ಮೊನ್ನೆ ನಾರಾಯಣ್ ನಮ್ಮ ಕಚೇರಿಗೆ ಬಂದಿದ್ದರು. ಬರೀ ನಾರಾಯಣ್ ಅಂದುಬಿಟ್ಟರೆ ಅವರ್ಯಾರು ಅನ್ನುವುದು ನಿಮಗೆ ಗೊತ್ತಾಗಲಿಕ್ಕಿಲ್ಲ. ಎಸ್. ನಾರಾಯಣ್ ಎಂದೇ ಅವರು ಪ್ರಖ್ಯಾತರು. ಕೆಲವರು ತಮ್ಮ ಇನಿಷಿಯಲ್ ಗಳಿಂದಲೇ ಗುರುತಾಗುತ್ತಾರೆ. ಉದಾಹರಣೆಗೆ ವಾಟಾಳ್ ನಾಗರಾಜ್. ಹಲವು ವರ್ಷಗಳ ಹಿಂದೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರಾಗಿದ್ದ ಚಕ್ರವರ್ತಿ (ಗೆಳೆಯರ ಪಾಲಿಗೆ ನಚ್ಚಿ) ಅವರನ್ನು ಅದೇನೋ ಕ್ಷುಲ್ಲಕ ಕಾರಣಕ್ಕೆ ವಾಟಾಳ್ ನಿಂದಿಸಿದ್ದರು. ಅದರಿಂದ ಸಿಟ್ಟಿಗೆದ್ದ ನಚ್ಚಿ ಆಯಪ್ಪಂಗೆ ಬುದ್ದಿ ಕಲಿಸಬೇಕು ಎಂಬ ನಿರ್ಧಾರಕ್ಕೆ ಬಂದರು. ಕೊನೆಗೊಂದು ದಿನ ಕಾಲಕೂಡಿ ಬಂತು. ವಿಧಾನಸಭೆಯ ಅಧಿವೇಶನ ಶುರುವಾಯಿತು. ಎಂದಿನಂತೆ ವಾಟಾಳ್ ಆಡಳಿತ ಪಕ್ಷದ ಮೇಲೆ ಹರಿಹಾಯ್ದರು. ಮಾರನೇ ದಿನ ನಚ್ಚಿ ‘ಎಕ್ಸ್ ಪ್ರೆಸ್’ ಪತ್ರಿಕೆಯಲ್ಲಿ ಅದರ ವರದಿ ಮಾಡಿದರು. ಎಲ್ಲೂ ವಾಟಾಳ್ ಅನ್ನುವ ಹೆಸರೇ ಇರಲಿಲ್ಲ, ಬದಲಾಗಿ ವಿ.ನಾಗರಾಜ್ ಎಂದೇ ವರದಿಯುದ್ದಕ್ಕೂ ಪ್ರಕಟವಾಗಿತ್ತು. ಈ ಐಡಿಯಾ ಎಷ್ಟು ಸೊಗಸಾಗಿದೆ ನೋಡಿ. ವಾಟಾಳ್ ತನ್ನ ಹೆಸರು ಹಾಕಿಲ್ಲ ಎಂದು ತಕರಾರು ಮಾಡುವ ಹಾಗಿಲ್ಲ, ಆದರೆ ಅಲ್ಲಿದ್ದ ಹೆಸರು ಅವರದ್ದೇ ಎಂದು ಚತುಷ್ಕೋಟಿ ಕನ್ನಡಿಗರಿಗೆ ಗೊತ್ತಾಗುವ ಹಾಗೂ ಇಲ್ಲ. ಕಂಗಾಲಾದ ವಾಟಾಳ್ ಕಚೇರಿಗೆ ಧಾವಿಸಿಬಂದು ನಚ್ಚಿ ಕ್ಷಮೆ ಕೇಳಿದರು. ಪತ್ರಕರ್ತರಿಗೆ ಸೇಡು ತೀರಿಸಿಕೊಳ್ಳುವುದಕ್ಕಿರುವ ಏಕೈಕ ಅಸ್ತ್ರವೆಂದರೆ ಪೆನ್ನು ಅನ್ನುವುದು ಮತ್ತೊಮ್ಮೆ ಸಾಬೀತಾಯಿತು.
ಇದು ಉಪಕತೆ, ಈಗ ಮೂಲಕತೆಗೆ ಬರೋಣ. ಎಸ್. ನಾರಾಯಣ್ ತಮ್ಮ ಮಗಳ ಮದುವೆ ಆಮಂತ್ರಣವನ್ನು ನೀಡುವುದಕ್ಕೆ ಕಚೇರಿಗೆ ಬಂದಿದ್ದರು. ಬಹುಶಃ ನಾವಿಬ್ಬರು ಪರಸ್ಪರ ಮುಖನೋಡಿ ಮೂರ್ನಾಲ್ಕು ವರ್ಷಗಳೇ ಆಗಿರಬಹುದೇನೋ. ಹಾಗಿದ್ದೂ ನಿನ್ನೆಯಷ್ಟೇ ಭೇಟಿಯಾದವರಂತೆ ನಾವಿಬ್ಬರೂ ಮಾತಾಡಿದೆವು. ನಾರಾಯಣ್ ಬದಲಾಗಿಲ್ಲ, ಅದೇ ನಗು, ಅದೇ ಚುರುಕು ಮಾತು, ಅದೇ ವೇಷ, ಅದೇ ಭೂಷಣ. ಅವರ ವಯಸ್ಸೆಷ್ಟು? ನಾನು ಕೇಳಲಿಲ್ಲ. ಮಾತಿನ ಮಧ್ಯೆ ಅವರ ಮಗನ ಬಗ್ಗೆ ವಿಚಾರಿಸಿದೆ. ಆತ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ ಎಂದು ಅವರು ಹೇಳಲಿಲ್ಲ, ಬದಲಾಗಿ ಸಿಸಿಎಲ್ ನಲ್ಲಿ ಆಡುತ್ತಿದ್ದಾನೆ ಅಂದರು. ಅದು ನಾರಾಯಣ್ ವರಸೆ. ಸೋಲೊಪ್ಪಿಕೊಳ್ಳುವ ಜಾಯಮಾನ ಅವರದ್ದಲ್ಲ. ಅದಕ್ಕೇ ಅವರು ಇನ್ನೂ ಚಾಲ್ತಿಯಲ್ಲಿದ್ದಾರೆ.
ಬದಲಾಗದೇ ಇರುವ ಮನುಷ್ಯರ ಬಗ್ಗೆ ಹೇಳುವ ಹೊತ್ತಿಗೆ ಉಪೇಂದ್ರ ಮತ್ತು ನಾನು ಕೆಲವು ವರ್ಷಗಳ ಹಿಂದೆ ಮಾತಾಡಿದ್ದು ನೆನಪಾಗುತ್ತಿದೆ. ಅದರ ಸಾರಾಂಶ ಹೀಗಿದೆಃ ಅಪರೂಪಕ್ಕೆ ಭೇಟಿಯಾದ ಗೆಳೆಯರೊಬ್ಬರು ನಿಮ್ಮನ್ನು ನೋಡಿ ‘ನೀವು ಬದಲಾಗಲೇ ಇಲ್ವಲ್ಲ ಮಾರಾಯ್ರೇ, ಹತ್ತು ವರ್ಷದ ಹಿಂದೆ ಹೇಗಿದ್ರೋ ಈಗಲೂ ಹಾಗೇ ಇದ್ದೀರಿ’ ಎಂದರೆ ನೀವು ಹಿಗ್ಗಬೇಕಾಗಿಲ್ಲ. ಅದು ಕಾಂಪ್ಲಿಮೆಂಟ್ ಅಲ್ಲ, ನಿಮ್ಮನ್ನು ಗೇಲಿ ಮಾಡುವ ವಿನೂತನ ರೀತಿಯಾಗಿರಬಹುದು. ‘ಅಯ್ಯಾ ಗೂಬೆ, ಕಳೆದ ಹತ್ತು ವರ್ಷಗಳಿಂದ ನೀನು ಬೆಳೆದೇ ಇಲ್ವಲ್ಲೋ’ ಎಂದು ಹೇಳುವ ವಿಧಾನವಾಗಿರಬಹುದು. ವಯಸ್ಸಾಗುತ್ತಿದ್ದಂತೆಯೇ ಮನುಷ್ಯ ಬದಲಾಗಬೇಕು, ತನ್ನೊಳಗೆ ಬೆಳೆಯಬೇಕು, ಹಾಗಂತ ತನ್ನ ಮೂಲಗುಣಗಳನ್ನು ತೊರೆಯಬಾರದು. ದೈಹಿಕವಾಗಿ ಬದಲಾಗದೇ ಇರುವುದು ದೊಡ್ಡ ಸಂಗತಿಯಲ್ಲ, ನಿಮ್ಮ ಮುಪ್ಪನ್ನು ಮುಂದೂಡುವುದಕ್ಕೆ ಈಗ ನಾನಾ ರೀತಿಯ ಮದ್ದುಗಳಿವೆ. ಆದರೆ ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಬೌದ್ಧಿಕವಾಗಿ ಬದಲಾಗಬೇಕು ಅಥವಾ ಬೆಳೆಯಲೇಬೇಕು. ಇಲ್ಲದೇ ಇದ್ದಲ್ಲಿ ಜಗತ್ತಿನ ಪಾಲಿಗೆ ಆತ ಬಳಸಿ ಬಿಸಾಡಿದ ಬಟ್ಟೆ ಅಷ್ಟೆ.
ಹಾಗಾದರೆ ನಾರಾಯಣ್ ಬೆಳೆಯಲಿಲ್ಲವಾ? ನಾನು ಹಿಂದೊಮ್ಮೆ ಬರೆದಿದ್ದೆ - ನಾರಾಯಣ್ ಅವರ ಮೊದಲ ಮತ್ತು ಕೊನೆಯ ಅತ್ಯುತ್ತಮ ಚಿತ್ರ ಎಂದರೆ ‘ಚೈತ್ರದ ಪ್ರೇಮಾಂಜಲಿ’ ಎಂದು. ಆ ಮಾತಿಗೆ ನಾನೀಗಲೂ ಬದ್ಧನಾಗಿದ್ದೇನೆ. ಚೈತ್ರದ ಪ್ರೇಮಾಂಜಲಿಯ ನಂತರವೂ ನಾರಾಯಣ್ ನಿರ್ದೇಶಿಸಿದ ಚಿತ್ರಗಳು ಗೆದ್ದಿವೆ, ಕೆಲವು ಸೂಪರ್ ಹಿಟ್ ಕೂಡಾ ಆಗಿವೆ. ಆದರೆ ಅವೆಲ್ಲವೂ ನಾರಾಯಣ್ ನಿರ್ದೇಶನದ ಬಲದಿಂದಲೇ ಗೆದ್ದವು ಅನ್ನೋದಕ್ಕೆ ಯಾಕೋ ಮನಸ್ಸು ಒಪ್ಪುತ್ತಿಲ್ಲ. ಕೆಲವು ಚಿತ್ರಗಳು ರೀಮೇಕಾಗಿದ್ದವು, ಆ ಚಿತ್ರಗಳಿಗೆ ವಿಷ್ಣುವರ್ಧನ್ ಅವರಂಥಾ ಜನಪ್ರಿಯ ನಾಯಕನ ನಾಮದ ಬಲದ ಶ್ರೀರಕ್ಷೆಯಿತ್ತು, ರಾಜ್ ಕುಟುಂಬದ ಯಾರೇ ಸದಸ್ಯ ನಟಿಸಿದರೂ, ಆ ಚಿತ್ರ ಗೆಲ್ಲುವುದು ನಿಶ್ಚಿತ ಅನ್ನುವ ಪರಿಸ್ಥಿತಿಯಿತ್ತು. ಸರಳವಾಗಿ ಹೇಳಬೇಕೆಂದರೆ ನಾರಾಯಣ್ ಮುಂದೆ ಅಂಥಾ ಸವಾಲುಗಳಿರಲಿಲ್ಲ.
ನಾರಾಯಣ್ ಸೃಜನಶೀಲ ನಿರ್ದೇಶಕ ಹೌದೋ ಅಲ್ಲವೋ ಎಂಬ ಬಗ್ಗೆ ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಅವರು ತಮಿಳು ಚಿತ್ರಗಳಿಂದ ಗಾಢವಾಗಿ ಪ್ರಭಾವಿತರಾಗಿದ್ದರು, ಹಾಸ್ಯವೆಂದರೆ ಟಾಯ್ಲೆಟ್ ಜೋಕ್ಸ್ ಎಂದು ಅಷ್ಟೇ ಗಾಢವಾಗಿ ನಂಬಿದ್ದರು, ಅತಿಯಾದ ಸೆಂಟಿಮೆಂಟು ಮತ್ತು ಗದ್ದಲ ಅವರ ಇನ್ನೊಂದು ಟ್ರೇಡ್ ಮಾರ್ಕ್. ಆದರೆ ನಾರಾಯಣ್ ಕ್ರಿಯಾಶೀಲ ಅನ್ನುವ ಬಗ್ಗೆ ದೂಸ್ರಾ ಮಾತಿಲ್ಲ. ಸೆಟ್ಟಲ್ಲಿ ಶಿಸ್ತಿನ ಸಿಪಾಯಿ, ಶೂಟಿಂಗ್ ಮುಗಿಸಿ ಮನೆಗೆ ಹೋದಮೇಲೆ ಹಾಡು, ಸಂಭಾಷಣೆ ಬರೆಯುವುದರಲ್ಲಿ ಮಗ್ನ. ಮತ್ತೆ ಬೆಳ್ಳಂಬೆಳಿಗ್ಗೆ ನಾಲ್ಕೂವರೆಗೆ ಎದ್ದು, ಹಣೆಗೆ ಕುಂಕುಮ ಹಚ್ಚಿ ಆರು ಗಂಟೆಯ ಒಳಗೆ ಮೊದಲ ಶಾಟ್ ಶೂಟ್. ನಾಯಕ ಯಾರೇ ಆಗಿರಲಿ, ಬೆಳಿಗ್ಗೆ ಆರಕ್ಕೆ ಶೂಟಿಂಗ್ ಜಾಗದಲ್ಲಿರಲೇಬೇಕು.
ಅವರು ಕಲಾಸಾಮ್ರಾಟ್ ಬಿರುದಿಗೆ ಯೋಗ್ಯರು ಹೌದೋ ಅಲ್ಲವೋ, ಸವ್ಯಸಾಚಿ ಅಂತೂ ನಿಜ. ನಿರ್ದೇಶನ, ನಟನೆ, ಗೀತಸಾಹಿತ್ಯ, ಸಂಭಾಷಣೆ, ಸಂಗೀತ ನಿರ್ದೇಶನ, ನಿರ್ಮಾಣ, ಸೀರಿಯಲ್ಲು ನಿರ್ದೇಶನ, ಹೀಗೆ ಅವರೇ ಒಂದು ಸ್ವಯಂ ನಿರ್ಮಿತ ಫ್ಯಾಕ್ಟರಿಯಾದರು. ಫ್ಯಾಕ್ಟರಿ ಲಾಸ್ ಆಗುತ್ತಿದ್ದಂತೆಯೇ ನಾರಾಯಣ್ ರಾಜಕೀಯಕ್ಕೆ ಜಿಗಿದರು, ಅದು ತನಗಲ್ಲ ಎಂದು ಜ್ಞಾನೋದಯವಾಗುತ್ತಿದ್ದಂತೆಯೇ ಮತ್ತೆ ಸಿನಿಮಾ ಕಡೆ ಹೊರಳಿದರು. ಇಲ್ಲಿ ಮತ್ತೆ ಸೋಲು ಕಾಡಿದಾಗ ಸಂಘಟಕರಾದರು. ಅಂಬಿ ಸಂಭ್ರಮ, ಅಮರಜೀವಿಯಂಥಾ ಅದ್ದೂರಿ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಆದರ್ಶ ಫಿಲಂ ಇನ್ ಸ್ಟಿಟ್ಯೂಟಿನ ಪ್ರಾಂಶುಪಾಲರಾದರು. ಈ ಮಧ್ಯೆ ಸಿನಿಮಾ ಪತ್ರಿಕೆಯೊಂದಕ್ಕೆ ರಾಜ್ ಕುಮಾರ್ ಬಗ್ಗೆ ವಾರಕ್ಕೊಂದು ಅಂಕಣ ಬರೆದು ಲೇಖಕರೂ ಆದರು. ಇದನ್ನು ನೀವು ಬದಲಾವಣೆ ಅನ್ನುತ್ತೀರೋ ಅಥವಾ ಅವಕಾಶವಾದ ಅನ್ನುತ್ತೀರೋ ಅನ್ನುವುದು ನಿಮ್ಮ ಬುದ್ದಿಮತ್ತೆಗೆ ಬಿಟ್ಟ ವಿಚಾರ.
ಚೈತ್ರದ ಪ್ರೇಮಾಂಜಲಿ ಚಿತ್ರ ನಾರಾಯಣ್ ಬಗ್ಗೆ ಚಿತ್ರೋದ್ಯಮ ಮತ್ತು ಪ್ರೇಕ್ಷಕರಲ್ಲಿ ವಿಪರೀತ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದವು. ಕನ್ನಡ ಚಿತ್ರರಂಗ ಹೊಸ ಮುಖಗಳಿಂದ, ಹೊಸ ಕತೆಗಳಿಂದ ಕಂಗೊಳಿಸಲಿದೆ ಎಂದು ನಂಬಲಾಗಿತ್ತು. ಆದರೆ ನಾರಾಯಣ್ ತನ್ನ ಯಶಸ್ಸನ್ನು ಸೇಫ್ ಕಸ್ಟಡಿಯಲ್ಲಿಟ್ಟರು. ಬಂಡಾಯ ಕವಿಯೊಬ್ಬ ಆಳುವರಸನ ಆಸ್ಥಾನದ ಸನ್ಮಾನವನ್ನು ಸ್ವೀಕರಿಸಿದಂತೆ, ವ್ಯವಸ್ಥೆಯನ್ನು ಬದಲಾಯಿಸುವ ಬದಲಾಗಿ ತಾನೇ ಅದರೊಂದಿಗೆ ರಾಜಿ ಮಾಡಿಕೊಂಡರು. ಪ್ರತಿಫಲವಾಗಿ ದೊಡ್ಡ ದೊಡ್ಡ ಸ್ಟಾರುಗಳ ಚಿತ್ರಗಳು ಅವರ ಪಾಲಿಗೆ ದೊರಕಿದವು. ವಿಷ್ಣುವರ್ಧನ್ ಮುದ್ದುಮುಖಕ್ಕೆ ಉದ್ದುದ್ದ ಮೀಸೆ ಹಚ್ಚಿ ಕನ್ನಡಿಗರ ಅಭಿರುಚಿಗೇ ಸವಾಲು ಹಾಕಿದರು. ರಾಜ್ ಕುಮಾರ್ ಅವರಂಥಾ ಮಹಾನ್ ಕಲಾವಿದನನ್ನು ನಿರ್ದೇಶಿಸುವ ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅದಾದ ನಂತರ ಏನಾಯಿತೋ ಗೊತ್ತಿಲ್ಲ, ನಾರಾಯಣ್ ತಮ್ಮ ಚಿತ್ರಗಳಿಂತ ಹೆಚ್ಚಾಗಿ ಇತರೇ ಕಾರಣಗಳಿಗೆ ಜಾಸ್ತಿ ಸುದ್ದಿ ಮಾಡಿದರು. ಚಂಡ ಶೂಟಿಂಗ್ ಸಂದರ್ಭದಲ್ಲಿ ನಾಯಕ ನಟ ವಿಜಯ್ ಮೇಲೆ ಮುನಿಸಿಕೊಂಡರು, ಕೆ.ಪಿ. ನಂಜುಂಡಿ ಜೊತೆ ಹಣಕಾಸಿನ ವ್ಯವಹಾರದಲ್ಲಿ ಮನಸ್ತಾಪ ಆಯಿತು, ಸ್ಟಾರುಗಳು ನಿರ್ಮಾಪಕ-ನಿರ್ದೇಶಕರ ಮೇಲೆ ಸವಾರಿ ಮಾಡುತ್ತಾರೆ ಎಂದು ಹೇಳಿಕೆ ನೀಡಿ ಚಿತ್ರರಂಗಕ್ಕೆ ವಿದಾಯ ಹೇಳಿದರು, ಅಂಬರೀಶ್ ಒತ್ತಾಯಕ್ಕೆ ಮಣಿದು ವಾಪಸ್ ಬಂದರು, ಮಗನನ್ನು ಹೀರೋ ಮಾಡುವುದಕ್ಕೆ ಹೋಗಿ ಕೈಸುಟ್ಟುಕೊಂಡರು...ಒಂದು ಕಾಲದಲ್ಲಿ ನಾರಾಯಣ್ ಅವರ ಹಿಂದೆ ಓಡಾಡುತ್ತಿದ್ದ ನಿರ್ಮಾಪಕರೆಲ್ಲಾ ಬೇರೆ ನಿರ್ದೇಶಕರನ್ನು ಹುಡುಕಿಕೊಂಡರು. ನಾರಾಯಣ್ ಇದ್ದಕ್ಕಿದ್ದ ಹಾಗೆ ಒಂಟಿಯಾದರು.

ಇವೆಲ್ಲವನ್ನು ನೆನಪಿಸಿಕೊಳ್ಳುತ್ತಾ ನಾರಾಯಣ್ ಮಗಳ ಮದುವೆಯ ಆಹ್ವಾನಪತ್ರಿಕೆಯನ್ನು ಓದುತ್ತಾ ಕುಳಿತೆ. ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ ಅದ್ದೂರಿ ಅಹ್ವಾನ ಪತ್ರಿಕೆಯದು. ಭರ್ತಿ ಎಂಟು ಹಾಳೆಗಳು, ಪೇಜು ಲೆಕ್ಕ ಹಾಕಿದರೆ ಹದಿನಾರು. ಮುಖಪುಟದಲ್ಲಿ ಶ್ರೀನಿವಾಸ ಕಲ್ಯಾಣದ ಪೇಂಟಿಂಗ್. ಎರಡನೇ ಪುಟದಲ್ಲಿ ಅದಿಚುಂಚನಗಿರಿ ಸ್ವಾಮೀಜಿಯ ಫೋಟೋ, ಮೂರನೇ ಪುಟದಲ್ಲಿ ನಾರಾಯಣ್ ಪುತ್ರಿ ಮತ್ತು ಮದುಮಗನ ಫೋಟೋ, ನಾಲ್ಕು ಮತ್ತು ಐದನೇ ಪುಟದಲ್ಲಿ ವಿವಾಹಕ್ಕೆ ಆಹ್ವಾನ, ದಿನಾಂಕ ಮತ್ತು ಜಾಗದ ವಿವರಗಳು, ಆರನೇ ಪುಟ ಮತ್ತು ಏಳನೇ ಪುಟಗಳಲ್ಲಿ ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂದರೇನು ಅನ್ನುವ ಬಗ್ಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ವಿವರಣೆ, ಮುಂದಿನ ಪುಟಗಳಲ್ಲಿ ಕನ್ಯಾದಾನ, ಮಂಗಳ ಸೂತ್ರಗಳ ವ್ಯಾಖ್ಯಾನ, ವಧು ಮತ್ತು ವರನ ಪ್ರತಿಜ್ಞೆಗಳು, ನಾರಾಯಣ್ ಅವರೇ ರಚಿಸಿದ ಕವಿತೆಗೊಂದು ಪುಟ, ಇತ್ಯಾದಿ. ನನ್ನನ್ನು ಗಮನ ಸೆಳೆದದ್ದು ಹದಿನೈದು ಮತ್ತು ಹದಿನಾರನೇ ಪುಟಗಳು. ಅಲ್ಲಿ ನಾರಾಯಣ್ ತಾನು ಹುಟ್ಟೂರು ಭದ್ರಾವತಿಯಿಂದ ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದನ್ನು ಹೇಳಿಕೊಂಡಿದ್ದಾರೆ. ತಮ್ಮ ಸುಖಾಗಮನವನ್ನು ಬಯಸುವವರ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಸಕಲ ವಿಭಾಗಗಳನ್ನು ಹೆಸರಿಸಿದ್ದಾರೆ. ಅದರಲ್ಲಿ ವಾಣಿಜ್ಯ ಮಂಡಳಿಯಿಂದ ಹಿಡಿದು ಪೋಸ್ಟರ್ ಅಂಟಿಸುವವರನ್ನೂ ಹೆಸರಿಸಲಾಗಿದೆ. ನಾರಾಯಣ್ ವ್ಯಕ್ತಿತ್ವಕ್ಕೆ ಈ ಒಂದು ಸಾಲು ಸಾಕ್ಷಿಯಾದೀತು. ಭದ್ರಾವತಿಯಿಂದ ಬರಿಗೈಲಿ ಬೆಂಗಳೂರಿಗೆ ಬಂದ ಹುಡುಗನೊಬ್ಬ ತನ್ನ ಪರಿಶ್ರಮ, ಶ್ರದ್ಧೆ ಮತ್ತು ಆತ್ಮವಿಶ್ವಾಸವನ್ನೇ ನೆಚ್ಚಿಕೊಂಡು ಬೆಳೆದುನಿಂತರೂ ತನ್ನನ್ನು ಪೊರೆದ ಚಿತ್ರೋದ್ಯಮಕ್ಕೆ ಇನ್ನೂ ಕೃತಜ್ಞನಾಗಿದ್ದಾನೆ ಅನ್ನುವುದು ದೊಡ್ಡ ಸಂಗತಿ.
ನಿರ್ದೇಶಕನಾಗಿ ನಾರಾಯಣ್ ಬಗ್ಗೆ ನನ್ನ ತಕರಾರುಗಳು ಏನೇ ಇರಬಹುದು, ಪತ್ರಕರ್ತನಾಗಿ ಅದನ್ನು ಪ್ರಶ್ನಿಸುವ ನನ್ನ ಹಕ್ಕನ್ನು ನಾರಾಯಣ್ ಯಾವತ್ತೂ ಕಿತ್ತುಕೊಂಡಿಲ್ಲ. ನಾನಂದುಕೊಂಡಿದ್ದೇ ಪರಮಸತ್ಯ ಅನ್ನುವ ಟಿಪಿಕಲ್ ಪತ್ರಕರ್ತನ ಅಹಂನ್ನು ನಾರಾಯಣ್ ವಿಷಯದಲ್ಲಿ ನಾನೊಮ್ಮೆ ಬದಲಾಯಿಸಬೇಕಾಯಿತು. ಕೆಲವು ವರ್ಷದ ಹಿಂದೆ ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ನಾನಿದ್ದಾಗ ನಾರಾಯಣ್ ಚಿತ್ರಗಳೂ ಕಣದಲ್ಲಿದ್ದವು. ಜಿ.ವಿ. ಅಯ್ಯರ್ ಸಮಿತಿಯ ಅಧ್ಯಕ್ಷರಾಗಿದ್ದರು. ಅವರಿಗೆ ನಾರಾಯಣ್ ಅವರು ಬರೆದ ಹಾಡೊಂದು ಬಹಳ ಇಷ್ಟವಾಗಿತ್ತು. ಆ ಹಾಡಿಗೆ ಅತ್ಯುತ್ತಮ ಗೀತೆರಚನೆಗಾಗಿ ಪ್ರಶಸ್ತಿ ನೀಡಬಹುದು ಅನ್ನುವ ಸಲಹೆಯನ್ನೂ ನೀಡಿದ್ದರು. ಬೇರೆಯವರು ಅದಕ್ಕೆ ಸಮ್ಮತಿಸಲಿಲ್ಲ. ನನಗೂ ಅಯ್ಯರ್ ನಿಲುವು ಕೊಂಚ ಅಚ್ಚರಿಯನ್ನು ಉಂಟು ಮಾಡಿತ್ತು. ಆ ಹಾಡಲ್ಲಿ ಅಂಥಾದ್ದೇನಿದೆ ಎಂದು ನೇರವಾಗಿಯೇ ಕೇಳಿದೆ. ಅವರೊಂದು ಮಾತು ಹೇಳಿದರು “ ಸಿನಿಮಾ ಹಾಡು ಬರೆಯುವುದಕ್ಕೆ ಒಂದು ಜಾಣ್ಮೆ ಬೇಕಾಗುತ್ತದೆ. ಅದು ಈ ಮನುಷ್ಯನಿಗೆ ಸಿದ್ದಿಯಾಗಿದೆ”. ಆಗ ನನಗೆ ಜ್ಞಾನೋದಯವಾಯಿತು. ಒಂದು ಚಿತ್ರಗೀತೆಯ ಸಾಹಿತ್ಯ ಉತ್ಕೃಷ್ಟವಾಗಿರಬೇಕು ಎಂದೇನೂ ಇಲ್ಲ. ಪದಗಳು ಸರಳವಾಗಿರಬೇಕು, ಸನ್ನಿವೇಶಕ್ಕೆ ತಕ್ಕನಾಗಿರಬೇಕು, ಕೇಳುಗನಿಗೆ ಅರ್ಥವಾಗಿರುವಂತಿರಬೇಕು. ಸಿನಿಮಾಗೆ ಹಾಡು ಬರೆಯುವಾಗ ಪ್ರತಿಭೆಗಿಂತ ಜಾಣ್ಮೆಯೇ ಮುಖ್ಯ. ಕಾಯ್ಮಿಣಿ, ಯೋಗರಾಜ್ ಭಟ್ ಈ ವಾದವನ್ನು ಒಪ್ಪುತ್ತಾರೆಯೇ ಎಂಬ ಬಗ್ಗೆ ನನಗೆ ಕುತೂಹಲವಿದೆ.
ಕಳೆದ ಕೆಲವು ವರ್ಷಗಳಿಂದ ನಾರಾಯಣ್ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಹಾಗೂ ಸನ್ ಸ್ಟ್ರೋಕೇ ಅದಕ್ಕೆ ಕಾರಣ ಎಂದು ಯಾರೋ ಹೇಳುತ್ತಿದ್ದರು. ಆದರೆ ನಾರಾಯಣ್ ಅವರು ಇದಕ್ಕಿಂತಲೂ ಕಷ್ಟದ ಸ್ಥಿತಿಯಲ್ಲಿ ಇದ್ದಿದ್ದನ್ನು ನಾನು ನೋಡಿದ್ದೇನೆ. ಅದು ಭಾಮಾ ಸತ್ಯಭಾಮಾ ಚಿತ್ರದ ಮುಂಚಿನ ದಿನಗಳು. ಆ ಚಿತ್ರಕ್ಕೆ ಕತೆ ಸಿದ್ಧಮಾಡಿಕೊಂಡು ನಾರಾಯಣ್ ಕನ್ನಡದ ಎಲ್ಲಾ ನಾಯಕರ ಬಳಿ ಅಲೆದಾಡಿದ್ದರು. ಯಾರೊಬ್ಬರೂ ಕಾಲ್ ಷೀಟ್ ಕೊಡಲಿಲ್ಲ. ಒಂದೆಡೆ ಅವಮಾನ, ಇನ್ನೊಂದೆಡೆ ಆರ್ಥಿಕ ಮುಗ್ಗಟ್ಟು. ಇವೆರಡೂ ಸೇರಿ ಜರ್ಜರಿತರಾಗಿದ್ದ ನಾರಾಯಣ್ ಇವೆಲ್ಲವನ್ನೂ ಯಾರ ಮುಂದಾದರೂ ಹೇಳಿಕೊಳ್ಳಬೇಕಾಗಿತ್ತು. ಅದಕ್ಕೆ ಅವರು ಆಯ್ಕೆಮಾಡಿಕೊಂಡಿದ್ದು ನನ್ನನ್ನು ಮತ್ತು ಮತ್ತು ಸದಾಶಿವ ಶೆಣೈಯನ್ನು. ಆ ಮಾತುಕತೆ ನಡೆದ ಜಾಗ ಈಗಲೂ ನನಗೆ ನೆನಪಿದೆ. ಮುಸ್ಸಂಜೆಯ ಕಥಾಪ್ರಸಂಗವದು. ವಿಜಯನಗರದಲ್ಲಿ ಅರೆಬರೆ ನಿರ್ಮಾಣವಾಗಿದ್ದ ಕಟ್ಟಡದವೊಂದರ ನೆಲಮಾಳಿಗೆ. ಅಲ್ಲಿ ಹರಡಿದ್ದ ಕಟ್ಟಿಗೆ ಚೂರು, ಮರಳಿನ ರಾಶಿಯ ಮೇಲೆ ಮೂರು ಮುರುಕು ಕುರ್ಚಿಗಳನ್ನು ತಂದಿರಿಸಿ ಖಾಸಗಿ ಪತ್ರಿಕಾಗೋಷ್ಠಿ ನಡೆಯಿತು. ಮಾತಾಡುತ್ತಾ ನಾರಾಯಣ್ ಕಣ್ಣು ಹನಿಗೂಡಿತ್ತು. ಈ ಬಗ್ಗೆ ಹಂಸಕ್ಷೀರ ನ್ಯಾಯ ಪಾಲಿಸಿ ಬಗ್ಗೆ ನಾನೊಂದು ಲೇಖನ ಬರೆದಿದ್ದೆ. ಅದಾಗಿ ಕೆಲವೇ ದಿನಗಳಲ್ಲಿ ‘ಭಾಮಾ ಸತ್ಯಭಾಮಾ’ ಸೆಟ್ಟೇರಿತು, ನಾರಾಯಣ್ ಅವರೇ ಹೀರೋ. ಚಿತ್ರ ಯಶಸ್ಸಾಯಿತು. ಹಿಂದೆ ಕೈಕೊಟ್ಟ ಹೀರೋಗಳೆಲ್ಲ ನಾರಾಯಣ್ ಬಳಿಗೆ ಬಂದರು.
ಚಿತ್ರೋದ್ಯಮ ಅನ್ನುವುದು ದಾರಾಳಿಯೂ ಹೌದು, ಕ್ರೂರಿಯೂ ಹೌದು. ಅದಕ್ಕೆ ಕೊಡುವುದೂ ಗೊತ್ತು, ಕಿತ್ತುಕೊಳ್ಳುವುದೂ ಗೊತ್ತು. ಅದು ಗೊತ್ತಿದ್ದೂ ನಾರಾಯಣ್ ಅದೇ ಚಿತ್ರೋದ್ಯಮದ ಜೊತೆ ಮತ್ತೆ ಚೌಕಾಸಿ ಮಾಡುತ್ತಿದ್ದಾರೆ. ಅವರಲ್ಲಿ ದೂರುಗಳಿವೆ, ಅದನ್ನು ಹೇಳಿಕೊಳ್ಳುವುದಕ್ಕೆ ಇದು ಸಮಯವಲ್ಲ. ನಾರಾಯಣ್ ಈ ಬಾರಿ ಯಾವ ಅವತಾರದಲ್ಲಿ ಮತ್ತೆ ಹಾಜರಾಗುತ್ತಾರೆ ಅನ್ನುವು ಕುತೂಹಲ ನನಗೂ ಇದೆ.
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.