ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ, ಬಚ್ಚನ್, ಮುಂಗಾರು ಮಳೆ 2 ಹೀಗೆ ಹಿಟ್ ಮೇಲೆ ಹಿಟ್ ಚಿತ್ರ ಕೊಟ್ಟಿರುವ ನಿರ್ದೇಶ ಶಶಾಂಕ್ ತಮ್ಮದೇ ಹೋಮ್ ಬ್ಯಾನರ್‍ನಲ್ಲಿ ನಿರ್ಮಿಸುತ್ತಿರುವ ಚಿತ್ರ ತಾಯಿಗೆ ತಕ್ಕ ಮಗ.
ಚಿತ್ರದ ಹೀರೋ ಅಜೇಯ್ ರಾವ್. ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ ಎಂಬ ಎರಡು ಸೂಪರ್ ಹಿಟ್ ಚಿತ್ರ ನೀಡಿರುವ ಜೋಡಿ, ಈಗ ‘ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಮತ್ತೆ ಒಂದಾಗುತ್ತಿದೆ. ಆದರೆ ಚಿತ್ರದ ನಾಯಕಿ ಮತ್ತು ತಾಯಿಯ ಪಾತ್ರಕ್ಕೆ ಇನ್ನೂ ಶಶಾಂಕ್ ಮನಸ್ಸಿಗೆ ತೃಪ್ತಿಯಾಗಬಲ್ಲ ಕಲಾವಿದರು ಸಿಕ್ಕಿಲ್ಲ. ಅವರಿಗೆ ಇನ್ನೂ ಹುಡುಕಾಟ ನಡೆಯುತ್ತಲೇ ಇದೆ.
ಆದರೆ, ಚಿತ್ರಕ್ಕೆ ಸಂಗೀತ ನಿರ್ದೇಶಕರ ಆಯ್ಕೆ ಮುಗಿಸಿದ್ದಾರೆ ಶಶಾಂಕ್. ಜುಡಾ ಸ್ಯಾಂಡಿ ತಾಯಿಗೆ ತಕ್ಕ ಮಗ ಚಿತ್ರದ ಮ್ಯೂಸಿಕ್ ಡೈರೆಕ್ಟರ್. ಜುಡಾ ಸ್ಯಾಂಡಿ ಯಾರು ಎಂದರೆ, ಒಂದ್ಸಲ ಆಪರೇಷನ್ ಅಲಮೇಲಮ್ಮ ಚಿತ್ರವನ್ನು ನೆನಪು ಮಾಡಿಕೊಳ್ಳಿ. ಆ ಚಿತ್ರಕ್ಕೆ ಸಂಗೀತ ನೀಡಿದ್ದವರೇ ಈ ಜುಡಾ ಸ್ಯಾಂಡಿ.
ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಸಿದ್ಧ ಮಾಡಿಕೊಂಡಿರುವ ಶಶಾಂಕ್, ಅಕ್ಟೋಬರ್ 2ನೇ ವಾರದಲ್ಲಿ ಚಿತ್ರದ ಶೂಟಿಂಗ್ ಶುರು ಮಾಡಲಿದ್ದಾರೆ. ಚಿತ್ರಕ್ಕೆ ಡಾ.ರಾಜ್ ಕುಮಾರ್ ಅವರ ಅಭಿನಯದ ಚಿತ್ರದ ಹೆಸರು ಇಟ್ಟುಕೊಂಡಿರು ವಕಾಋಣ, ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ ಶಶಾಂಕ್.
1978ರಲ್ಲಿ ಬಿಡುಗಡೆಯಾಗಿದ್ದ ಡಾ.ರಾಜ್ ಅಭಿನಯದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಪದ್ಮಪ್ರಿಯಾ, ಸಾಹುಕಾರ್ ಜಾನಕಿ, ಪಂಡರೀಭಾಯಿ, ಅಶ್ವತ್ಥ್, ತೂಗುದೀಪ ಶ್ರೀನಿವಾಸ್..ಮೊದಲಾದವರು ನಟಿಸಿದ್ದರು. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಆದರೆ, ತಾಯಿ ಮಗನ ಸೆಂಟಿಮೆಂಟ್ ಇರಲಿದೆ ಎಂದಿದ್ದಾರೆ ಶಶಾಂಕ್.