ಕರಿಹೈದ ಕರಿಯಜ್ಜ. ಇದು ದೈವ ಮತ್ತು ಗುಳಿಗದ ಕಥೆ. ಕಾಂತಾರದ ನಂತರ ಈ ರೀತಿಯ ಚಿತ್ರಗಳು ಕುತೂಹಲ ಮೂಡಿಸುತ್ತಿವೆ. ಆದರೆ ಇದು ಕಾಂತಾರದ ಯಶಸ್ಸಿನಿಂದ ಪ್ರೇರಣೆಗೊಂಡು ಶುರುವಾದ ಸಿನಿಮಾ ಅಲ್ಲ. ಆದರೆ ಕಾಕತಾಳೀಯವೆಂಬಂತೆ ಈ ಚಿತ್ರ ಶುರುವಾಗುವುದಕ್ಕೂ ಕಾಂತಾರ ಹಿಟ್ ಆಗುವುದಕ್ಕೂ ಸಮಯ ಸರಿಹೋಯ್ತು. ಚಿತ್ರವನ್ನು ಅದ್ಧೂರಿಯಾಗಿಯೇ ತೆರೆಗೆ ತಂದಿರುವ ಚಿತ್ರತಂಡ ಈಗ ಚಿತ್ರೀಕರಣವನ್ನೂ ಪೂರೈಸಿದೆ.
ಬಾಲಿವುಡ್ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಅವರಿಗಂತೂ ಕರಿಹೈದ ಕರಿಯಜ್ಜ ವಿಶೇಷ ಅನುಭವವನ್ನೇ ಕೊಟ್ಟಿದೆ. ಕೆಲವು ಅನುಭವಗಳನ್ನು ಬಾಯಿ ಮಾತಿನಲ್ಲಿ ಹೇಳೋಕೆ ಸಾಧ್ಯವಿಲ್ಲ. ಚಿತ್ರದಲ್ಲಿ ನನ್ನದು ಗುಳಿಗ ದೈವದ ಪಾತ್ರ. ಈ ಪಾತ್ರದ ಚಿತ್ರೀಕರಣವೇ ಒಂದು ಅತಿಮಾನುಷ ಅನುಭವ. ಭೂತದ ಗಗ್ಗರ ಹಿಡಿದು ಅಭಿನಯಿಸುವಾಗ ವಿಚಿತ್ರ ಅನುಭವವಾಯಿತು. ನಿರ್ದೇಶಕರು ಕಟ್ ಹೇಳಿದ ತಕ್ಷಣ ಕುಸಿಯತೊಡಗಿದೆ ಎನ್ನುತ್ತಾರೆ ಸಂದೀಪ್.
ಸುಧೀರ್ ಅತ್ತಾವರ್ ನಿರ್ದೇಶಿಸಿರುವ ಸಿನಿಮಾ ಇದು. ಶೂಟಿಂಗ್ ಮುಗಿದ ಮರುದಿನವೇ ಕೋಲ ನಡೆಸಲು ಅವಕಾಶ ಸಿಕ್ಕಿತು. ಅದೂ ಒಂದು ಪವಾಡವೇ. ಚಿತ್ರೀಕರಣದ ವೇಳೆ ಸ್ಫೂರ್ತಿಗೊಳ್ಳಬಾರದು, ಪ್ರೇರಣೆಗೊಳ್ಳಬಾರದು ಎಂಬ ಉದ್ದೇಶದಿಂದಲೇ ಸುಧೀರ್, ಕಾಂತಾರ ನೋಡಿಲ್ಲವಂತೆ. ಕೊರಗ ಜನಾಂಗದವರೇ ಹೇಳಿದ ಕಥೆಯಿಂದ ಸಿನಿಮಾ ಮಾಡಲಾಗಿದೆ. ಅನುಮತಿಯನ್ನೂ ಪಡೆಯಲಾಗಿದೆ ಎನ್ನುತ್ತಾರೆ ಸುಧೀರ್. ನಿರ್ಮಾಪಕ ತ್ರಿವಿಕ್ರಮ ಸಫಲ್ಯ ಚಿತ್ರೀಕರಣವನ್ನು ಅದ್ಧೂರಿಯಾಗಿಯೇ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಭವ್ಯಾ, ಶೃತಿ ಕೂಡಾ ನಟಿಸಿದ್ದಾರೆ.