ಎಚ್‍ಡಿ ಕುಮಾರಸ್ವಾಮಿ ಮಾಜಿ ಸಿಎಂ ಆದರೂ, ಚಿತ್ರರಂಗದಲ್ಲೇ ಇದ್ದವರು. ಚಿತ್ರರಂಗದಿಂದಲೇ ರಾಜಕೀಯಕ್ಕೆ ಎದ್ದು ಹೋದವರು. ಈಗ ಮತ್ತೊಮ್ಮೆ ಚಿತ್ರರಂಗಕ್ಕೇ ಹೆಜ್ಜೆ ಇಡುತ್ತಿದ್ದಾರೆ. ಹೌದು, ಎಚ್‍ಡಿ ಕುಮಾರಸ್ವಾಮಿ, ಕನ್ನಡದ ಮೇರು ಕೃತಿಯಲ್ಲೊಂದಾದ ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ.
ಇದೇನೂ ಹೊಸ ನಿರ್ಧಾರವಲ್ಲ. ಸುಮಾರು 15 ವರ್ಷಗಳ ಹಿಂದೆ ಕುಮಾರಸ್ವಾಮಿ ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಸುದ್ದಿಗೋಷ್ಠಿ ಮಾಡಿದ್ದರು. ಪತ್ರಕರ್ತರಿಗೆ ಕಾದಂಬರಿಯ ಪ್ರತಿಗಳನ್ನು ನೀಡಿದ್ದರು. ಕಮಲ್ ಹಾಸನ್ ನಟಿಸುತ್ತಾರೆ ಎಂಬ ಸುದ್ದಿಯೂ ಇತ್ತು. ಆದರೆ ಅಷ್ಟು ದೊಡ್ಡದಾಗಿ ಶುರುವಾಗಿ ತಣ್ಣಗಾದ ಸುದ್ದಿಗೆ ಮತ್ತೆ ಜೀವ ಕೊಟ್ಟಿರುವುದು ಎಚ್‍ಡಿಕೆ ಮತ್ತು ಎಸ್.ನಾರಾಯಣ್ ಜೋಡಿ.
ಅದು ನನ್ನ ಮತ್ತು ಕುಮಾರಸ್ವಾಮಿಯವರ ಕನಸು. ಆ ಚಿತ್ರವನ್ನು ಮತ್ತೆ ಮಾಡುತ್ತೇವೆ. ಟೈಟಲ್ ಬದಲಾಗಬಹುದು. ಸ್ಟಾರ್ ನಟ ನಟಿಯರು ಇರಲಿದ್ದಾರೆ ಎಂದಿದ್ದಾರೆ ಎಸ್.ನಾರಾಯಣ್.
ಎಸ್. ನಾರಾಯಣ್ ಮತ್ತು ಕುಮಾರಸ್ವಾಮಿಯವರದ್ದು ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ. ಕುಮಾರಸ್ವಾಮಿ ಬ್ಯಾನರ್‍ಗೆ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತಿ ಎಸ್.ನಾರಾಯಣ್ ಅವರದ್ದು. ಸೂರ್ಯವಂಶ, ಚಂದ್ರಚಕೋರಿ, ಗಲಾಟೆ ಅಳಿಯಂದ್ರು ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದ ಎಸ್.ನಾರಾಯಣ್, ಈಗ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ.