ಇಂಥಾದ್ದೊಂದು ಮೇನಿಯಾ ಆಗಾಗ್ಗೆ ಶುರುವಾಗುತ್ತಲೇ ಇರುತ್ತೆ. ಈಗ ಇಂಥಾದ್ದೊಂದು ಸನ್ನಿ ಆವರಿಸಿರುವುದು ಟಿವಿ ಮೀಡಿಯಾಗಳಲ್ಲಿ. ಇತ್ತೀಚೆಗೆ ಕಿರುತೆರೆಯಲ್ಲಿ ನಾಗರಹಾವುಗಳ ಆಟ ಭರ್ಜರಿಯಾಗಿದೆ. ಕಲ್ಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಝೀ ಟಿವಿ ಕನ್ನಡ, ಉದಯ ಟಿವಿ.. ಹೀಗೆ ಯಾವುದೇ ಟಿವಿ ಹಾಕಿದರೂ, ಹಾವಿನ ಕುರಿತಾದ ಸೀರಿಯಲ್ಗಳು ಪ್ರಸಾರವಾಗುತ್ತಿವೆ.
ಸುಮ್ಮನೆ ಹಾಗೇ ನೋಡಿ, ಝೀ ಕನ್ನಡದಲ್ಲಿ ನಾಗಿಣಿ, ಕಲ್ಲರ್ಸ್ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಮತ್ತು ಸರ್ಪ ಸಂಬಂಧ. ಉದಯ ಟಿವಿಯಲ್ಲಿ ನಂದಿನಿ ಈಗಾಗಲೇ ಪ್ರಸಾರವಾಗುತ್ತಿವೆ. ಈಗ ಆ ಹಾದಿಯಲ್ಲಿ ಕಲ್ಲರ್ಸ್ ಕನ್ನಡ ವಾಹಿನಿ ಹೊಸ ನಾಗರಹಾವಿನ ಸೀರಿಯಲ್ ನಾಗ ಕನ್ನಿಕೆಯನ್ನು ಪ್ರಾರಂಭ ಮಾಡುತ್ತಿದೆ. ಈ ಸನ್ನಿ ಕನ್ನಡಕ್ಕಷ್ಟೇ ಅಲ್ಲ, ಪಕ್ಕದ ತೆಲುಗು, ತಮಿಳಿನಲ್ಲೂ ಇದೇ ಸ್ಥಿತಿ ಇದೆ.
ಇದರ ಹಿಂದಿರುವ ಕಾರಣ ಸರಳ. ಹಾವಿನ ಬಗ್ಗೆ ಇರುವಷ್ಟು ಕಥೆ, ಪುರಾಣ, ನಂಬಿಕೆ, ಮೂಢ ನಂಬಿಕೆ, ಭಯ, ಭಕ್ತಿ ಬೇಱವುದೇ ದೇವರಿಗೆ ಇಲ್ಲ ಎಂದರೆ ನಂಬಲೇಬೇಕು. ಹಾವುಗಳ ಕುರಿತ ಇಂಥ ನಂಬಿಕೆಯೇ ಧಾರಾವಾಹಿಗಳ ಜೀವಾಳ. ಇವುಗಳಲ್ಲಿ ಯಾವ ಧಾರಾವಾಹಿಯೂ ಟಿಆರ್ಪಿಯಲ್ಲಿ ಕಡಿಮೆ ಗಳಿಕೆ ಮಾಡಿಲ್ಲ ಎನ್ನುವುದು ಪ್ರೇಕ್ಷಕರ ಅಭಿರುಚಿಯನ್ನೂ ತೋರಿಸುತ್ತೆ. ಒಟ್ಟಿನಲ್ಲಿ ಟಿವಿ ಹಾಕಿದರೆ, ಭುಸ್ ಭುಸ್ ಶಬ್ಧವೇ ಜೋರಾಗಿದೆ.