿತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಿದ್ದೇವೆ' ಎಂದರು. 

  ನಿರ್ದೇಶಕ ಯೋಗರಾಜ್ ಭಟ್ ಈ ಯೋಜನೆ ಕುರಿತು ಬಹಳ ಸಂತೋಷ ವ್ಯಕ್ತಪಡಿಸಿ, `ಈ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಹಲವು ವರ್ಷಗಳಿಂದ ನಾನು ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಹೊಂದಿದ್ದೆ. ಈ ಚುನಾವಣಾ ಗೀತೆ ಅದನ್ನು ಈಡೇರಿಸಿದೆ. ಈ ಗೀತೆ ವಿಶಿಷ್ಟ ಪರಿಕಲ್ಪನೆಯಾಗಿದ್ದು ಜನರಿಗೆ ನೇರ ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಈ ಗೀತೆ ನೀಡುತ್ತದೆ. ಗೀತೆಗಳು ಸದಾ ಗ್ರಹಿಸಲು ಸುಲಭ ಮತ್ತು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವುದರಿಂದ ಇದು ಸಾಧ್ಯವಾಗುತ್ತದೆ. ಆದ್ದರಿಂದ ಜನರು ಚಿತ್ರಗೀತೆಗಳನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಚುನಾವಣಾ ಗೀತೆ ಪ್ರತಿಯೊಬ್ಬರ ಮನದಲ್ಲೂ ಉಳಿದು ಅವರಿಗೆ ಪಾರದರ್ಶಕ ಚುನಾವಣೆಗಳ ಕುರಿತು ಅರಿವು ಮೂಡಿಸುತ್ತದೆ' ಎಂದರು. 

 • ರಾಜಾಜಿನಗರ ಕ್ಷೇತ್ರದಿಂದ ಸಾ.ರಾ.ಗೋವಿಂದು ಸ್ಪರ್ಧೆ..?

  sa ra govindu in pressure to contest for the elections

  ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಫಿಲಂ ಚೇಂಬರ್ ಅಧ್ಯಕ್ಷ, ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಈ ಬಾರಿ ಚುನಾವಣೆಗೆ ನಿಲ್ತಾರಾ..? ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ..? ಇಂಥಾದ್ದೊಂದು ಕುತೂಹಲದ ಸುದ್ದಿ ರಾಜಕೀಯ ಮತ್ತು ಸಿನಿಮಾ ರಂಗ.. ಎರಡಲ್ಲೂ ಸಂಚರಿಸುತ್ತಿದೆ. ಅದಕ್ಕೆಲ್ಲ ಕಾರಣ ಸ್ವತಃ ಸಾ.ರಾ.ಗೋವಿಂದು. 

  ಸಾ.ರಾ.ಗೋವಿಂದು ಮೊದಲಿನಿಂದಲೂ ರಾಜಕಾರಣಿಗಳ ಜೊತೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡಿದ್ದಾರೆ. ಅದೂ ಪಕ್ಷಾತೀತವಾಗಿ. ಅವರಿಗೆ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ.. ಮೂವರ ಜೊತೆಯಲ್ಲೂ ಉತ್ತಮ ಬಾಂಧವ್ಯ ಇರುವುದೇ ಇದಕ್ಕೆ ಸಾಕ್ಷಿ. ಆ ಬಾಂಧವ್ಯವನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳದೆ, ಚಿತ್ರರಂಗದ ಹಿತಾಸಕ್ತಿಗೆ ಬಳಸಿಕೊಂಡಿರುವುದೇ ಈ ಬಾಂಧವ್ಯ ಉತ್ತಮವಾಗಿರುವುದಕ್ಕೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. 

  ಹಾಗಾದರೆ, ಸಾ.ರಾ.ಗೋವಿಂದು ಯಾವ ಪಕ್ಷದಿಂದ ಚುನಾವಣೆಗೆ ನಿಲ್ತಾರೆ..? ಅದೂ ಕೂಡಾ ಸಸ್ಪೆನ್ಸ್. ಸದ್ಯಕ್ಕೆ ಎರಡು ಪಕ್ಷಗಳಿಂದ ಗೋವಿಂದು ಅವರಿಗೆ ಸ್ಪರ್ಧಿಸಲು ಆಹ್ವಾನ ಬಂದಿದೆ. ಆ ಎರಡು ಪಕ್ಷಗಳಲ್ಲಿ ಯಾವ ಪಕ್ಷವನ್ನು ಗೋವಿಂದು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದು ಸದ್ಯದ ಕುತೂಹಲ.

  ಸಾ.ರಾ.ಗೋವಿಂದು ಅವರಿಗೆ ರಾಜಕೀಯ ಹೊಸದಲ್ಲ. 1980ರಿಂದ ಅಖಿಲ ಕರ್ನಾಟಕ ಡಾ. ರಾಜ್‍ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು, ಸಂಘವನ್ನು ಯಾವ ಮಟ್ಟಕ್ಕೆ ಬೆಳೆಸಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಒಂದು ಕಾಲದಲ್ಲಂತೂ ಅಭಿಮಾನಿ ಸಂಘ, ರಾಜ್ಯದ 3ನೇ ರಾಜಕೀಯ ಶಕ್ತಿಯಾಗಿತ್ತು. ಅದೂ ಕೂಡಾ ಚುನಾವಣೆಗೆ ಸ್ಪರ್ಧಿಸದೆ.

  ಬಹುಶಃ ರಾಜ್‍ಕುಮಾರ್ ಚುನಾವಣೆ, ರಾಜಕೀಯದತ್ತ ಒಲವು ತೋರಿದ್ದರೆ, ಅಭಿಮಾನಿ ಸಂಘವೂ ಕಾರ್ಯಾಚರಣೆಗಿಳಿಯುತ್ತಿತ್ತೋ ಏನೋ.. ಆದರೆ, ರಾಜ್‍ಕುಮಾರ್ ರಾಜಕೀಯಕ್ಕೆ ಬರಲೇ ಇಲ್ಲ. ದೂರವೇ ಉಳಿದುಬಿಟ್ಟರು. ಗೋಕಾಕ್ ಚಳವಳಿ ನಂತರವಂತೂ ರಾಜ್‍ಕುಮಾರ್ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂಬ ಸುದ್ದಿಗಳೂ ಇದ್ದವು. ಆಗಲೂ ರಾಜ್‍ಕುಮಾರ್ ರಾಜಕೀಯಕ್ಕೆ ಬರಲಿಲ್ಲ. ರಾಜ್ ನಿರ್ಧಾರಗಳನ್ನು ಅಭಿಮಾನಿ ಸಂಘವೂ ಬೆಂಬಲಿಸಿತ್ತು.

  ಆದರೆ, ಈಗಿನ ಪರಿಸ್ಥಿತಿಯೇ ಬೇರೆ. ಸಾ.ರಾ.ಗೋವಿಂದು ಸ್ಯಾಂಡಲ್‍ವುಡ್‍ನಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ತಮಗಿರುವ ವರ್ಚಸ್ಸು, ಸ್ನೇಹಗಳನ್ನು ಚಿತ್ರರಂಗದ ಅಭಿವೃದ್ಧಿಗೆ ಬಳಸುತ್ತಿರುವುದು ವಿಶೇಷ. ಕಳೆದ 10 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಜೊತೆಗಿನ ಉತ್ತಮ ಸ್ನೇಹವನ್ನು ಚಿತ್ರರಂಗದ ಕೆಲಸಗಳಿಗೆ ಬಳಸಿಕೊಂಡಿರುವ ಗೋವಿಂದು, ಹೋರಾಟಗಳಲ್ಲೂ ತೊಡಗಿಸಿಕೊಂಡಿರುವ ನಾಯಕ. 3 ದಶಕಗಳಿಂದಲೂ ಕನ್ನಡ ಪರ ಹೋರಾಟಗಳಲ್ಲಿ, ರಾಜ್ಯದ ಭಾಷೆ, ನೀರಿನ ವಿಚಾರದಲ್ಲಿ ನಡೆದ ಹೋರಾಟ, ಚಳವಳಿಗಳಲ್ಲಿ ಮಂಚೂಣಿಯಲ್ಲಿರುವ ಸಾ.ರಾ.ಗೋವಿಂದು ಸಹಜವಾಗಿಯೇ ರಾಜಕೀಯ ಪಕ್ಷಗಳ ಆಯ್ಕೆಯೂ ಆಗಿರುತ್ತಾರೆ. ಗೋವಿಂದು ನಮ್ಮ ಪಕ್ಷಕ್ಕೇ ಬರಲಿ ಎಂದು ಬಯಸುವವರಿಗೇನೂ ಕಡಿಮೆಯಿಲ್ಲ.

  ಆದರೆ, ಸಾ.ರಾ.ಗೋವಿಂದು ತಮ್ಮ ರಾಜಕೀಯ ಎಂಟ್ರಿಯನ್ನು ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ನಿರಾಕರಿಸಿಯೂ ಇಲ್ಲ. ಸದ್ಯಕ್ಕಂತೂ ರಾಜಕೀಯ ಪಕ್ಷಗಳ ಆಹ್ವಾನದಿಂದ ಅವರು ಒತ್ತಡದಲ್ಲಿರುವುದಂತೂ ಸತ್ಯ. ಯಾವ ಪಕ್ಷಕ್ಕೆ ಹೋಗಬೇಕು ಎಂಬ ಗೊಂದಲದಲ್ಲಿರುವುದೂ ಸತ್ಯ. ಎಲ್ಲ ಪಕ್ಷಗಳ ನಾಯಕರ ಜೊತೆಯಲ್ಲೂ ಒಡನಾಟ ಇಟ್ಟುಕೊಂಡಿರುವ ಸಾ.ರಾ.ಗೋವಿಂದು, ಈಗ ಒಂದು ಪಕ್ಷವನ್ನೇ ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ.

  ರಾಜಾಜಿನಗರ ಕ್ಷೇತ್ರವೇ ಏಕೆ ಎಂಬ ಪ್ರಶ್ನೆಗೂ ಉತ್ತರವಿದೆ. ರಾಜಾಜಿನಗರ ಕ್ಷೇತ್ರದಲ್ಲಿ ಕನ್ನಡ ಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕನ್ನಡ ಪರ ಹೋರಾಟಗಾರರು, ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿದ್ದಾರೆ. ಕನ್ನಡದ ಕಿಚ್ಚು ಮೊದಲು ಚಿಮ್ಮುವುದೇ ರಾಜಾಜಿನಗರ ಕ್ಷೇತ್ರದಿಂದ. ಆ ಎಲ್ಲ ಸಂಘಟನೆಗಳ ಜೊತೆಗೂ ಸಾ.ರಾ.ಗೋವಿಂದು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೆಲ್ಲವನ್ನೂ ಲೆಕ್ಕಾಚಾರ ಹಾಕಿಕೊಂಡೇ ರಾಜಕೀಯ ಪಕ್ಷಗಳು ಸಾ.ರಾ.ಗೋವಿಂದು ಬೆನ್ನು ಬಿದ್ದಿವೆ.

  ಹಾಗಾದರೆ, ಸಾ.ರಾ.ಗೋವಿಂದು ನಿರ್ಧಾರ ಏನು..? ಯಾವ ಪಕ್ಷಕ್ಕೆ ಸೇರುತ್ತಾರೆ..? ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ..? ಈ ಎಲ್ಲ ಪ್ರಶ್ನೆಗಳಿಗೂ ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಸ್ವತಃ ಸಾ.ರಾ.ಗೋವಿಂದು ಅವರೇ ಇದಕ್ಕೆಲ್ಲ ಉತ್ತರ ನೀಡಬೇಕಿದೆ.

 • ವಿಧಾನಸೌಧದ ಎದುರು ಭಟ್ಟರ ಮತಜಾಗೃತಿ ಶೂಟಿಂಗ್

  after a decade yogaraj bhatt shots in vidhana soudha

  2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾರರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಜವಾಬ್ದಾರಿ ನೀಡಿದೆ. ಅಂಥಾದ್ದೊಂದು ಹೊಣೆ ನನಗೆ ಸಿಕ್ಕಿರುವ ಅದೃಷ್ಟ ಎನ್ನುತ್ತಿರುವ ಯೋಗರಾಜ್ ಭಟ್, ಮತದಾನ ಜಾಗೃತಿಗಾಗಿ ವಿಶೇಷ ಗೀತೆಯೊಂದನ್ನು ಬರೆದು ಚಿತ್ರೀಕರಿಸುತ್ತಿದ್ದಾರೆ. 

  ಎಷ್ಟೋ ವರ್ಷಗಳ ಹಿಂದೆ ವಿಧಾನಸೌಧದ ಎದುರು ಯಾವುದೇ ಚಿತ್ರೀಕರಣವನ್ನು ನಿಷೇಧಿಸಲಾಗಿತ್ತು. ಸುದ್ದಿ ಮಾಧ್ಯಮಗಳಿಗೆ ಬಿಟ್ಟರೆ, ಬೇರ್ಯಾರಿಗೂ ವಿಶೇಷ ಚಿತ್ರೀಕರಣಕ್ಕೆ ಅವಕಾಶ ಇರಲಿಲ್ಲ. ಈಗ ಅಂತಾದ್ದೊಂದು ವಿಶೇಷ ಚಿತ್ರೀಕರಣಕ್ಕೆ ಭಟ್ಟರಿಗೆ ಅವಕಾಶ ಸಿಕ್ಕಿದೆ.

  ವಿಭಿನ್ನ ಪರಿಕಲ್ಪನೆಯ ಈ ಗೀತೆ, ಪ್ರತಿಯೊಬ್ಬರಿಗೂ ಮತದಾನ ಮಾಡಲೇಬೇಕೆಂಬ ಉತ್ಸಾಹ ನೀಡಲಿದೆ. ಮತದಾನದಿಂದ ದೂರವೇ ಉಳಿದಿರುವ ಸಮೂಹದಲ್ಲಿ ಶೇ.5ರಷ್ಟಾದರೂ ಜನ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರೆ, ನನ್ನ ಶ್ರಮ ಸಾರ್ಥಕ ಎಂದಿದ್ದಾರೆ ಯೋಗರಾಜ್ ಭಟ್.

  ಒಟ್ಟು 4 ನಿಮಿಷದ ಈ ಹಾಡಿಗೆ ಸಂಗೀತ ನೀಡಿರುವುದು ಹರಿಕೃಷ್ಣ. ಹಾಡಿರುವುದು ವಿಜಯಪ್ರಕಾಶ್. ನೃತ್ಯ ಸಂಯೋಜನೆ ಇಮ್ರಾನ್ ಸರ್ದಾರಿಯಾ ಅವರದ್ದು. ವಿಧಾನಸೌಧದಲ್ಲಷ್ಟೇ ಅಲ್ಲ, ರಾಜ್ಯದ 30 ಜಿಲ್ಲೆಗಳಲ್ಲೂ ಈ ಹಾಡಿಗೆ ಚಿತ್ರೀಕರಣ ನಡೆಯಲಿದೆ.

  ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಚುನಾವಣಾ ಗೀತೆ, ಆಯೋಗದ ಧ್ಯೇಯ ಹಾಗೂ ನೈತಿಕತೆ ಅನುಸಾರ ಇದೆ ಎಂದಿದ್ದಾರೆ.

  ಮತದಾನ ಜಾಗೃತಿಗಾಗಿ ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ ಇಂಥಾದ್ದೊಂದು ವಿಶೇಷ ಗೀತೆ ಸಂಯೋಜಿಸುತ್ತಿರುವುದು ಚುನಾವಣಾ ಆಯೋಗದ ಹೆಗ್ಗಳಿಕೆ.

 • ವೋಟ್ ಹಾಕಲೇ ಇಲ್ಲ ರಮ್ಯಾ..!

  ramya didnt cast her vote

  ರಮ್ಯಾ, ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದವರು. ಸಂಸದೆಯಾಗಿದ್ದವರು. ಈಗ ಕಾಂಗ್ರೆಸ್‍ನಲ್ಲಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಮತದಾರರನ್ನು ಮತಗಟ್ಟೆಗೆ ಬಂದು ವೋಟ್ ಮಾಡಿ ಎಂದು ಹೇಳುವುದು ಆಯೋಗದ ಕೆಲಸವಷ್ಟೇ ಅಲ್ಲ, ರಾಜಕೀಯ ಪಕ್ಷಗಳ ಹೊಣೆಗಾರಿಕೆಯೂ ಹೌದು. ಆದರೆ, ಇಷ್ಟೆಲ್ಲ ಹೊಣೆಗಾರಿಕೆ ಇರುವ ರಮ್ಯಾ ಮತದಾನ ಮಾಡಲು ಬರಲೇ ಇಲ್ಲ.

  ರಮ್ಯಾ ಅವರ ವೋಟ್ ಇರೋದು ಮಂಡ್ಯ ನಗರದ 10ನೇ ವಾರ್ಡ್‍ನಲ್ಲಿ. ಅಧಿಕೃತವಾಗಿ ಅವರು ವಿದ್ಯಾನಗರದ ನಿವಾಸಿ. ಅಲ್ಲಿ ಅವರ ಮನೆಯೂ ಇದೆ. ಲೋಕಸಭೆಗೆ ಸ್ಪರ್ಧಿಸಿದ್ದಾಗ ಬಂದು ಮತ ಹಾಕಿದ್ದೇ ಕೊನೆ, ರಮ್ಯಾ ನಂತರ ವೋಟ್ ಹಾಕೋಕೆ ಬಂದೇ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮತ ಹಾಕಲು ಬಾರದ ರಮ್ಯಾ, ಈ ಬಾರಿ ವಿಧಾನಸಭೆ ಚುನಾವಣೆಯಿಂದಲೂ ಮತದಾನ ಮಾಡದೆ ದೂರ ಉಳಿದಿದ್ದಾರೆ.

  ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ, ಸಿಎಂ ಆಗಿರುವ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಮತದಾರರಿಗೆ ಪ್ರಜಾಪ್ರಭುತ್ವದ ಪವಿತ್ರ ಹಕ್ಕು ಚಲಾಯಿಸಿ ಎಂದು ಸಂದೇಶ ಕೊಟ್ಟರು. ಆದರೆ, ಆ ಸಂದೇಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ ರಮ್ಯಾ ಅವರೇ ವೋಟ್ ಹಾಕೋಕೆ ಬರಲಿಲ್ಲ.

 • ವೋಟ್ ಹಾಕಿ ಅನ್ನೋಕೆ ತಾರೆಯರು ಬಂದರು..!

  mmch vote maadi campaign

  ಈಗಾಗಲೇ ಚಿತ್ರರಂಗದ ಹಲವರು ತಮ್ಮದೇ ಆದ ರೀತಿಯಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜಗ್ಗೇಶ್, ಸಾಯಿಕುಮಾರ್, ಉಮಾಶ್ರೀ, ಬಿ.ಸಿ.ಪಾಟೀಲ್. ಶಶಿಕುಮಾರ್ ಮೊದಲಾದವರು ಸ್ಪರ್ಧಿಸಿದ್ದಾರೆ. ಪ್ರಕಾಶ್ ರೈ, ಮೋದಿಯ ವಿರುದ್ಧ ಪ್ರಚಾರ ಮಾಡುತ್ತಾ, ಇಡೀ ಕರ್ನಾಟಕ ಸುತ್ತುತ್ತಿದ್ದಾರೆ. ಅಮೂಲ್ಯ, ಶಿಲ್ಪಾ ಗಣೇಶ್, ಶೃತಿ, , ಜಯಮಾಲಾ, ತಾರಾ ಮೊದಲಾದವರು ಪಕ್ಷಗಳಲ್ಲಿ ಗುರುತಿಸಿಕೊಂಡವರು. ಸುದೀಪ್, ದರ್ಶನ್, ಯಶ್ ಮೊದಲಾದವರು ವ್ಯಕ್ತಿಗಳ ಆಧಾರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಈ ನಾಯಕಿಯರು ಡಿಫರೆಂಟ್. ಇವರ ಪ್ರಚಾರವೇ ವಿಭಿನ್ನ.

  ಮೇಘನಾ ರಾಜ್, ಸಂಯುಕ್ತಾ ಹೊರನಾಡು, ರಾಗಿಣಿ, ಪ್ರಥಮಾ ಹಾಗೂ ನಕ್ಷತ್ರಾ, ಚುನಾವಣಾ ಜಾಗೃತಿಗೆ ಮುಂದಾಗಿದ್ದಾರೆ. ಎಂಎಂಸಿಹೆಚ್ ಅನ್ನೋ ಸಿನಿಮಾದಲ್ಲಿ ನಟಿಸುತ್ತಿರುವ ಇವರೆಲ್ಲ ಚಿತ್ರದ ಟೀಸರ್ ಮೂಲಕ, ಮತದಾನ ಜಾಗೃತಿಗೆ ಮುಂದಾಗಿದ್ದಾರೆ. ವೋಟ್ ಮಾಡಿ, ಒಳ್ಳೆಯವರಿಗೆ ವೋಟ್ ಮಾಡಿ ಅನ್ನೋದು ಇವರ ಅಭಿಯಾನ.

  ಮುಸ್ಸಂಜೆ ಮಹೇಶ್ ನಿರ್ದೇಶನದ ಎಂಎಂಸಿಹೆಚ್ ಚಿತ್ರದಲ್ಲಿ ಮಹಿಳೆಯರೇ ಪ್ರಧಾನ ಪಾತ್ರದಲ್ಲಿದ್ದಾರೆ. ರಾಗಿಣಿ, ಚುನಾವಣೆ ಆಯೋಗದ ಬ್ರಾಂಡ್ ಅಂಬಾಸಿಡರ್ ಕೂಡಾ ಹೌದು. 

  ಅಂದಹಾಗೆ ಇಂಥಾದ್ದೊಂದು ಐಡಿಯಾ ಕೊಟ್ಟವರು ಚಿತ್ರದ ನಿರ್ಮಾಪಕರಂತೆ. ನಿರ್ಮಾಪಕರಾದ ಎಸ್.ಪುರುಷೋತ್ತಮ್, ಜಾನಕಿರಾಮ್ ಹಾಗೂ ಅರವಿಂದ್ ಐಡಿಯಾವನ್ನು ಚಿತ್ರದ ನಿರ್ದೇಶಕರು ಟೀಸರ್ ರೂಪಕ್ಕಿಳಿಸಿದ್ದಾರೆ. ಅಂದಹಾಗೆ ಮೇ 12ನೇ ತಾರೀಕು ಕಡ್ಡಾಯವಾಗಿ ಮತದಾನ ಮಾಡಿ.

 • ವೋಟ್ ಹಾಕ್ರಪ್ಪೋ.. - ಭಟ್ಟರು ಬರೀತಾರೆ.. ದ್ರಾವಿಡ್ ಹೇಳ್ತಾರೆ

  yogaraj bhat asks people to vote

  ಮೇ 12ಕ್ಕೆ ವೋಟಿಂಗ್. ಮೇ 15ಕ್ಕೆ ಕೌಂಟಿಂಗ್. ಈ ಬಾರಿ ಮತದಾನ ಜಾಗೃತಿಗೆ ಚುನಾವಣಾ ಆಯೋಗ ರಾಯಭಾರಿಯನ್ನಾಗಿ ಮಾಡಿರೋದು ರಾಹುಲ್ ದ್ರಾವಿಡ್ ಅವರನ್ನು. ಆರಂಭದಲ್ಲಿ ಬ್ಯುಸಿ ಶೆಡ್ಯೂಲ್ ಎಂದು ಹೇಳಿದ್ದ ದ್ರಾವಿಡ್, ಕೊನೆಗೆ ಮತದಾನ ಜಾಗೃತಿಗಾಗಿ ಟೈಮ್ ಅಡ್ಜಸ್ಟ್ ಮಾಡಿಕೊಂಡಿದ್ದಾರೆ. 

  ಇನ್ನು ಮತದಾನ ಜಾಗೃತಿಗಾಗಿ ಒಂದು ಹಾಡು ಬರೆದು, ನೃತ್ಯ ಸಂಯೋಜಿಸಿ ವಿಡಿಯೋ ಮಾಡೋಕೆ ನಿರ್ಧರಿಸಿದೆ ಆಯೋಗ. ಆ ಹಾಡಿಗೆ ಸಾಹಿತ್ಯ ಭಟ್ಟರದ್ದು. ಅದೇ ಯೋಗರಾಜ್ ಭಟ್ಟರದ್ದು. ಪಂಚತಂತ್ರ ಚಿತ್ರತಂಡಕ್ಕೆ ಕೊಟ್ಟ ಈ ಜವಾಬ್ದಾರಿಗೆ ಅಭಾರಿ ಎಂದಿರುವ ಭಟ್ಟರು, ತಮ್ಮ ಎಂದಿನ ವ್ಯಂಗ್ಯ ಮತ್ತು ಗಂಭೀರತೆಯ ಶೈಲಿಯಲ್ಲಿ ಸಾಹಿತ್ಯ ಬರೆದಿದ್ದಾಗಿದೆ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

  ಇದು ನನಗೆ ಸಿಕ್ಕಿರುವ ಅತಿ ದೊಡ್ಡ ಗೌರವ. ಇದನ್ನು ಪ್ರೀತಿ ಮತ್ತು ಗೌರವದಿಂದ ಮಾಡಿದ್ದೇನೆ. ಪ್ರತಿ ಬಾರಿ ಚುನಾವಣೆ ನಡೆದಾಗ ಶೇ.30ರಷ್ಟು ಮಂದಿ ಮತಗಟ್ಟೆಗೆ ಬರೋದೇ ಇಲ್ಲ. ಅವರಲ್ಲಿ ಶೇ.5ರಷ್ಟು ಜನ ಮತಗಟ್ಟೆಗೆ ಬಂದು ವೋಟ್ ಮಾಡಿದರೂ, ನನ್ನ ಶ್ರಮ ಸಾರ್ಥಕ ಎಂದಿದ್ದಾರೆ ಯೋಗರಾಜ್ ಭಟ್.

  ಭಟ್ಟರು, ದೈನಂದಿನ ಸಮಸ್ಯೆಗಳಿಗೆ ಸದಾ ಸ್ಪಂದಿಸುವವರು. ಈ ಹಿಂದೆ ಜಿಎಸ್‍ಟಿ ಬಗ್ಗೆ, ಎಲೆಕ್ಷನ್ ಬಗ್ಗೆ, ರಾಜಕೀಯದ ಬಗ್ಗೆ ಹಲವು ವಿಡಂಬನಾತ್ಮಕ ಕವಿತೆಗಳನ್ನು ಬರೆದಿರುವ ಭಟ್ಟರು, ಈ ಬಾರಿ ಮತದಾನ ಜಾಗೃತಿಗೆ ಹೊರಟಿದ್ದಾರೆ. ಆ ಸಂಭ್ರಮವನ್ನು ಟ್ವಿಟರ್‍ಗೆ ಎಂಟ್ರಿಯಾಗುವ ಮೂಲಕ ಸಾರಿದ್ದಾರೆ ಯೋಗರಾಜ್ ಭಟ್. ಮೇ 12ರಂದು ದಯವಿಟ್ಟು ವೋಟ್ ಮಾಡಿ.

 • ಶ್ರೀರಾಮುಲು ಪರ ಕಿಚ್ಚನ ಪ್ರಚಾರ

  kiccha sudeep campaigns for sriramulu

  ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್, ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಸುದೀಪ್ ಅವರನ್ನು ಅಡ್ಡಗಟ್ಟುತ್ತಿರುವ ಗ್ರಾಮಸ್ಥರು, ಸುದೀಪ್‍ಗೆ ಪ್ರೀತಿಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅಭಿಮಾನಿಗಳ ಎದುರು ಸುದೀಪ್ ಮೂಕರಷ್ಟೆ.

  ಚಿತ್ರದುರ್ಗ ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸುದೀಪ್, ನನ್ನದು ರಾಜಕೀಯ ಪಕ್ಷವಲ್ಲ, ಸಿನಿಮಾ ಪಕ್ಷ. ರಾಮುಲು ನನ್ನ ಆತ್ಮೀಯರು. ಅವರಿಗೆ ಮತ ನೀಡಿ ಗೆಲ್ಲಿಸಿ. ನಾನು ಗೆದ್ದಾಗ, ಬಿದ್ದಾಗ ನನ್ನ ಜೊತೆ ಇದ್ದೀರಿ. ನಾನು ಚುನಾವಣೆ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿಲ್ಲ. ಸ್ನೇಹಕ್ಕಾಗಿ ಬಂದಿದ್ದೇನೆ. ಶ್ರೀರಾಮುಲು ಒಳ್ಳೆಯ ಮನುಷ್ಯ, ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

  ಅಭಿಮಾನಿಗಳ ಪ್ರೀತಿಗೆ ಶರಣಾದ ಸುದೀಪ್, ಸಾವು ಎದುರಿಗೆ ಬಂದಾಗ ನನ್ನ ಕೈ ಮೀಸೆ ಮೇಲಿರಬೇಕು, ಆ ಗುಂಡಿಗೆ ನನ್ನದಾಗಬೇಕು ಎಂಬ ವೀರ ಮದಕರಿ ಚಿತ್ರದ ಡೈಲಾಗ್‍ನ್ನೂ ಹೊಡೆದರು.

 • ಸಾಧುಕೋಕಿಲಾ ಪೋಟಾಗ್ಬುಟ್ರಾ..? 

  was sadhu kokila teleported

  ಸಾಧುಕೋಕಿಲಾ, ತೆರೆಯ ಮೇಲೆ ಕಾಮಿಡಿ ಮಾಡ್ತಾರೆ. ಕೀಬೋರ್ಡ್ ಮುಂದೆ ಕುಳಿತರೆ ಅದ್ಭುತ ಸಂಗೀತ ಸಂಯೋಜಿಸ್ತಾರೆ. ಮೈಕು ಹಿಡಿದರೆ, ಅದ್ಭುತವಾಗಿ ಹಾಡುತ್ತಾರೆ. ಅದರಲ್ಲೂ ವಿಷಾದ ಗೀತೆಗಳು ಸಿಕ್ಕಿಬಿಟ್ಟರಂತೂ, ಸಾಧುಗೆ ಸಾಧುವೇ ಸಾಟಿ. ಆದರೆ, ಅವರು ಕೈಗೆ ಸಿಗುವುದೇ ಕಷ್ಟ. ಅಂತಾದ್ದೊಂದು ಪರಿಸ್ಥಿತಿಯಲ್ಲಿ ಈಗ ತೊಳಲಾಡುತ್ತಿರುವುದು ತಾರಕಾಸುರ ಚಿತ್ರತಂಡ.

  ಇತ್ತೀಚೆಗೆ ಸಾಧು, ತಾರಕಾಸುರ ಚಿತ್ರದ ಹಾಡು ಹಾಡಲು ಬಂದಿದ್ದರಂತೆ. ಎರಡು ಸಾಲುಗಳನ್ನು ಅದ್ಭುತವಾಗಿ ಹಾಡಿದರಂತೆ. ಅಷ್ಟೆಲ್ಲ ಆದ ಮೇಲೆ ಈಗ್ ಬಂದೆ, ಅರ್ಧ ಗಂಟೆಯಲ್ಲಿ ವಾಪಸ್ ಬರ್ತೀನಿ ಎಂದು ಹೋದವರು, ಕಾಣೆಯಾಗಿಬಿಟ್ಟಿದ್ದಾರೆ. ಎಲ್ಲಿ ಹೋದರು ಎಂದು ಹುಡುಕಿದವರಿಗೆ ಸಾಧು ಕಾಣಿಸಿಕೊಂಡಿರೋದು ಕಾಂಗ್ರೆಸ್ ಪ್ರಚಾರ ಯಾತ್ರೆಯಲ್ಲಿ. 

  ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಟ್ವಿಟರ್‍ನಲ್ಲಿ ಬಹಿರಂಗಪಡಿಸಿ, ಸಾಧು ಕಂಡರೆ ನಮ್ಮಲ್ಲಿಗೆ ಕರೆತನ್ನಿ ಎಂದು ಕೇಳಿಕೊಂಡಿದ್ದಾರೆ. ರಥಾವರ ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಾಕಾಸುರ ಚಿತ್ರಕ್ಕೆ ವೈಭವ್ ನಾಯಕ. ಧರ್ಮ ವಿಶ್ ಸಂಗೀತವಿರುವ ಚಿತ್ರದ ಹಾಡಿಗೆ ಧ್ವನಿಯಾಗಬೇಕಿದ್ದ ಸಾಧು, ಈಗ ಪಲ್ಲವಿಯನ್ನಷ್ಟೇ ಹಾಡಿ, ಚರಣ ಹಾಡದೆ ಪೋಟಾಗ್ಬುಟ್ಟವ್ರೆ.

  ಅಂದಹಾಗೆ ಈ ಪೋಟ್ ಆಗ್ಬುಟ್ರಾ ಅನ್ನೋ ಪದ ಇದ್ಯಲ್ಲ, ಅದು ಯಾರೇ ನೀನು ಚೆಲುವೆಯಲ್ಲಿ ಅವರಿಂದಲೇ ಫೇಮಸ್ ಆದ ಪದ.

 • ಸಿದ್ದರಾಮಯ್ಯ, ಅಂಬರೀಶ್ ದೂರವಾಗಿದ್ದು ಏಕೆ..?

  ambareesh blasts cm siddaramaiah

  ಟಿಕೆಟ್ ಕೊಟ್ಟು, ಬಿ ಫಾರಂ ಕೊಟ್ಟರೂ ಮಂಡ್ಯದಿಂದ ಸ್ಪರ್ಧಿಸದೆ ಹಿಂದೆ ಸರಿದಿರುವ ಅಂಬರೀಶ್, ಕಾಂಗ್ರೆಸ್‍ನ ಕೆಲವು ನಾಯಕರ ವಿರುದ್ಧ, ಅದರಲ್ಲೂ ಸಿದ್ದರಾಮಯ್ಯ ವಿರುದ್ಧ ತಮಗಿರುವ ಅಸಮಾಧಾನ ಹೊರಹಾಕಿದ್ದಾರೆ. ಅಂಬರೀಶ್ ಅವರ ಮಾತುಗಳನ್ನು ಒಂದ್ಸಲ ನೋಡಿ. ಅಂಬರೀಶ್ ರಾಜಕೀಯದಿಂದ ಹಿಂದೆ ಸರಿದದ್ದು ಏಕೆ ಅನ್ನೋದು ನಿಮಗೇ ಅರ್ಥವಾಗುತ್ತೆ.

  ಕನಕದಾಸರನ್ನು ಕನಕರಾಜನನ್ನಾಗಿ ಮಾಡಿ ಎಂದು ಹೇಳಿದ ಮೊದಲಿಗ ನಾನು. ಆಗ ಕಾಂಗ್ರೆಸ್‍ನ ಹಲವರು ನನ್ನ ವಿರುದ್ಧ ಸಿಟ್ಟಿಗೆದ್ದಿದ್ದರು. ಈಗ ಅವರೆಲ್ಲ ಸಿದ್ದರಾಮಯ್ಯನ ಜೊತೆ ಚೆನ್ನಾಗಿದ್ದಾರೆ. ನಾನಷ್ಟೇ ದೂರವಾಗಿದ್ದೇನೆ.

  - ನನಗೆ ಸೌಜನ್ಯಕ್ಕೂ ಒಂದು ಮಾತು ಹೇಳದೆ ಸಚಿವ ಸ್ಥಾನದಿಂದ ತೆಗೆದಾಗಲೇ, ನನಗೆ ಯೋಗ್ಯತೆ ಇಲ್ಲ ಅನ್ನೋದನ್ನು ತಿಳಿಸಿದರು. ಅದಕ್ಕೆಲ್ಲ ಬೇಸರವೇನಿಲ್ಲ. ನನ್ನ ಯೋಗ್ಯತೆ ಸಿದ್ದರಾಮಯ್ಯರಿಂದ ಗೊತ್ತಾಯ್ತು.

  - ನಾನು ಮಂಡ್ಯಕ್ಕಷ್ಟೇ ಸೀಮಿತ ಅಲ್ಲ. ಇಡೀ ಕರ್ನಾಟಕದ ಋಣದಲ್ಲಿದ್ದೇನೆ. ಇಡೀ ಕರ್ನಾಟಕವೇ ನನ್ನದು.

  ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲೇ ನಿಲ್ಲಬೇಕಿತ್ತು. ಅದನ್ನು ಬಿಟ್ಟು ಓಡಿ ಹೋಗಬಾರದಿತ್ತು. ಸೋಲು ಗೆಲುವು ಆಮೇಲೆ.

  - ನನಗೂ ಹಲವು ಕಡೆ ನಿಲ್ಲೋಕೆ ಒತ್ತಡಗಳಿದ್ದವು. ಆದರೆ, ನಾನು ಮಂಡ್ಯ ಬಿಟ್ಟು ಹೋಗಿದ್ದರೆ ಷಂಡ ಎನಿಸಿಕೊಳ್ಳುತ್ತಿದ್ದೆ. ಮಂಡ್ಯದ ಗಂಡಾಗಿ ಇರುತ್ತಿರಲಿಲ್ಲ.

  - ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮನೆಗೆ ಬಂದು ನೀವು ಸೋಲ್ತೀರಿ, ಆದರೂ ನಿಂತುಕೊಳ್ಳಿ ಅಂತಾರೆ ಅಂದ್ರೆ ನನಗೆ ಬೇಜಾರಾಗೋದಿಲ್ವಾ..?

  - ಗಣಿಗ ರವಿ ಒಬ್ಬ ಲೀಡರ್ ಏನ್ರೀ.. ಅದರ ಬದಲು ರಮ್ಯಾಗೇ ಟಿಕೆಟ್ ಕೊಡಬಹುದಿತ್ತು.

  - ಸಿಎಂ ಆಗೋಕೆ ಮುಂಚೆ ಇದ್ದ ಸಿದ್ದರಾಮಯ್ಯನೇ ಬೇರೆ. ಈಗಿನ ಸಿದ್ದರಾಮಯ್ಯನೇ ಬೇರೆ. ಆ ವಿಷಯ ಬಿಡಿ, ಮಾತನಾಡೋದ್ರಲ್ಲಿ ಅರ್ಥವಿಲ್ಲ.

  - ದೇವೇಗೌಡರು ಗಟ್ಟಿಗರು. ಅವರಷ್ಟು ಚಟುವಟಿಕೆ ಮಾಡೋಕೆ ನನಗೆ ಆಗಲ್ಲ. 10 ಕೋಟಿ ಕೊಟ್ರೂ ಅವರಷ್ಟು ಸುತ್ತೋಕೆ ನನ್ನಿಂದ ಸಾಧ್ಯವಿಲ್ಲ.

  - ನನ್ನ ಮನೆಗೆ ಎಲ್ಲ ಪಕ್ಷಗಳ ಸಿಎಂಗಳೂ ಬಂದು ಹೋಗಿದ್ದಾರೆ. ಸಿದ್ದರಾಮಯ್ಯನೂ ಬಂದಿದ್ದಾರೆ. ಈಗ ಬಂದಿಲ್ಲ. ಪಾಪ.. ಅವರಿಗೂ ಪುರುಸೊತ್ತಿಲ್ಲ. ಬರಬೇಕು ಎಂದು ನಾನು ಅಪೇಕ್ಷಿಸುವುದೂ ಇಲ್ಲ.

  - ನನಗೀಗ ವಯಸ್ಸಾಗಿದೆ. ಈಗ 66. 5 ವರ್ಷದ ಹೊತ್ತಿಗೆ 71 ಆಗಿರುತ್ತೆ. ಕೆಲಸ ಮಾಡುವ ಶಕ್ತಿಯಿಲ್ಲದ ಮೇಲೆ ಎಲೆಕ್ಷನ್‍ಗೆ ನಿಲ್ಲಬಾರದು. ನನ್ನ ಆರೋಗ್ಯ ಮತ್ತು ವಯಸ್ಸು ಕೈಕೊಟ್ಟಿದೆ. ಬೇರೆಯವರು ಬೆಳೆಯಲಿ.

  - ಮೊದಲಿನಿಂದಲೂ ಹೇಳಿದ್ದೆ. ನನ್ನ ಉತ್ತರಾಧಿಕಾರಿಯಾಗಿ ಮಗನನ್ನು ಬೆಳೆಸೋದಿಲ್ಲ ಅಂತಾ. ಅವನಿಗೆ ಶಕ್ತಿಯಿದ್ದರೆ, ಅವನೇ ಬೆಳೀತಾನೆ. ಅಷ್ಟೆ.

   

 • ಸುದೀಪ್, ದರ್ಶನ್, ಯಶ್ ಪ್ರಚಾರ.. ಗೆದ್ದವರೆಷ್ಟು ಜನ..?

  results of stars campaigned constants in election

  ಈ ಬಾರಿಯ ಚುನಾವಣೆಯಲ್ಲಿ ಚಿತ್ರರಂಗದ ಹಲವು ತಾರೆಯರು ಪ್ರಚಾರ ಮಾಡಿದ್ದರು. ಪಕ್ಷಾತೀತವಾಗಿ ಪ್ರಚಾರ ಮಾಡಿದ್ದವರಲ್ಲಿ ಗೆದ್ದವರೆಷ್ಟು ಜನ.. ಸೋತವರೆಷ್ಟು ಜನ ಎಂದು ನೋಡಿದರೆ, ಫಲಿತಾಂಶ ಸ್ವಾರಸ್ಯಕರವಾಗಿದೆ.

  ಸುದೀಪ್ ಪ್ರಚಾರ ಮಾಡಿದವರಲ್ಲಿ ಇಬ್ಬರಿಗೆ ಇಬ್ಬರೂ ಗೆದ್ದಿದ್ದಾರೆ. ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಹಾಗೂ ಸುರಪುರದಲ್ಲಿ ರಾಜು ಗೌಡ ಪರ ಪ್ರಚಾರ ಮಾಡಿದ್ದರು. ಇಬ್ಬರೂ ಗೆದ್ದಿದ್ದಾರೆ.

  ದರ್ಶನ್ ಪ್ರಚಾರ ಮಾಡಿದವರಲ್ಲಿ ಸಿಎಂ ಸಿದ್ದರಾಮಯ್ಯ ಸೋತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದರ್ಶನ್ ಪ್ರಚಾರ ಮಾಡಿದ್ದರು.

  ಯಶ್ ಪ್ರಚಾರ ಮಾಡಿದವರಲ್ಲಿ 50:50 ಫಲಿತಾಂಶ ಬಂದಿದೆ. ಯಶ್ ಪ್ರಚಾರ ಮಾಡಿದ್ದವರಲ್ಲಿ ಬಬಲೇಶ್ವರದ ಎಂ.ಬಿ.ಪಾಟೀಲ್, ಕೃಷ್ಣರಾಜ ಕ್ಷೇತ್ರದ ರಾಮದಾಸ್, ಕೆ.ಆರ್.ನಗರ ಕ್ಷೇತ್ರದ ಸಾ.ರಾ. ಮಹೇಶ್, ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆದ್ದಿದ್ದಾರೆ.

  ಪ್ರಚಾರದಲ್ಲಿ ಅತಿ ದೊಡ್ಡ ಸೋಲು ಅನುಭವಿಸಿರುವುದು ನಟ ಪ್ರಕಾಶ್ ರೈ. ಹಲವು ತಿಂಗಳ ಕಾಲ ಬಿಜೆಪಿ ವಿರುದ್ಧ ಆಂದೋಲನವನ್ನೇ ನಡೆಸಿದ್ದ ಪ್ರಕಾಶ್ ರೈ ನಿರೀಕ್ಷೆಗೆ ವಿರುದ್ಧವಾಗಿ ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.

 • ಹುಚ್ಚ ವೆಂಕಟ್ 764

  huccha venkat creates record in elections

  ಹುಚ್ಚ ವೆಂಕಟ್.. ಸದಾ ಎಕ್ಕಡ.. ನನ್‍ಮಗಂದ್ ಡೈಲಾಗುಗಳಿಂದಲೇ ಚಿರಪರಿಚಿತ. ಈ ಬಾರಿಯ ಚುನಾವಣೆಯಲ್ಲಿ ವೆಂಕಟ್ ಕೂಡಾ ಸುದ್ದಿ ಮಾಡಿದ್ದರು. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಪಕ್ಷೇತರರಾಗಿ ಚುನಾವಣೆಗೆ ನಿಂತಿದ್ದರು. ಆದರೆ, ಗೊತ್ತಿರಲಿ.. ಹುಚ್ಚ ವೆಂಕಟ್ ನಾಮಪತ್ರ ಸಲ್ಲಿಸಿದ್ದು ಬಿಟ್ಟು, ಕ್ಷೇತ್ರದತ್ತ ತಲೆ ಹಾಕಲೇ ಇಲ್ಲ. ಒಂದೇ ಒಂದು ದಿನ, ಒಂದೇ ಒಂದು ಮನೆಗೆ ಹೋಗಿ ವೋಟು ಕೇಳಲಿಲ್ಲ. ದುಡ್ಡಿಗಾಗಿ ವೋಟ್ ಮಾರಿಕೊಳ್ಳೊವ್ರು ನನ್ನ ಎಕ್ಕಡಕ್ಕೆ ಸಮ ಎಂದು ಡೈಲಾಗು ಹೊಡೆದಿದ್ದ ಹುಚ್ಚ ವೆಂಕಟ್, ಕ್ಷೇತ್ರದಲ್ಲಿ ನಿಜಕ್ಕೂ ಅದ್ಭುತ ಸಾಧನೆ ಮಾಡಿದ್ದಾರೆ. 

  ಏನ್ ಗೊತ್ತಾ..? ಹುಚ್ಚ ವೆಂಕಟ್ ಅವರಿಗೆ ಕ್ಷೇತ್ರದಲ್ಲಿ 764 ಮತಗಳು ಬಿದ್ದಿವೆ. ಅಫ್‍ಕೋರ್ಸ್, ಠೇವಣಿ ಕಳೆದುಕೊಂಡಿದ್ದಾರೆ. ಇಷ್ಟಿದ್ದರೂ ಗೆದ್ದ ಮುನಿರತ್ನ, 2ನೇ ಸ್ಥಾನದಲ್ಲಿದ್ದ ಮುನಿರಾಜು ಗೌಡ, 3ನೇ ಸ್ಥಾನಕ್ಕೆ ತೃಪ್ತಿಪಟ್ಟ ರಾಮಚಂದ್ರ ಅವರನ್ನು ಬಿಟ್ಟರೆ ಅತೀ ಹೆಚ್ಚು ಮತ ಪಡೆದಿರುವ ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್ ಮಾತ್ರ.

   

 • ಹುಚ್ಚ ವೆಂಕಟ್‍ಗೆ ಚಪ್ಪಲಿಯೇ ಸಿಕ್ತು..!

  huccha venkat gets chappal symbol

  ಹುಚ್ಚ ವೆಂಕಟ್ ಈ ಬಾರಿ ಚುನಾವಣೆಗೆ ನಿಂತಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಹುಚ್ಚ ವೆಂಕಟ್ ಪಕ್ಷೇತರ ಅಭ್ಯರ್ಥಿ. ಶಾಸಕ ಮುನಿರತ್ನ ವಿರುದ್ಧ ನನ್ನ ಹೋರಾಟ ಎಂದು ಗುಡುಗುತ್ತಿರುವ ಹುಚ್ಚ ವೆಂಕಟ್‍ಗೆ, ಈ ಚುನಾವಣೆಯಲ್ಲಿ ಸಿಕ್ಕಿರುವ ಚಿಹ್ನೆಯೇನು ಗೊತ್ತಾ..? ಚಪ್ಪಲಿ.

  ನನ್ ಮಗಂದ್.. ನನ್ ಎಕ್ಕಡಾ..  ಅನ್ನೋ ವೆಂಕಟ್‍ನ ಡೈಲಾಗ್‍ನಿಂದ ಪ್ರೇರೇಪಣೆಗೊಂಡೇನೂ  ಚುನಾವಣಾ ಆಯೋಗ ಈ ಚಿಹ್ನೆ ಕೊಟ್ಟಿಲ್ಲ. ಸ್ವತಃ ಹುಚ್ಚ ವೆಂಕಟ್ ಕೇಳಿಕೊಂಡಿರುವ ಚಿಹ್ನೆ ಇದು. ಆದರೆ, ವೆಂಕಟ್ ಮಹಿಳೆಯರ ಚಪ್ಪಲಿಯ ಗುರುತು ಕೇಳಿದ್ದರೆ, ಸಿಕ್ಕಿರುವುದು ಪುರುಷರ ಚಪ್ಪಲಿಯ ಗುರುತು.

  ನಮ್ ತಂದೆಗೆ ನಾವ್ ಯಾವತ್ತೂ ಚಪ್ಲಿ ಸಮಾನ. ಯಾವತ್ತಾದ್ರೂ ನಿಮ್ ಅಪ್ಪಂಗೆ ಚಪ್ಲಿ ತಕ್ಕೊಟ್ಟಿದ್ದೀರಾ..? ಎಂದು ಮರುಪ್ರಶ್ನೆ ಮಾಡೋ ವೆಂಕಟ್‍ಗೆ, ಚಪ್ಪಲಿ ಚಿಹ್ನೆಯ ಬಗ್ಗೆ ಖುಷಿಯಿದೆ. ಯಾರು ಐನೂರು, ಸಾವಿರಕ್ಕೆ ತಮ್ಮ ತಮ್ಮ ವೋಟುಗಳನ್ನ ಮಾರಿಕೊಳ್ತಾರೋ ಅವರು ನನ್ನ ಎಕ್ಕಡದ ಸಮಾನ ಎಂದು ಗುಡುಗಿದ್ದಾರೆ ಹುಚ್ಚ ವೆಂಕಟ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery