ಇದು ಸ್ಯಾಂಡಲ್ ವುಡ್ ಸಂಭ್ರಮ. ಸರಿಯಾಗಿ 6 ತಿಂಗಳಿಗೆ ಈ ವರ್ಷ ರಿಲೀಸ್ ಆದ ಚಿತ್ರಗಳ ಸಂಖ್ಯೆ 100ರ ಗಡಿ ದಾಟಿದೆ. ಜುಲೈ 1ಕ್ಕೆ ರಿಲೀಸ್ ಆದ ಬೈರಾಗಿ, ವಿಂಡೋ ಸೀಟ್ ಚಿತ್ರಗಳೊಂದಿಗೆ ಈ ವರ್ಷ ರಿಲೀಸ್ ಆದ ಒಟ್ಟು ಚಿತ್ರಗಳ ಸಂಖ್ಯೆ 100ರ ಗಡಿ ದಾಟಿದೆ. 100ನೇ ಸಿನಿಮಾ ಪಟ್ಟವನ್ನು ಸೆಂಚುರಿ ಸ್ಟಾರ್ ಚಿತ್ರಕ್ಕಾದರೂ ಕೊಡಬಹುದು. ನಿರೂಪ್ ಭಂಡಾರಿ-ಶೀತಲ್ ಶೆಟ್ಟಿ ಜೋಡಿಯ ವಿಂಡೋ ಸೀಟ್ ಚಿತ್ರಕ್ಕಾದರೂ ಕೊಡಬಹುದು.
ಈ ವರ್ಷ ಶುರುವಾಗಿದ್ದು ಒಂಭತ್ತನೇ ದಿಕ್ಕು ಚಿತ್ರದಿಂದ. ಲಾಕ್ ಡೌನ್ ಮುಗಿದ ಮೇಲೆ ಥಿಯೇಟರಿಗೆ ಬಂದ ಮೊದಲ ಸಿನಿಮಾ ಯೋಗಿ-ದಯಾಳ್ ಪದ್ಮನಾಭನ್ ಕಾಂಬಿನೇಷನ್`ನ ಒಂಭತ್ತನೇ ದಿಕ್ಕು. ಅದಾದ ನಂತರ ಸಿನಿಮಾಗಳ ಪ್ರವಾಹವೇ ಹರಿದು ಬಂತು.
ಫೆಬ್ರವರಿಯಲ್ಲಿ ರಿಲೀಸ್ ಆದ ಚಿತ್ರಗಳಲ್ಲಿ ಸದ್ದು ಮಾಡಿದ್ದು ಏಕ್ ಲವ್ ಯಾ ಮತ್ತು ಬೈ ಟು ಲವ್ ಚಿತ್ರಗಳು.
ಮಾರ್ಚ್‍ನಲ್ಲಿ ಜೇಮ್ಸ್ ದಾಖಲೆ ಬರೆಯಿತು. ತಮ್ಮ ಕೊನೆಯ ಚಿತ್ರವನ್ನೂ ಯಶಸ್ವಿಯಾಗಿ ಗೆಲ್ಲಿಸಿದ್ದರು ಪುನೀತ್ ರಾಜಕುಮಾರ್. ಜೇಮ್ಸ್ 100 ಕೋಟಿ ಗಳಿಕೆಯನ್ನೂ ದಾಟಿತು.
ಏಪ್ರಿಲ್ ಸಂಪೂರ್ಣ ಕೆಜಿಎಫ್ ಹಬ್ಬಕ್ಕೆ ಮೀಸಲು. ನಂತರ ಬಂದ ಕೆಲವು ಚಿತ್ರಗಳು ಕಂಟೆಂಟ್‍ನಲ್ಲಿ ಗಮನ ಸೆಳೆದರೂ ಬಾಕ್ಸಾಫೀಸ್‍ನಲ್ಲಿ ಕೇಳಿ ಬಂದಿದ್ದು ಒಂದೇ ಹೆಸರು ಕೆಜಿಎಫ್..ಕೆಜಿಎಫ್..ಕೆಜಿಎಫ್.. ಜೂನ್‍ನಲ್ಲಿ ಈಗ ಚಾರ್ಲಿ ಸದ್ದು ಮಾಡುತ್ತಿದೆ. ಹೊಸ ದಾಖಲೆ ಬರೆಯುತ್ತಿದೆ. ರಕ್ಷಿತ್ ಶೆಟ್ಟಿ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡಿದ್ದಾರೆ.
ಇವುಗಳ ನಡುವೆ ಅವತಾರಪುರುಷ, ತುರ್ತು ನಿರ್ಗಮನ, ವೀಲ್`ಚೇರ್ ರೋಮಿಯೋ ಚಿತ್ರಗಳು ವಿಭಿನ್ನ ಕಥೆಗಳ ಮೂಲಕ ಗಮನ ಸೆಳೆದವು.
ಉಪೇಂದ್ರ, ಯಶ್, ಪುನೀತ್, ಯೋಗಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ವಿನೋದ್ ಪ್ರಭಾಕರ್, ಧನ್‍ವೀರ್, ಅಜೇಯ್ ರಾವ್.. ಸೇರಿದಂತೆ ಸ್ಟಾರ್ ನಟರು ತಲಾ ಒಂದೊಂದು ಚಿತ್ರಗಳಲ್ಲಿ ಕಾಣಿಸಿಕೊಂಡರು. ಡಾಲಿ ಧನಂಜಯ್ 2021ರ ಕೊನೆಯಲ್ಲಿ ಹಿಟ್ ಕೊಟ್ಟು, ಈಗ 21 ಅವರ್ಸ್ ಮೂಲಕ ವರ್ಷವಿಡೀ ಸಂಭ್ರಮಿಸುವ ಸ್ಟಾರ್ ಆಗಿದ್ದಾರೆ.
ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಹಾಗೂ ರಕ್ಷಿತಾ ಪ್ರೇಮ್ ಅವರ ಪುತ್ರ ರಾಣಾ ಚಿತ್ರರಂಗಕ್ಕೆ ಹೀರೋಗಳಾಗಿ ಎಂಟ್ರಿ ಕೊಟ್ಟರು. ನಿರ್ದೇಶಕರಲ್ಲಿ ಕಿರಣ್ ರಾಜ್ 777 ಚಾರ್ಲಿ ಮೂಲಕ ಗುರುತಿಸಿಕೊಡ ಹೊಸ ಪ್ರತಿಭೆ.