ಭಕ್ತ ಅಂಬರೀಷ, ಅದೊಂದು ಸಿನಿಮಾ ಡಾ.ರಾಜ್ ಅವರ ಈಡೇರದೇ ಹೋದ ಕನಸು. ಆ ಪಾತ್ರವನ್ನು ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಡುತ್ತಾನೆ ಎಂದು ಹೇಳುತ್ತಲೇ ಇದ್ದ ರಾಜ್‍ಗೆ ಭಗವಂತ ಕರುಣೆ ತೋರಲಿಲ್ಲ. ಈಗ ಅಂಥಾದ್ದೊಂದು ಅವಕಾಶ ಸಿಕ್ಕಿದ್ದು ವಿಜಯ್ ರಾಘವೇಂದ್ರಗೆ.
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಇದೇ ಮೊದಲ ಬಾರಿಗೆ ಜಡ್ಜ್‍ಗಳೂ ಬಣ್ಣ ಹಚ್ಚಿದ್ದರು. ಬಹುಶಃ, ರಿಯಾಲಿಟಿ ಶೋನಲ್ಲಿ ಜಡ್ಜ್‍ಗಳೇ ನಟಿಸಿದ್ದು ಇದೇ ಮೊದಲು. ಈ ಎಪಿಸೋಡ್‍ನಲ್ಲಿ ವಿಜಯ್ ರಾಘವೇಂದ್ರಗೆ ಸಿಕ್ಕಿದ್ದು ಭಕ್ತ ಅಂಬರೀಷನ ಪಾತ್ರ.
ಆರಂಭದಲ್ಲಿಯೇ ವಿಜಯ್ ರಾಘವೇಂದ್ರಗೆ ಒತ್ತಡ ಇದ್ದದ್ದು ನಿಜ. ಏಕೆಂದರೆ, ಗಿರಿಜಾ ಲೋಕೇಶ್, ತಮ್ಮ ಮಾವ ಸುಬ್ಬಯ್ಯ ನಾಯ್ಡು ಅವರ ಜೊತೆಯಲ್ಲಿ ಡಾ. ರಾಜ್ `ಭಕ್ತ ಅಂಬರೀಷ' ನಾಟಕದಲ್ಲಿ ಅಭಿನಯಿಸುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಎಸ್.ನಾರಾಯಣ್, ಶ್ರೀಮುರಳಿ, ಚಿನ್ನೇಗೌಡ.. ಅದೇ ವೇದಿಕೆಯಲ್ಲಿರುವ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು, ಆನಂದ್ ಎಲ್ಲರೂ ಪ್ರತಿ ಕ್ಷಣದಲ್ಲೂ ವಿಜಯ್ ರಾಘವೇಂದ್ರ ಅವರಿಗೆ ಡಾ.ರಾಜ್‍ರನ್ನು ನೆನಪಿಸುತ್ತಲೇ ಇದ್ದರು. ಡಾ. ರಾಜ್ ಅವರನ್ನು ಸರಿದೂಗಿಸುವ ಒತ್ತಡವನ್ನು ಮೈಮೇಲೆಳೆದುಕೊಂಡೇ ನಟಿಸಿದ ವಿಜಯ್ ರಾಘವೇಂದ್ರ ಪ್ರೇಕ್ಷಕರ ಮನಸ್ಸು ಗೆದ್ದರು.
ಡಾ.ರಾಜ್, ಕನ್ನಡಿಗರಿಗೆ ಮೇರುಕಲಾವಿದ. ವಿಜಯ್ ರಾಘವೇಂದ್ರ ಅವರಿಗೆ ದೊಡ್ಡ ಮಾವ. ಅಣ್ಣಾವ್ರ ಅಭಿಯನಕ್ಕೆ ಸರಿಸಾಟಿಯಾಗುವ ಒತ್ತಡದ ನಡುವೆಯೇ ಅದ್ಭುತವಾಗಿ ನಟಿಸಿದ ವಿಜಯ್ ರಾಘವೇಂದ್ರ ಅಭಿಮಾನಿಗಳ ಮನಸ್ಸು ಗೆದ್ದರು.