ಮಾಲಾಶ್ರೀ. ಒಂದಿಡೀ ದಶಕ ಕನ್ನಡ ಚಿತ್ರರಂಗವನ್ನು ಆಳಿದ ಲೇಡಿ ಸೂಪರ್ ಸ್ಟಾರ್. ರಾಮು ಅವರನ್ನು ಮದುವೆಯಾದ ನಂತರ ಆಗಾಗ್ಗೆ ಆ್ಯಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದ ಮಾಲಾಶ್ರೀ, ಈಗ ಪತಿ ರಾಮು ಅವರ ಕೊನೆಯ ಚಿತ್ರ ಅರ್ಜುನ್ ಗೌಡ ರಿಲೀಸ್‍ಗೆ ರೆಡಿಯಾಗಿದ್ದಾರೆ. ಚಿತ್ರದ ಪ್ರಚಾರದಲ್ಲಿ ಇಡೀ ಚಿತ್ರರಂಗ ಮಾಲಾಶ್ರೀ ಜೊತೆಗೆ ನಿಂತಿದ್ದು ವಿಶೇಷ. ಶಿವಣ್ಣ, ರವಿಚಂದ್ರನ್, ಉಪೇಂದ್ರ, ಗಣೇಶ್, ರಾಕ್‍ಲೈನ್ ವೆಂಕಟೇಶ್, ದೇವರಾಜ್, ಡಾರ್ಲಿಂಗ್ ಕೃಷ್ಣ ವೇದಿಕೆಯಲ್ಲಿದ್ದು ಮಾಲಾಶ್ರೀಗೆ ಶುಭ ಹಾರೈಸಿದರೆ, ಯಶ್, ಸುದೀಪ್, ಸಾಯಿಕುಮಾರ್ ವಿಡಿಯೋಗಳ ಮೂಲಕ ಹೇಳಿಕೆ ನೀಡಿ ಮಾಲಾಶ್ರೀಗೆ ಆತ್ಮಸ್ಥೈರ್ಯ ತುಂಬಿದರು. ರಾಮು ಬ್ಯಾನರ್‍ನ್ನು ನಿಲ್ಲಿಸಬೇಡಿ. ಮುಂದುವರೆಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದರು. ಎಲ್ಲರೂ ದುಃಖದಲ್ಲಿದ್ದರು. ದುಃಖದಲ್ಲಿಯೇ ಮಾತನಾಡುತ್ತಿದ್ದರು. ಸಾಧು ಕೋಕಿಲ ಅವರಂತೂ ರಾಮು ಮತ್ತು ಅಪ್ಪು ಇಬ್ಬರನ್ನೂ ನೆನಪಿಸಿಕೊಂಡು ವೇದಿಕೆಯಲ್ಲೇ ಕಣ್ಣೀರಿಟ್ಟರು. ಇದೆಲ್ಲದರ ನಡುವೆ ಮಾಲಾಶ್ರಿಯನ್ನು ನಗಿಸಿದ್ದು ರವಿಚಂದ್ರನ್.
ನನಗೆ ರಾಮಾಚಾರಿ ಮೂಲಕ ಹಿಟ್ ಕೊಟ್ಟಿದ್ದರು ಮಾಲಾಶ್ರಿ. ಆ ಋಣವನ್ನು ನಾನು ಮಲ್ಲ ಮೂಲಕ ತೀರಿಸಿದೆ. ಚಿತ್ರರಂಗವೇ ಹಾಗೆ.. ನಾನು ಸೋತಾಗ ಹಲವರು ನನಗೆ ಹೆಗಲು ಕೊಟ್ಟಿದ್ದಾರೆ. ಇನ್ನೊಬ್ಬರು ಸೋತಾಗ ನಾವು ಹೆಗಲು ಕೊಟ್ಟಿದ್ದೇವೆ. ನಾವು ಇರಬೇಕಾದ್ದೇ ಹಾಗೆ. ಮಲ್ಲ 2 ಮಾಡೋಣ್ವಾ ಮಾಲಾ..? ನಿನ್ನ ಮಗಳೇ ಹೀರೋಯಿನ್ ಆಗಲಿ. ಹೀರೋ ಆಗಿ ನಾನು ಬೇಡ ಅನ್ನಿಸಿದ್ರೆ, ನನ್ನ ಮಗನೇ ಹೀರೋ. ಓಕೆನಾ.. ಎಂದಾಗ ಅದೂವರೆಗೆ ದುಃಖದಲ್ಲಿಯೇ ಇದ್ದ ಮಾಲಾಶ್ರೀ ಕೊನೆಗೂ ನಕ್ಕರು..