ನಿನ್ನಾ ಪೂಜೆಗೆ ಬಂದೇ ಮಾದೇಶ್ವರಾ.. ಗುಡುಗುಡಿಯಾ.. ನೀನೇ ಬೇಕು.. ಷರೀಫಜ್ಜನ ಪದಗಳು.. ಹೀಗೆ ಜಾನಪದ ಹಾಡುಗಳನ್ನು ರಾಕ್‍ಸ್ಟೈಲ್‍ನಲ್ಲಿ ಹಾಡುವ ಮೂಲಕ ಸ್ಟಾರ್ ಆಗಿರುವ ರಘು ದೀಕ್ಷಿತ್ ವಿರುದ್ಧ ಈಗ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಆರೋಪ ಮಾಡಿರುವುದು ಯಾರು ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ಆಕೆ ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ. ಅಂದಹಾಗೆ ಇದು #me too ಬಿರುಗಾಳಿಯ ಎಫೆಕ್ಟ್. ಹಾಲಿವುಡ್‍ನಲ್ಲಿ ಶುರುವಾದ ಈ #me too ಬಿರುಗಾಳಿಗೆ ಇತ್ತೀಚೆಗೆ ಬಾಲಿವುಡ್ ತತ್ತರಿಸಿತ್ತು. ಈಗ ಅದು ಸ್ಯಾಂಡಲ್‍ವುಡ್‍ಗೂ ಕಾಲಿಟ್ಟಿದೆ.
ಗಾಯಕ ರಘು ದೀಕ್ಷಿತ್, ಗಾಯಕಿಯೊಬ್ಬರನ್ನು ರೆಕಾರ್ಡಿಂಗ್‍ಗಾಗಿ ಸ್ಟುಡಿಯೋಗೆ ಕರೆಸಿಕೊಂಡಿದ್ದರಂತೆ. ಆಗ ರೆಕಾರ್ಡಿಂಗ್ ಕೂಡಾ ಮಾಡದೆ ಲೈಂಗಿಕ ಕಿರುಕುಳ ನೀಡಿದ್ದರಂತೆ. ತಮ್ಮ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಂತೆ. ಇನ್ನೊಬ್ಬ ಗಾಯಕಿಯ ಪ್ರಕಾರ, ಸ್ಟುಡಿಯೋಗೆ ಹೋದಾಗ ರಘು ದೀಕ್ಷಿತ್ ಕಿಸ್ ಮಾಡಲು ಕೇಳಿದ್ದರಂತೆ. ಇದೆಲ್ಲವನ್ನೂ ಬಹಿರಂಗಪಡಿಸಿರುವುದು ಗಾಯಕಿ ಚಿನ್ಮಯಿ ಶ್ರೀಪಾದ. ಚಿನ್ಮಯಿ ಶ್ರೀಪಾದ, #me too ಅಭಿಯಾನದಲ್ಲಿ ಗಾಯಕ ವೈರಮುತ್ತು ಸೇರಿದಂತೆ ಹಲವರ ವಿರುದ್ಧದ ಆರೋಪಗಳಿಗೆ ವೇದಿಕೆಯಾಗುತ್ತಿದ್ದಾರೆ.
ಅರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ರಘು ದೀಕ್ಷಿತ್, ಅದು ಲೈಂಗಿಕ ಕಿರುಕುಳ ಅಲ್ಲ. ರೆಕಾರ್ಡಿಂಗ್ ಮುಗಿದ ಮೇಲೆ ಹಗ್ ಮಾಡಲು ಯತ್ನಿಸಿದೆ. ಅದನ್ನು ಅವರು ತಪ್ಪಾಗಿ ತಿಳಿದುಕೊಂಡರು. ಆ ದಿನವೇ ಆ ವಿಚಾರಕ್ಕೆ ಕ್ಷಮೆಯನ್ನೂ ಕೇಳಿದ್ದೆ ಎಂದಿದ್ದಾರೆ. ಇದರ ಜೊತೆಯಲ್ಲಿಯೇ ನಾನು ನನ್ನ ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ. ನಮ್ಮ ಸಂಬಂಧ ಸರಿಪಡಿಸಲು ಯತ್ನಿಸಿ ಸೋತೆವು. ಈಗ 3 ವರ್ಷದಿಂದ ಬೇರೆ ಇದ್ದೇವೆ. ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ. ಕೌನ್ಸೆಲಿಂಗ್ ಪಡೆಯುತ್ತಿದ್ದೇವೆ ಎಂದಿದ್ದಾರೆ.
ಒಟ್ಟಿನಲ್ಲಿ #me too ಅಭಿಯಾನ ಹಿಂದಿಯ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಆರೋಪಿಸಿದ ಮೂಲಕ ಶುರುವಾದ #me too ಬಿರುಗಾಳಿಯಲ್ಲಿ ಮೋದಿ ಕ್ಯಾಬಿನೆಟ್‍ನ ಸಚಿವ ಎಂ.ಜೆ. ಅಕ್ಬರ್ ಕೂಡಾ ತತ್ತರಿಸಿದ್ದಾರೆ. ಬ್ಯಾಡ್ಮಿಂಟನ್ ತಾರೆ ಜ್ವಾಲಾಗುಟ್ಟ ಕ್ರೀಡಾ ಕ್ಷೇತ್ರದಲ್ಲೂ ಲೈಂಗಿಕ ಕಿರುಕುಳ ಸಾಮಾನ್ಯ ಎಂಬ ಬಾಂಬ್ ಸಿಡಿಸಿದ್ದಾರೆ. ಪತ್ರಕರ್ತರ ವಲಯದಲ್ಲೂ ರಾಷ್ಟ್ರೀಯ ಸುದ್ದಿ ವಾಹಿನಿಯ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಅನುರಾಗ್ ಕಶ್ಯಪ್ ಸೇರಿದಂತೆ ಹಲವರು #me too ಬಿರುಗಾಳಿಯಲ್ಲಿ ತರಗೆಲೆಯಾಗುತ್ತಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿದು ಮೊದಲ #me too ಬಿರುಗಾಳಿ.