ನಾಗರಹಾವು. ಕನ್ನಡ ಚಿತ್ರರಂಗದ ಈ ಕ್ಲಾಸ್ ಸಿನಿಮಾ, ಮತ್ತೊಮ್ಮೆ ರಿಲೀಸ್ ಆಗಿದೆ. 45 ವರ್ಷಗಳ ನಂತರ ತೆರೆ ಕಂಡಿರುವ ಸಿನಿಮಾವನ್ನು ವಿಷ್ಣು ಅಭಿಮಾನಿಗಳು ಹಬ್ಬದಂತೆ ಸ್ವಾಗತಿಸುತ್ತಿದ್ದಾರೆ. ವಿಷ್ಣು ಮತ್ತು ಅಂಬರೀಷ್ ಎಂಬ ಎರಡು ಧ್ರುವತಾರೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಅದು. ಇಷ್ಟು ವರ್ಷಗಳಾದರೂ ರಾಮಾಚಾರಿ ಅಂದ್ರೆ ನೆನಪಾಗೋದು ವಿಷ್ಣುವರ್ಧನ್. ಜಲೀಲ ಅಂದ್ರೆ ಅಂಬಿ, ಚಾಮಯ್ಯ ಮೇಷ್ಟ್ರು ಅಶ್ವತ್ಥ್, ಅಲಮೇಲು, ಮಾರ್ಗರೇಟ್.. ಹೀಗೆ ಇಡೀ ತಂಡದ ಪಾತ್ರಗಳ ಹೆಸರೂ ಕೂಡಾ ಇಷ್ಟು ವರ್ಷಗಳ ನಂತರ ಅಭಿಮಾನಿಗಳ ನಾಲಗೆ ತುದಿಯಲ್ಲಿದೆ. 5 ನಿಮಿಷದ ಹಾಡಿನಲ್ಲಷ್ಟೇ ಕಾಣಿಸಿಕೊಂಡ ಜಯಂತಿಯನ್ನು ಒನಕೆ ಓಬವ್ವಳಾಗಿಸಿದ ಸಿನಿಮಾ ನಾಗರಹಾವು. ಹೀಗಾಗಿಯೇ ಈ ಸಿನಿಮಾ ನೋಡೋಕೆ ಪ್ರೇಕ್ಷಕರಷ್ಟೇ ಕುತೂಹಲಿಗಳಾಗಿರುವುದು ಸ್ಟಾರ್‍ಗಳು.
ಶಿವರಾಜ್‍ಕುಮಾರ್ - ಸಿನಿಮಾ ರಿಲೀಸ್ ಆದಾಗ ನನಗೆ 11-12 ವರ್ಷ ಇರಬೇಕು. ವಿಷ್ಣು ಸರ್‍ನ ನೋಡಿ ಎಷ್ಟು ಹ್ಯಾಂಡ್‍ಸಮ್ ಆಗಿದ್ದಾರೆ ಎಂದು ಕೊಂಡಿದ್ದೆ. ಅಂಬಿ ಮಾಮಂಗೆ ಆಗ 20 ವರ್ಷ ಇತ್ತೇನೋ. ಚಿಕ್ಕ ಪಾತ್ರವಾದರೂ ಅಚ್ಚಳಿಯದೆ ಉಳಿದುಬಿಟ್ಟಿತ್ತು. ಚಾಮಯ್ಯ ಮೇಷ್ಟ್ರು ಅಶ್ವತ್ಥ್, ಆರತಿ, ಲೀಲಾವತಿ ಎಲ್ಲರದ್ದೂ ಅದ್ಭುತ ಅಭಿನಯ. ಸಂಗೀತ, ಮೇಕಿಂಗ್ ಬೊಂಬಾಟ್. ಸಿನಿಮಾಸ್ಕೋಪ್ ನಾಗರಹಾವು ನೋಡೋಕೆ ಕಾತುರನಾಗಿದ್ಧೇನೆ.
ಸುದೀಪ್ - ಆ ಸಿನಿಮಾನ ರೀಪ್ಲೇಸ್ ಮಾಡೋಕೆ ಆಗಲ್ಲ. ರಾಮಾಯಣ, ಮಹಾಭಾರತ ಹೇಗೋ, ಸಿನಿಮಾದವರಿಗೆ ನಾಗರಹಾವು ಹಾಗೆ. ನೋಡಬೇಕು, ಸುಮ್ಮನೆ ಬಿಡಬೇಕು ಅಷ್ಟೆ. ಅದೊಂಥರಾ ಪಕ್ಕದಲ್ಲೇ ಹಾದು ಹೋಗ್ತಿರೋ ಕರೆಂಟ್ ವೈರ್ ಇದ್ದಂತೆ. ನಾವು ದೂರ ನಿಂತು ಖುಷಿ ಪಡಬೇಕು. ಅದನ್ನು ಯಾರೂ ಮರುಸೃಷ್ಟಿ ಮಾಡೋಕೆ ಸಾಧ್ಯ ಇಲ್ಲ. ಆ ಸಿನಿಮಾ ನೋಡೋಕೆ ನಾನಂತೂ ಕಾಯುತ್ತಿದ್ದೇನೆ.
ದರ್ಶನ್ - ಸಂಪತ್‍ಕುಮಾರ್‍ರನ್ನು ವಿಷ್ಣುವರ್ಧನ್ ಆಗಿಸಿದ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡಕ್ಕೆ ಎರಡು ಅಮೂಲ್ಯ ರತ್ನಗಳನ್ನು ನೀಡಿದ ಸಿನಿಮಾ ಅದು. ಶುಭವಾಗಲಿ
ಯಶ್ - 40 ವರ್ಷಗಳ ಹಿಂದಿನ ಸಿನಿಮಾ ಇವತ್ತಿಗೂ ರಿಲೇಟ್ ಅನ್ನಿಸುತ್ತೆ. ಚಿಕ್ಕವನಿದ್ಧಾಗ ನೋಡಿದ್ದೆ. ವಿಷ್ಣು ಸರ್ ಮಾಡಿದ ಆ ಪಾತ್ರವನ್ನು ಮಾಡೋದು ಇವತ್ತಿಗೂ ಕಷ್ಟ. ಹೊಸ ಟೆಕ್ನಾಲಜಿಯಲ್ಲಿ ಸಿನಿಮಾ ಬರ್ತಿರೋದು ನಮಗೆಲ್ಲ ಹಬ್ಬವೇ ಸರಿ. ಎಲ್ಲರೂ ಈ ಸಿನಿಮಾ ನೋಡಬೇಕು.
ಎಲ್ಲರಿಗಿಂತ ಸ್ಪೆಷಲ್ ರವಿಚಂದ್ರನ್ ಮತ್ತು ಬಾಲಾಜಿ. ನಾಗರಹಾವು ಅವರದ್ದೇ ಈಶ್ವರಿ ಪ್ರೊಡಕ್ಷನ್ ಸಂಸ್ಥೆಯ ಸಿನಿಮಾ. ವಿಷ್ಣುವರ್ಧನ್‍ರನ್ನ ನನ್ನ ತಂದೆ ವೀರಸ್ವಾಮಿ, ದೊಡ್ಡಮಗ ಅಂತಾನೇ ಕರೀತಿದ್ರು. ರಾಮಾಚಾರಿ ಅನ್ನೋ ಪಾತ್ರದಲ್ಲಿ ವಿಷ್ಣು ಅಷ್ಟರಮಟ್ಟಿಗೆ ಬೆರೆತು ಹೋಗಿದ್ರು. ನನಗೆ ಆ ಸಿನಿಮಾ ಹೆಸರು ಕೇಳಿದ ಕೂಡಲೇ ನನ್ನ ತಂದೆ, ಪುಟ್ಟಣ್ಣ ಕಣಗಾಲ್, ಅಶ್ವತ್ಥ್ ಸೇರಿದಂತೆ ಚಿತ್ರದಲ್ಲಿ ಭಾಗಿಯಾದ ಪ್ರತಿಯೊಬ್ಬರೂ ನೆನಪಾಗ್ತಾರೆ ಅಂತಾರೆ ರವಿಚಂದ್ರನ್.
ಸ್ಟಾರ್ ಕಲಾವಿದರ ಹೊಸ ಸಿನಿಮಾ ರಿಲೀಸ್ ಆಗುವಾಗ ಇರುವಂಥದ್ದೇ ಕ್ರೇಜ್, 45 ವರ್ಷಗಳ ನಂತರ ರೀ-ರಿಲೀಸ್ ಆಗುತ್ತಿರುವ ನಾಗರಹಾವುಗೂ ಇದೆ. ಬೆಳಗ್ಗೆ 6 ಗಂಟೆಗೇ ಶೋಗಳು ನಡೆದಿವೆ.