ಬೇಡ ಬೇಡ ಎಂದರೂ ಪ್ರತಿವರ್ಷ ಡಿಸೆಂಬರ್ 29ಕ್ಕೆ ಹಾಳು ನೆನಪೊಂದು ಕಾಡಿ ನನ್ನ ಕಂಗೆಡಿಸುತ್ತದೆ. ಇದು ಕ್ರೌರ್ಯವೋ ಅಥವಾ ದೃಶ್ಯಮಾಧ್ಯಮದ ಅನಿವಾರ್ಯ ಕರ್ಮವೋ ಎಂಬ ಬಗ್ಗೆ ನನಗೇ ಗೊಂದಲವಿದೆ. ಆದರೆ ಐದು ವರ್ಷದ ಹಿಂದೆ ನಡೆದ ಆ ಘಟನೆ ನೆನಪಾದಾಗಲೆಲ್ಲಾ ಒಂದು ಗಾಢವಿಷಾದ ನನ್ನನ್ನು ಆವರಿಸಿಕೊಳ್ಳುತ್ತದೆ. ಇದು ಸಿ.ಅಶ್ವತ್ಥ್ ಅವರ ಸಾವಿಗೆ ಸಂಬಂಧಪಟ್ಟಿದ್ದು. ನಾನಾಗ ಚಾನೆಲ್ಲಲ್ಲಿ ಕೆಲಸ ಮಾಡುತ್ತಿದ್ದೆ. ಅಶ್ವತ್ಥ್ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ಅದು ಹೇಗೋ ತೇಲಿಬಂದು ನನ್ನ ಕಿವಿ ತಲುಪಿದಾಗ ನಾನು ಫೋನ್ ಮಾಡಿದ್ದು ಕಿಕ್ಕೇರಿ ಕೃಷ್ಣಮೂರ್ತಿಗೆ. ಅವರು ಅಶ್ವತ್ಥ್ ಬಲಗೈ ಬಂಟ ಎಂದೇ ಗುರುತಾದವರು. ಕಿಕ್ಕೇರಿ ಗದ್ಗದ ಕಂಠದಲ್ಲಿ ಹೇಳಿದರು “ಕಂಡೀಷನ್ ಸೀರಿಯಸ್ಸಾಗಿದೆ. ಬದುಕೋದು ಕಷ್ಟ ಅಂತಿದ್ದಾರೆ ಡಾಕ್ಟರ್”. ಈ ಸುದ್ದಿಯನ್ನು ಸಂಪಾದಕರಿಗೆ ತಿಳಿಸಿದಾಗ ಅವರು ಸಿನಿಮಾ ವಿಭಾಗದ ವರದಿಗಾರ್ತಿ ಸ್ವಾತಿ ಪತ್ರೆಯನ್ನು ತಕ್ಷಣ ಕೊಲಂಬಿಯಾ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು. ಆ ಹುಡುಗಿ ಲಗುಬಗೆಯಿಂದ ಕ್ಯಾಮರಾಮನ್ ಜೊತೆ ಹೋಗಿ ಸಂಜೆ ಹೊತ್ತಿಗೆ ವಾಪಸ್ ಬಂತು. ಆರೋಗ್ಯದಲ್ಲೇನೂ ಸುಧಾರಣೆಯಾಗಿಲ್ಲ ಎಂಬ ಮಾಹಿತಿಯಷ್ಟೇ ಆಕೆಯ ಬಳಿಯಿತ್ತು. ಮಾರನೇ ದಿನ ಮತ್ತೆ ಸ್ವಾತಿಗೆ ಆಸ್ಪತ್ರೆ ಡ್ಯೂಟಿ, ಆವತ್ತೂ ಅಶ್ವತ್ಥ್ ‘ಅವರಿಗೇನೂ ಆಗಲಿಲ್ಲ’. ಸ್ವಾತಿಗೆ ಇದೊಂದು ಖಾಯಂ ಅಸೈನ್ ಮೆಂಟ್ ಆಗಿಹೋಯಿತು. ಬೆಳಿಗ್ಗೆ ಕೊಲಂಬಿಯಾ ಆಸ್ಪತ್ರೆಗೆ ಹೋಗೋದು, ಸಂಜೆ ಪೆಚ್ಚುಮುಖ ಹಾಕಿಕೊಂಡು ವಾಪಸ್ ಬರೋದು. ಹೀಗೇ ಒಂದು ವಾರವೇ ಕಳೆದುಹೋಯಿತು. ಒಂದು ದಿನ ಸ್ವಾತಿ ನನ್ನ ಮುಂದೆ ನಿಂತು “ನಾನು ನಾಳೆಯಿಂದ ಕೊಲಂಬಿಯಾ ಆಸ್ಪತ್ರೆಗೆ ಹೋಗೋಲ್ಲ ಸರ್” ಅಂದಳು. ಯಾಕೆ ಏನಾಯಿತು ಎಂದು ಕೇಳಿದೆ. “ಇವತ್ತು ಅಶ್ವತ್ಥ್ ಅವರ ಪತ್ನಿ ಸಿಕ್ಕಿದ್ರು. ನೋಡಮ್ಮಾ ನೀನು ಹಗಲಿಡೀ ಇಲ್ಲಿ ಕಾಯುತ್ತಾ ನಿಂತಿರುವುದನ್ನು ನನ್ನಿಂದ ನೋಡೋಕ್ಕಾಗ್ತಿಲ್ಲ. ಅಶ್ವತ್ಥ್ ಅವರಿಗೇನಾದರೂ ಆದರೆ ನಾನೇ ನಿನಗೆ ಫೋನ್ ಮಾಡಿ ಹೇಳ್ತೀನಿ” ಅಂದ್ರು. ನಾನು ಗರಬಡಿದವನಂತೆ ನಿಂತೆ. ನನ್ನ ಗಂಡನ ಸಾವಿಗೋಸ್ಕರ ನೀವೆಲ್ಲಾ ಕಾಯುತ್ತಿದ್ದೀರಿ ಅನ್ನುವುದನ್ನು ಶ್ರೀಮತಿ ಅಶ್ವತ್ಥ್ ಬಹಳ ನಯವಾಗಿ ಹೇಳಿದ್ದರು. ವಿಪರ್ಯಾಸವೆಂದರೆ ಮಾರನೇ ದಿನವೇ ಅಶ್ವತ್ಥ್ ತೀರಿಕೊಂಡರು, ಆ ಹೊತ್ತಿಗೆ ಸ್ವಾತಿ ಸ್ಥಳದಲ್ಲಿರಲಿಲ್ಲ, ಹಾಗಾಗಿ ಬ್ರೇಕಿಂಗ್ ನ್ಯೂಸ್ ನಮ್ಮ ಚಾನೆಲ್ಲಿಗೆ ಸಿಗಲಿಲ್ಲ. ಮುಂದೆ ಸ್ವಾತಿಯ ಪರಿಸ್ಥಿತಿ ಏನಾಯಿತು ಅನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು.
ಅಶ್ವತ್ಥ್ ಸಾವಿನ ಬೆನ್ನಿಗೇ ಇನ್ನೊಂದು ಸುದ್ದಿ ಹರಿದಾಡತೊಡಗಿತ್ತು. ವಾಸ್ತವದಲ್ಲಿ ಅಶ್ವತ್ಥ್ ಎರಡು ದಿನ ಹಿಂದೆಯೇ ಅಸುನೀಗಿದ್ದರಂತೆ, ಆದರೆ ಡಿಸೆಂಬರ್ 29 ಅಶ್ವತ್ಥ್ ಜನ್ಮದಿನವಾಗಿದ್ದರಿಂದ ಆವತ್ತೇ ಅವರು ‘ತೀರಿಕೊಂಡರೆ ಚೆನ್ನಾಗಿರುತ್ತದೆ’ ಎಂದು ಅವರ ಆತ್ಮೀಯರು ತೀರ್ಮಾನಿಸಿದ್ದರಂತೆ. ಸುದೈವಶಾತ್, ಈ ಸುದ್ದಿಯನ್ನು ಯಾವ ಚಾನೆಲ್ಲೂ ಪ್ರಸಾರ ಮಾಡಲಿಲ್ಲ. ಅಶ್ವತ್ಥ್ ಏನಾದರೂ ಬದುಕುಳಿದಿದ್ದರೆ ಇಂಥಾ ಗಾಸಿಪ್ಪುಗಳನ್ನು ಖಂಡಿತಾ ಆನಂದಿಸುತ್ತಿದ್ದರು. ಯಾಕೆಂದರೆ ಅವರು ಪ್ರಚಾರಪ್ರಿಯರು, ಬಹುಜನಪ್ರಿಯರೂ ಹೌದು. ತನ್ನ ಸುತ್ತಮುತ್ತ ಹತ್ತಾರು ಜನರಿರಬೇಕು, ಅವರೆಲ್ಲರೂ ತದೇಕಚಿತ್ತದಿಂದ ತನ್ನ ಹಾಡು-ಮಾತುಗಳನ್ನು ಕೇಳಿಸಿಕೊಳ್ಳಬೇಕು, ಆಹಾ ಎಂದು ಆಗಾಗ ತಲೆದೂಗಬೇಕು, ಅವರ ಮಾತಿನ ಮಧ್ಯೆ ಬೇರೆ ಯಾರೂ ಹಸ್ತಕ್ಷೇಪ ಮಾಡಿ ರಸಭಂಗ ಮಾಡಬಾರದು, ಅವರಾಗಿಯೇ ‘ಅಲ್ವೇನ್ರೀ’ ಎಂದು ಹುಬ್ಬು ಹಾರಿಸಿದರೆ ಅಹುದಹುದು ಎನಬೇಕು. ಇವೆಲ್ಲವೂ ಅವರ ವರ್ಣರಂಜಿತ ವ್ಯಕ್ತಿತ್ವಕ್ಕೆ ಅಂಟಿಕೊಂಡ ಗುಣಗಳಾಗಿದ್ದವು. ಅವುಗಳನ್ನು ಅಶ್ವತ್ಥ್ ಅವರ ದೌರ್ಬಲ್ಯ ಎಂದು ಕರೆಯುವುದು ತಪ್ಪಾದೀತು. ಅವರ ಮಾತು ಒನ್ ವೇ ಟ್ರಾಫಿಕ್ ಆದರೂ ಅದನ್ನು ಆಲಿಸುವುದರಲ್ಲಿ ಒಂದು ಮಜಾ ಸಿಗುತ್ತಿತ್ತು. ಅವರ ಸಿಟ್ಟು, ವ್ಯಂಗ್ಯ, ತಮಾಷೆ, ತನ್ನ ರಾಗಕ್ಕೆ ತಾನೇ ಬೆರಗಾಗಿ ನಿಲ್ಲುವ ಪರಿ, ಪರನಿಂದೆಯಲ್ಲೂ ಸೃಜನಶೀಲತೆಯನ್ನು ಮೆರೆವ ರೀತಿ, ತನ್ನ ಕೈಗಳನ್ನೇ ಮಂತ್ರದಂಡದಂತೆ ಅಲ್ಲಾಡಿಸುತ್ತಾ ಥೇಟು ಜಾದೂಗಾರನಂತೆ ಶೂನ್ಯದಿಂದ ಅದೇನನ್ನೋ ಗಬಕ್ಕಂತ ಹಿಡಿದು ತೆಗೋ ಎಂದು ನಮ್ಮೆದೆರು ಕುಕ್ಕುವ ಶೈಲಿ- ಇವೆಲ್ಲವೂ ಸೇರಿಕೊಂಡು ಅವರೊಬ್ಬ ಗಾರುಡಿಗನಂತೆಯೇ ಕಾಣುತ್ತಿದ್ದರು. ವೇದಿಕೆ ಮೇಲೆಯೂ ಅಷ್ಟೆ, ಅವರು performing singer. ನಾ ಕುಣೀಬೇಕು, ನೀ ಮಣೀಬೇಕು ಅನ್ನುವ ಆಗ್ರಹ ಅವರ ಹಾವಭಾವದಲ್ಲಿರುತ್ತಿತ್ತು. ನಾವು ಮಣಿಮಣಿದು ದಣಿದರೂ ಅವರ ಕುಣಿತ ನಿಲ್ಲುತ್ತಿರಲಿಲ್ಲ.
c ashwath (pic - KM Veeresh)
ಹೀಗಿದ್ದರೂ ಅಶ್ವತ್ಥ್ ಸಂತನೋ, ಅನುಭಾವಿಯೋ ಆಗಲಿಲ್ಲ. ಕೆಲವು ವಿಷಯಗಳಲ್ಲಿ ಹುಲುಮಾನವರೇ ಆಗಿದ್ದರು. ಶ್ರೇಷ್ಠತೆಯ ವ್ಯಸನ ಅವರನ್ನು ಸದಾ ಕಾಡುತ್ತಿತ್ತು, ಜೊತೆಗೆ ಜನಪ್ರಿಯತೆಯ ವ್ಯಸನವೂ ಸೇರಿಕೊಂಡು ಅವರನ್ನು ಹೊಸ ಸಾಹಸಗಳತ್ತ ತುಡಿಯುವಂತೆ ಮಾಡುತ್ತಿತ್ತು. ಪತ್ರಕರ್ತರಿಗೆ ಸಂಗೀತಜ್ಞಾನ ಇರುವುದಿಲ್ಲ ಅನ್ನುವುದು ಅವರ ಗಟ್ಟಿ ನಂಬಿಕೆ, ಅದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆಯೂ ಅವರಲ್ಲಿತ್ತು. ಹಾಗಿದ್ದೂ ಅವರ ಗಾಯನ ಶೈಲಿಯಲ್ಲಿ ಭೂಪೇನ್ ಹಜಾರಿಕಾ ಆಗಾಗ ನುಸುಳುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಅದನ್ನೊಮ್ಮೆ ನನ್ನ ಬಾಸ್ ಆಗಿದ್ದ ಸಿ.ಸೀತಾರಾಂ ಮುಂದೆ ಹೇಳಿದ್ದೆ ಕೂಡಾ. ಸೀತಾರಾಂ ಹಿಂದುಮುಂದು ನೋಡದೇ ಅಶ್ವತ್ಥ್ ಅವರ ಬಳಿ ಇದನ್ನು ಕೇಳಿಯೇ ಬಿಟ್ಟರು. ಅಶ್ವತ್ಥ್ ಸಿಟ್ಟಿನಿಂದ ಕೂಗಾಡಬಹುದು ಎಂದು ನಾನಂದುಕೊಂಡಿದ್ದೆ. ಆದರೆ ಅವರು ತಣ್ಣಗಿನ ಧ್ವನಿಯಲ್ಲಿ “ನಿಜ, ನಾನು ಭೂಪೇನ್ ಅವರಿಂದ ಕೊಂಚ ಪ್ರಭಾವಿತನಾಗಿರುವುದು ನಿಜ. ಆದರೆ ಅವರು ಮಾಡದೇ ಇರುವ ಹಲವು ಪ್ರಯೋಗಗಳನ್ನು ನಾನು ಮಾಡಿದ್ದೇನೆ” ಎಂದಿದ್ದರು. ಅದು ನಿಜ ಕೂಡಾ. ಹಾಗೆ ನೋಡಿದರೆ ಸುಗಮಸಂಗೀತ ಅನ್ನುವ ವಿಶಿಷ್ಟ ಕಲ್ಪನೆ ಚಲಾವಣೆಯಲ್ಲಿರುವುದು ಕನ್ನಡದಲ್ಲಿ ಮಾತ್ರ. ಅದನ್ನು ಬೆಳೆಸಿ, ಪೋಷಿಸಿದವರು ಕಾಳಿಂಗರಾವ್ ಮತ್ತು ಮೈಸೂರು ಅನಂತಸ್ವಾಮಿ. ಅಶ್ವತ್ಥ್ ಅದನ್ನು ಇನ್ನಷ್ಟು ಜನಪ್ರಿಯವಾಗಿಸಿದರು. ಕಾವ್ಯಪ್ರಿಯರಿಗಷ್ಟೇ ಪರಿಚಿತವಾಗಿದ್ದ ಬಿ.ಆರ್. ಲಕ್ಷ್ಮಣರಾವ್, ಎಚ್ ಎಸ್ವಿ, ಲಕ್ಷೀನಾರಾಯಣ ಭಟ್ಟ, ಜಿಎಸ್ ಎಸ್ ಅವರಂಥವರ ಹೆಸರುಗಳನ್ನು ಹೋಟೆಲ್ ಮಾಣಿಗಳ ಅಂತರಂಗಕ್ಕೂ ತಲುಪಿಸಿದರು. ಮೊದಲೇ ಜನಪ್ರಿಯವಾಗಿದ್ದ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿಯವರ ಗೀತೆಗಳು ಅಶ್ವತ್ಥ್ ಅವರ ಹೊಸರಾಗದಿಂದ ಇನ್ನಷ್ಟು ನಳನಳಿಸಿದವು. ಉದಾಹರಣೆಗೆ ಪಿಬಿಎಸ್ ಹಾಡಿದ್ದ ‘ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು’ ಎಂಬ ಚಿತ್ರಗೀತೆಯನ್ನು ಅಶ್ವತ್ಥ್ ಬೇರೆಯೇ ಸ್ತರ ಮತ್ತು ಸ್ವರದಲ್ಲಿ ಹಾಡಿದರು. ಕವಿತೆಯ ಭಾವಕ್ಕೆ ತಕ್ಕಂತೆ ಸ್ವರಸಂಯೋಜಿಸಬೇಕು, ಕಿವಿಗೆ ಇಂಪಾಗಿ ಕೇಳಿಸಲಿ ಅನ್ನುವ ಕಾರಣಕ್ಕೆ ಭಾವಕ್ಕೆ ಚ್ಯುತಿಯಾಗಬಾರದು ಅನ್ನುವುದು ಅವರ ಧೋರಣೆಯಾಗಿತ್ತು. ದೂರ ಅನ್ನುವ ಪದವನ್ನು ಕವಿ ಬಳಸಿದರೆ ಗಾಯಕ ಅದನ್ನು ದೂ......ರ ಎಂದೇ ಹಾಡಬೇಕು, ಆಗ ಆ ದೂರದ ಕಲ್ಪನೆ ಕೇಳುಗನ ಮನಸ್ಸಿಗೆ ನಾಟುತ್ತದೆ ಅನ್ನುತ್ತಿದ್ದರು.
ರಾಗ ಸಂಯೋಜಕರಾಗಿ ಅಶ್ವತ್ಥ್ ಅವರ ರೇಂಜು ಬಹಳ ವಿಸ್ತಾರವಾದದ್ದು. ರಂಗಭೂಮಿ, ಸಿನಿಮಾ, ಸುಗಮಸಂಗೀತ, ಜಾನಪದ, ಸೀರಿಯಲ್ಲು ಶೀರ್ಷಿಕೆ ಗೀತೆ, ಇವೆಲ್ಲ ಪ್ರಕಾರಗಳಲ್ಲೂ ಅಶ್ವತ್ಥ್ ಕೈ ಆಡಿಸಿದರು. ಎಲ್ಲೂ ಸೋಲಲಿಲ್ಲ. ವಿಶೇಷವೆಂದರೆ ಕಾಳಿಂಗರಾವ್, ಅನಂತಸ್ವಾಮಿ ಮತ್ತು ಅಶ್ವತ್ಥ್ – ಈ ಮೂವರು ಕೂಡಾ ಗಾಯಕರು ಮತ್ತು ರಾಗಸಂಯೋಜಕರೂ ಆಗಿದ್ದರು. ಗಾಯಕನಾಗಿ ನನಗೆ ಇಂದಿಗೂ ಕಾಳಿಂಗರಾಯರೇ ಇಷ್ಟ. ಅವರ ಧ್ವನಿಯಲ್ಲಿರುವ ಸೂಕ್ಷ್ಮ ಪಲುಕುಗಳು ಅಶ್ವತ್ಥ್ ಕಂಠದಲ್ಲಿ ಸಿಗುವುದಿಲ್ಲ. ಆದರೆ ರಾಗಸಂಯೋಜನೆಯ ಮಾತು ಬಂದಾಗ, ಹೊಸಪ್ರಯೋಗಗಳ ಮಾತು ಬಂದಾಗ ಅಶ್ವತ್ಥ್ ಕೊಂಚ ಮುಂದೆ ನಿಲ್ಲುತ್ತಾರೆ. ಸುಗಮಸಂಗೀತದಲ್ಲಿ ಒಬ್ಬ ರಾಗಸಂಯೋಜಕ ಗೆಲ್ಲಬೇಕಾದರೆ ಕವಿಯ ಕಲ್ಪನೆಯನ್ನು, ಕವಿತೆ ಹೊರಹೊಮ್ಮಿಸುವ ಭಾವವನ್ನು ಮತ್ತು ಆ ಕಾವ್ಯ ಸೃಷ್ಟಿಯಾದ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ ನನ್ನ’ ಪದ್ಯವನ್ನು ಎಸ್ಪಿ. ಬಾಲಸುಬ್ರಹ್ಮಣ್ಯಂ ಸುಶ್ರಾವ್ಯವಾಗಿ ಹಾಡಿದ್ದಾರೆ. ಆದರೆ ಅಶ್ವತ್ ಅದೇ ಗೀತೆಗೆ ಹಾಕಿದ ರಾಗಸಂಯೋಜನೆ ಮತ್ತು ಹಾಡಿದ ರೀತಿಯಲ್ಲಿ ವಿಷಾದವೇ ಸ್ಥಾಯಿಯಾಗಿ ವಿಜೃಂಭಿಸಿತ್ತು. ಆ ಕವಿತೆಯ ಮೂಡನ್ನು ಪರ್ಫೆಕ್ಟ್ ಆಗಿ ಕಟ್ಟಿಕೊಟ್ಟಿದ್ದರು ಅಶ್ವತ್ಥ್. ಬೇಂದ್ರೆಯವರು ತನ್ನ ಪುತ್ರ ತೀರಿಕೊಂಡಾಗ ಪತ್ನಿಯ ಮುಖ ನೋಡುತ್ತಾ ಈ ಹಾಡು ಬರೆದಿದ್ದರು ಎಂದು ಯಾರೋ ಹೇಳಿದ ನೆನಪು.
ಅಶ್ವತ್ಥ್ ಅವರ ವ್ಯಕ್ತಿತ್ವದಲ್ಲಿ ನಾನು ಗುರುತಿಸಿದ ವಿರೋಧಾಭಾಸವೆಂದರೆ ಅವರ ಆತ್ಮರತಿ ಮತ್ತು ಹಾಸ್ಯಪ್ರಜ್ಞೆ. ಅವರ ಸ್ವಪ್ರಶಂಸೆ ಯಾವ ಮಾದರಿಯಲ್ಲಿರುತ್ತಿತ್ತು ಅನ್ನುವುದಕ್ಕೆ ಒಂದು ಉದಾಹರಣೆಃ ಒಂದು ದಿನ ಬೆಳ್ಳಂಬೆಳಿಗ್ಗೆ ಅಶ್ವತ್ಥ್ ತಮ್ಮ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ‘ಬೆಂಗಳೂರು ಆಕಾಶವಾಣಿ ಕೇಳಿದ್ಯೇನಯ್ಯಾ’ ಎಂದರಂತೆ. ಆತ ಇಲ್ಲ ಎಂದರು. ‘ಅದ್ಯಾವನೋ ಬಡ್ಡಿಮಗ ಎಷ್ಟು ಚೆನ್ನಾಗಿ ಹಾಡುತ್ತಿದ್ದ ಗೊತ್ತಾ, ನಾನಂತೂ ಸುಸ್ತಾಗಿ ಬಿಟ್ಟೆ’ ಎಂದರಂತೆ. ಯಾರವರು ಎಂದು ಆತ ಪ್ರಶ್ನಿಸಿದಾಗ, ‘ಅದ್ಯಾರೋ ಅಶ್ವತ್ಥ್ ಅಂತೆ’ ಎಂದು ಗಹಗಹಿಸಿ ನಕ್ಕರಂತೆ.
ಅಶ್ವತ್ಥ್ ಅಧ್ಯಕ್ಷತೆಯಲ್ಲಿ ಆಗಾಗ ನಡೆಯುತ್ತಿದ್ದ ಮೆಹಫಿಲ್ ಗಳಲ್ಲೂ ಅಷ್ಟೇ, ಬೇರೆ ಯಾರೂ ಹಾಡುವ ಹಾಗಿರಲಿಲ್ಲ. ಅದರಲ್ಲೂ ಅಶ್ವತ್ಥ್ ಅವರದೇ ರಾಗಸಂಯೋಜನೆಯನ್ನು ಇನ್ನಾರೋ ಹಾಡಿದರೆ ಅಶ್ವತ್ಥ್ ಕೆರಳಿ ಕೆಂಡವಾಗುತ್ತಿದ್ದರು. ಒಮ್ಮೆ ಬಿ.ಆರ್. ಲಕ್ಷ್ಮಣರಾಯರ ಸೋದರ ಶಂಕರ್ ಅವರು ತನ್ನಣ್ಣನೇ ರಚಿಸಿದ ‘ಅಮ್ಮಾ ನಿನ್ನ ಎದೆಯಾಳದಲ್ಲಿ’ ಹಾಡನ್ನು ಹಾಡಿದಾಗ ಅಶ್ವತ್ಥ್ ಆ ಟೇಬಲ್ಲಿಂದ ಎದ್ದುಹೋಗಿದ್ದರು. ಇನ್ನೊಂದು ಘಟನೆ ನಡೆದದ್ದು ಬಾಗಲಕೋಟೆಯ ಲಾಡ್ಜ್ ಒಂದರಲ್ಲಿ. ‘ನಾಗಮಂಡಲ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭವದು. ಸಿನಿಮಾ ಪತ್ರಿಕಾ ಪ್ರಚಾರಕರ್ತ ನಾಗೇಂದ್ರ ಥೇಟ್ ಅಶ್ವತ್ಥ್ ಥರಾನೇ ‘ತರವಲ್ಲ ತೆಗೀ ನಿನ್ನ ತಂಬೂರಿ ಸ್ವರಾ’ ವಚನ ಹಾಡಿದರು. ಹಾಡು ಮುಗಿದ ತಕ್ಷಣ ಅಶ್ವತ್ಥ್ ಹೇಳಿದರು ‘ಇನ್ನೊಂದು ಹಾಡು ಹಾಡಿದ್ರೆ ನಿನ್ನನ್ನು ಕಿಟಿಕಿಯಿಂದಾಚೆ ಎಸೆಯುತ್ತೇನೆ’.
prakash rai, c ashwath (pic - KM Veeresh)
ಇದೇ ಅಶ್ವತ್ಥ್ ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುತ್ತಿದ್ದದ್ದೂ ಉಂಟು. ಅವರೇ ಹೇಳಿದ ಅಂಥಾದ್ದೊಂದು ಕತೆ ಇಲ್ಲಿದೆಃ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದ ಬಳಿಕ ಮುಂದಿರುವ ಬಾರ್ ಅಂಡ್ ರೆಸ್ಟಾರೆಂಟಲ್ಲಿ ಅಶ್ವತ್ಥ್ ಮತ್ತು ಗೆಳೆಯರ ಬಳಗ ಗುಂಡು ಹಾಕುತ್ತಾ ಕುಳಿತಿತ್ತು. ಮಧ್ಯರಾತ್ರಿ ಕಳೆದು ಗಂಟೆ ಎರಡೂವರೆ ಆದರೂ ಗಾನ ಮತ್ತು ಪಾನಗೋಷ್ಠಿ ನಡೆದೇ ಇತ್ತು. ನೈಟ್ ಶಿಫ್ಟಲ್ಲಿದ್ದ ಸಬ್ ಇನ್ ಸ್ಪೆಕ್ಟರ್ ಮತ್ತು ಇಬ್ಬರು ಪೀಸಿಗಳು ಹೋಟೆಲ್ ಒಳಗೆ ಬಂದು ಮೆನೇಜರ್ ಗೆ ಬಾಗಿಲು ಹಾಕುವಂತೆ ಹೇಳಿದರು. ಗಲಾಟೆ ಕೇಳಿದ ಅಶ್ವತ್ಥ್ ಕೆಳಗೆ ಬಂದರು. ಎಸ್ಸೈ ಗೆ ದಬಾಯಿಸಿದರು, ಆತ ಜಗ್ಗಲಿಲ್ಲ. ಕೊನೆಗೆ ಅಶ್ವತ್ಥ್ ‘ನಾನ್ಯಾರು ಗೊತ್ತಾ’ ಎಂದು ಅಬ್ಬರಿಸಿದರು. ‘ನೀವ್ಯಾರು’ ಎಂದಾತ ಮುಗ್ಧತೆಯಿಂದ ಕೇಳಿದ. ‘ನಾನು ಅಶ್ವತ್ಥ್’ ಎಂದು ಇವರು ಜೋರಾಗಿ ಕಿರುಚಿದರು. ‘ಅದಕ್ಕೆ ನಾನೇನು ಮಾಡ್ಲಿ, ವ್ಯಾನು ಹತ್ತಿ ಪೊಲೀಸ್ ಸ್ಟೇಷನ್ನಿಗೆ ಬನ್ನಿ’ ಅಂದನಂತೆ ಎಸ್ಸೈ. ಮಾರನೇ ದಿನ ಬೆಳಿಗ್ಗೆ ಇನ್ ಸ್ಪೆಕ್ಟರ್ ಬಂದು ಅಶ್ವತ್ಥ್ ಅವರನ್ನು ಗುರುತಿಸುವ ತನಕ ಇಡೀ ಗ್ಯಾಂಗು ಪೊಲೀಸ್ ಸ್ಟೇಷನ್ ನಲ್ಲೇ ಇತ್ತು.
ಹಾಗಂತ ಅಶ್ವತ್ಥ್ ಜನಪ್ರಿಯತೆಯನ್ನು ಸಂದೇಹಿಸುವ ಹಾಗಿಲ್ಲ. ‘ಕೆಂಚಾಲಾ ಮಚ್ಚಾಲೋ’ ಹಾಡು ಫೇಮಸ್ ಆದನಂತರ ಅಶ್ವತ್ಥ್ ರೌಡಿಗಳಿಗೂ ಮೆಚ್ಚುಗೆಯಾದರು. ಶ್ರೀರಾಮಪುರದಲ್ಲಿದ್ದ ಅಶ್ವತ್ಥ್ ಅಭಿಮಾನಿಯೊಬ್ಬ ಗಣೇಶನ ಹಬ್ಬಕ್ಕೆ ಒತ್ತಾಯ ಮಾಡಿ ಕರಕೊಂಡು ಹೋದನಂತೆ. ಅಲ್ಲಿ ನೋಡಿದರೆ ಇನ್ನೂರು ಜನರಿದ್ದರು, ಎಲ್ಲರೂ ಎಷ್ಟು ಕುಡಿದಿದ್ದರು ಅಂದರೆ ವೇದಿಕೆಗೇ ಎಣ್ಣೆ ಘಾಟು ಬಡಿಯುತ್ತಿತ್ತು. ಕುವೆಂಪು ಕವಿತೆಯಿಂದ ಅಶ್ವತ್ಥ್ ಗಾನಗೋಷ್ಠಿ ಆರಂಭವಾಯಿತು. ತಕ್ಷಣ ಸಭೆಯಿಂದ ಆವಾಜ್ ಕೇಳಿಬಂತು ‘ಕೆಂಚಾಲೋ ಹಾಡು ಗುರೂ’. ಕುಡುಕರನ್ನು ಎದುರು ಹಾಕಿಕೊಳ್ಳುವುದು ಜೀವಕ್ಕೆ ಒಳ್ಳೆಯದಲ್ಲ ಎಂದು ಅಶ್ವತ್ಥ್ ಅದೇ ಹಾಡು ಹಾಡಿದರು. ಹಾಡು ಮುಗಿದ ತಕ್ಷಣ ಸಿಳ್ಳೆ-ಚಪ್ಪಾಳೆ. ಯಾರೋ ಒಬ್ಬ ಪುಡಿರೌಡಿ ಬಂದು ಅಶ್ವತ್ಥ್ ಕತ್ತಿಗೆ ನೋಟಿನ ಹಾರ ಹಾಕಿ ತಬ್ಬಿಕೊಂಡ. ಜನ ಒನ್ಸ್ ಮೋರ್ ಅಂದರು. ಆವತ್ತಿನ ರಸಮಂಜರಿ ಕಾರ್ಯಕ್ರಮದಲ್ಲಿ ಅಶ್ವತ್ಥ್ ಹಾಡಿದ್ದು ಒಂದೇ ಹಾಡು, ಅದೇ ಕೆಂಚಾಲೋ ಮಚ್ಚಾಲೋ. ಅದು ಹನ್ನೆರಡು ಸಾರಿ ರಿಪೀಟ್ ಆಗಿತ್ತು.
ಅಶ್ವತ್ಥ್ ‘ಕನ್ನಡದ ಧ್ವನಿ’ಯಾಗಿ ಬಡ್ತಿ ಪಡೆದದ್ದು ಕನ್ನಡವೇ ಸತ್ಯ ಕಾರ್ಯಕ್ರಮದ ನಂತರ. ಅರಮನೆ ಮೈದಾನದಲ್ಲಿ ಒಂದು ಲಕ್ಷ ಜನ ಆ ಕಾರ್ಯಕ್ರಮಕ್ಕೆ ಸೇರಿದ್ದರು. ಆನಂತರ ಅಶ್ವತ್ಥ್ ತನ್ನ ಹೆಸರು ರಾಷ್ಟ್ರಮಟ್ಟದಲ್ಲೂ ಮಿಂಚುವಂಥಾಗಬೇಕು ಎಂಬ ಆಸೆ ಶುರುವಾಯಿತು. ಅದಕ್ಕೊಂದು ಮಾಸ್ಟರ್ ಪ್ಲಾನ್ ಮಾಡಿದರು. ಎಲ್ಲಾ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಸಂಪಾದಕರಿಗೋಸ್ಕರ ಒಂದು ವಿಶೇಷ ಸಂಗೀತ ಕಾರ್ಯಕ್ರಮ ಏರ್ಪಾಡು ಮಾಡಿದರು. ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡ ಆಲದಮರದ ಸಮೀಪ ಖಾಲಿಜಾಗವೊಂದಲ್ಲಿ ಶಾಮಿಯಾನಾ ಹಾಕಲಾಯಿತು. ಆದರೆ ಸಂಜೆ ಕಚೇರಿ ಕೆಲಸ ಮುಗಿಸಿ ಆಫೀಸಿಂದ ಆ ಜಾಗಕ್ಕೆ ತಲುಪುವುದೇ ಅತಿಥಿಗಳಿಗೆ ದೊಡ್ಡ ಸಮಸ್ಯೆಯಾಗಿ ಕಾಡಿತು. ರಸ್ತೆ ಕೂಡಾ ಅಶ್ವತ್ಥ್ ಗಾಯನದಂತೆ ವಿಪರೀತ ಉಬ್ಬತಗ್ಗುಗಳಿಂದ ಕೂಡಿತ್ತು. ಕೆಲವರು ಅರ್ಧದಾರಿಯಿಂದಲೇ ವಾಪಸಾದರು. ಮಿಕ್ಕವರು ತಲುಪುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು. ಊಟ ತಣ್ಣಗಾಗಿತ್ತು. ಅಶ್ವತ್ಥ್ ಮುಖ ಕೆಂಪಗಾಗಿತ್ತು, ಆದರೆ ಅತಿಥಿಗಳ ಮುಖವೂ ಅಷ್ಟೇ ಕೆಂಪಗಾಗಿದ್ದನ್ನು ನೋಡಿದ ಅಶ್ವತ್ಥ್ ಒಲ್ಲದ ಮನಸ್ಸಿನಲ್ಲೇ ಹಾಡಿದರು. ಅವರ ಭಾಷೆಯಲ್ಲೇ ಹೇಳುವುದಾದರೆ ಆ ಕಾರ್ಯಕ್ರಮ ಚೊಂಬಾಗಿತ್ತು.
ನನ್ನ ಮತ್ತು ಅಶ್ವತ್ಥ್ ಅವರ ಹದಿನೈದು ವರ್ಷಗಳ ಸಂಬಂಧದಲ್ಲಿ ಇಂಥಾ ಹಲವಾರು ರಸಭರಿತ ಸನ್ನಿವೇಶಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಅವರೊಂದಿಗೆ ಜಗಳ ಆಡಿದ್ದೇನೆ, ಅವರ ಮನೆಯ ತಾರಸಿಯಲ್ಲಿ, ಬೆಳದಿಂಗಳ ಬೆಳಕಲ್ಲಿ ಹಿತವಾದ ಸಂಗೀತ ಸವಿದಿದ್ದೇನೆ. ಅವರ ಶ್ರೀಮತಿಯವರು ತಯಾರಿಸುತ್ತಿದ್ದ ಬಿಸಿಬೇಳ್ ಬಾತ್ ಮತ್ತು ಮೊಸರನ್ನದ ರುಚಿ ಇಂದಿಗೂ ನನ್ನ ನಾಲಿಗೆ ಮೇಲಿದೆ. ಅವರ ಮನೆಯಿದ್ದ ರಸ್ತೆಯ ಕೊನೆಯಲ್ಲೇ ನನ್ನ ಮನೆಯೂ ಇದ್ದಿದ್ದರಿಂದ ತಿಂಗಳಿಗೊಮ್ಮೆಯಾದರೂ ನಾವಿಬ್ಬರು ಸೇರುತ್ತಿದ್ದೆವು. ಆದರೆ ನಾನು ಬೆಂಗಳೂರಿನ ಹೊರವಲಯದಲ್ಲಿ ಮನೆ ಕಟ್ಟಿದ ಮೇಲೆ ಸಂಪರ್ಕ ಕಡಿಮೆಯಾಯಿತು. ನನ್ನ ಗೃಹಪ್ರವೇಶಕ್ಕೆ ಬಂದ ಮೊದಲ ಅತಿಥಿಯೆಂದರೆ ಅವರೇ. ಕೈಯಲ್ಲೊಂದು ಉಡುಗೊರೆಯ ಬಾಕ್ಸ್. ಅದನ್ನು ನನ್ನ ಕೈಯಲ್ಲಿಟ್ಟು ‘ಇದರಲ್ಲೇನಿದೆ ಗೊತ್ತಾ’ ಎಂದರು. ನಾನು ತಲೆ ಅಲ್ಲಾಡಿಸಿದೆ. ‘ಸೀಲಿಂಗ್ ಫ್ಯಾನ್ ಕಣ್ರೀ. ಬೇರೆ ಏನೇ ಉಡುಗೊರೆ ಕೊಟ್ಟರೂ ಅದು ನಾಲ್ಕೇ ದಿನದಲ್ಲಿ ಮೂಲೆ ಸೇರುತ್ತೆ. ಆದರೆ ಫ್ಯಾನ್ ಇದೆಯಲ್ಲಾ. ನಿಮ್ಮ ತಲೆ ಮೇಲೆ ತಿರುಗ್ತಾನೇ ಇರುತ್ತೆ. ಆ ಗಾಳಿ ಬೀಸಿದಾಗಲೆಲ್ಲಾ ನಿಮಗೆ ನನ್ನ ನೆನಪಾಗುತ್ತಲೇ ಇರುತ್ತದೆ’. ಗಾಳಿಯ ಮೂಲಕ ನೆನಪುಗಳು ತೇಲಿ ಬರುತ್ತದೆ ಅನ್ನುವ ಕವಿಕಲ್ಪನೆಯನ್ನು ಅಶ್ವತ್ಥ್ ಪ್ರಾಕ್ಟಿಕಲ್ ಆಗಿ ಕಾರ್ಯರೂಪಕ್ಕೆ ತಂದಿದ್ದರು!
ಆ ಫ್ಯಾನ್ ಮೊನ್ನೆಯಷ್ಟೇ ಕೆಟ್ಟುಹೋಯಿತು, ಅಶ್ವತ್ಥ್ ನೀಡಿದ ಉಡುಗೊರೆ ಅನ್ನುವ ಏಕೈಕ ಕಾರಣಕ್ಕೆ ಅದನ್ನು ರಿಪೇರಿ ಮಾಡಿಸಿದೆ. ಅದು ಬೀಸುವ ಗಾಳಿಯಲ್ಲಿ ತೇಲಿ ಬರುತ್ತಿರುವ ಅಶ್ವತ್ಥ್ ನೆನಪುಗಳನ್ನು ಆಸ್ವಾದಿಸುತ್ತಾ ಈ ಅಂಕಣ ಬರೆಯುತ್ತಿದ್ದೇನೆ. ಫ್ಯಾನ್ ಕಿರ್ ಅಂದರೂ ಸಾಕು ಅಶ್ವತ್ಥ್ ಕಂಠ ಕೆಟ್ಟುಹೋಯಿತಾ ಎಂದು ಆತಂಕಕ್ಕೀಡಾಗುತ್ತೇನೆ. ಆ ಫ್ಯಾನನ್ನೇ ಅಶ್ವತ್ಥ್ ಅಂದುಕೊಳ್ಳುತ್ತಾ ಅದರ ಜೊತೆ ಆಟ ಆಡುತ್ತೇನೆ. 4ನೇ ನಂಬರಲ್ಲಿಟ್ಟರೆ ತಾರಕ ( ಶ್ರಾವಣ ಬಂತು ನಾಡಿಗೆ), ಎರಡರಲ್ಲಿಟ್ಟರೆ ಮಧ್ಯಮ ( ಬಾ ಇಲ್ಲಿ ಸಂಭವಿಸು), ಒಂದರಲ್ಲಿಟ್ಟರೆ ಮಂದ್ರ (ಬದುಕು ಮಾಯೆಯ ಮಾಟ). ಹೀಗೆ ಫ್ಯಾನ್ ಜೊತೆಗೆ ಆಡುತ್ತಾ ನಾನು ಮತ್ತೊಮ್ಮೆ ಅಶ್ವತ್ಥ್ ಫ್ಯಾನ್ ಆಗುತ್ತೇನೆ.