ಜಿಎಸ್ಟಿ ಜಾರಿಗೆ ಕ್ಷಣಗಣನೆ ಶುರುವಾಗಿರುವಾಗಲೇ ಗೊಂದಲಗಳೂ ಅಷ್ಟೇ ದೊಡ್ಡ ಮಟ್ಟದಲ್ಲಿ ಉದ್ಭವವಾಗಿವೆ. ಅದರ ಎಫೆಕ್ಟ್ ತಟ್ಟಿರೋದು ಮಲ್ಟಿಪ್ಲೆಕ್ಸ್ಗಳ ಮೇಲೆ. ಜಿಎಸ್ಟಿ ಗೊಂದಲದಿಂದಾಗಿ ಮಲ್ಟಿಪ್ಲೆಕ್ಸ್ಗಳೂ ಟಿಕೆಟ್ ನೀಡೋದನ್ನೇ ತಡೆಹಿಡಿದಿವೆ.
ಶನಿವಾರದವರೆಗೂ ಬುಕ್ ಮೈ ಶೋ ಸೇರಿದಂತೆ ಯಾವ ಆಪ್ನಲ್ಲಾದರೂ ನೀವು ಟಿಕೆಟ್ ಬುಕ್ ಮಾಡಬಹುದು. ಆದರೆ, ಭಾನುವಾರದಿಂದ ಟಿಕೆಟ್ ಬುಕ್ಕಿಂಗ್ ಆಗುತ್ತಿಲ್ಲ. ಟಿಕೆಟ್ಗೆ ಎಷ್ಟು ರೇಟ್ ಫಿಕ್ಸ್ ಮಾಡಬೇಕು ಅನ್ನೋ ಗೊಂದಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಜಿಎಸ್ಟಿಯಲ್ಲಿ ಎಂಟರ್ಟೈನ್ಮೆಂಟ್ ಟ್ಯಾಕ್ಸ್ (ಮನರಂಜನಾ ತೆರಿಗೆ) ಶೇ.28 ಎಂದೆನೋ ಹೇಳಿದ್ದಾರೆ. ಆದರೆ, ಕನ್ನಡ ಚಿತ್ರಗಳಿಗೆ ಹಿಂದಿನಂತೆ ವಿನಾಯಿತಿ ಮುಂದುವರೆಯುತ್ತಾ..? ಮುಂದುವರೆಯುವುದೇ ಆದರೆ, ಪ್ರಮಾಣ ಎಷ್ಟು..? ಹಾಗಾದರೆ, ಟಿಕೆಟ್ಗೆ ಎಷ್ಟು ರೇಟ್ ಇಡಬೇಕು..? ಇಂಥ ಗೊಂದಲಗಳಿಗೆ ಮಲ್ಟಿಪ್ಲೆಕ್ಸ್ನವರಲ್ಲಿ ಉತ್ತರವಿಲ್ಲ. ಸರ್ಕಾರದವರಿಂದಲೂ ಸ್ಪಷ್ಟ ಸೂಚನೆ ಅಥವಾ ಆದೇಶ ಬಂದಿಲ್ಲ. ಹೀಗಾಗಿ ಮಲ್ಟಿಪ್ಲೆಕ್ಸ್ನವರು ಶುಕ್ರವಾರದಿಂದ ಟಿಕೆಟ್ಗಳನ್ನೇ ನೀಡುತ್ತಿಲ್ಲ.
ಜಿಎಸ್ಟಿ ಗೊಂದಲದಿಂದಾಗಿ, ಟಿಕೆಟ್ ಬುಕ್ ಆಗದೇ ಹೋದರೆ, ಅದನ್ನು ಎದುರಿಸುವ ಮೊದಲ ಚಿತ್ರ ‘ಆಕೆ’ ಯೇ ಆಗಲಿಲದೆ. ಈ ವಾರ ಬಿಡುಗಡೆಯಾಗುತ್ತಿರುವ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಚಿತ್ರ ಆಕೆಗೆ ಈಗ ಜಿಎಸ್ಟಿ ಟೆನ್ಷನ್ ಶುರುವಾಗಿದೆ.
ಸಮಸ್ಯೆ ಏನು ಎಂದು ವಿಚಾರಿಸಿದಾಗ, ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶ ಬಂದಿಲ್ಲ. ಕಾಯುತ್ತಿದ್ದೇವೆ ಎಂಬ ಉತ್ತರ ಸಿಕ್ಕಿದೆ. ಆಕೆಯಂತಹ ಬಹುನಿರೀಕ್ಷಿತ ಚಿತ್ರ, ಜಿಎಸ್ಟಿ ಗೊಂದಲದ ಮಧ್ಯೆಯೂ ಗೆಲ್ಲಬೇಕು ಅನ್ನೋದು ಚಿತ್ರಪ್ರೇಮಿಗಳ ಆಶಯ. ಆದರೆ, ಗೊಂದಲ ಬಗೆಹರಿಸೋದು ಯಾರು..?