ಅಶ್ವಿನಿ ಪುನೀತ್ ರಾಜಕುಮಾರ್ ಮತ್ತೊಂದು ಮೆಚ್ಚುಗೆಯ ಹೆಜ್ಜೆ ಇಟ್ಟಿದ್ದಾರೆ. ಸೆ.28ರಂದು ರಿಲೀಸ್ ಆಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ಗಂಧದ ಗುಡಿ ಚಿತ್ರಕ್ಕೆ ರಿಯಾಯಿತಿ ಘೋಷಿಸಿದ್ದಾರೆ. ಸಿಂಗಲ್ ಥಿಯೇಟರ್ನಲ್ಲಿ 4 ದಿನಗಳ ಕಾಲ 'ಗಂಧದ ಗುಡಿ' ಸಾಕ್ಷ್ಯಚಿತ್ರದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗುವುದು ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಘೋಷಿಸಿದ್ದಾರೆ.
ಗಂಧದಗುಡಿ ಅಪ್ಪು ಅವರ ಒಂದು ಕನಸು ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪುಗೊಳ್ಳಲು ಕಾರಣ. ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು. ಅದರಲ್ಲಿಯೂ ಮಕ್ಕಳು ನೋಡಬೇಕೆಂಬುದು. ಈ ಸಲುವಾಗಿ ನಾನು ಹಾಗೂ ಚಿತ್ರತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದಗುಡಿಯನ್ನು 7-11-2022 ಸೋಮವಾರದಿಂದ 10-11-2022 ಗುರುವಾರದವರೆಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ 112 ರೂಪಾಯಿಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ. ಜೈ ಹಿಂದ್, ಜೈ ಕರ್ನಾಟಕ ಮಾತೆ.
ಗಂಧದ ಗುಡಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಹಾಗೆ ನೋಡಿದರೆ ಗಂಧದ ಗುಡಿ ಟಿಕೆಟ್ ದರವನ್ನು ದುಬಾರಿಯೇನೂ ಮಾಡಿರಲಿಲ್ಲ. ಅಭಿಮಾನಿ ಸಾಗರ ಹರಿದು ಬರಲಿದೆ ಎಂದು ಗೊತ್ತಿದ್ದರೂ ಟಿಕೆಟ್ ದರ ಏರಿಸಿರಲಿಲ್ಲ. ಈಗ ಮಕ್ಕಳಿಗಾಗಿ ಟಿಕೆಟ್ ದರವನ್ನು ಇಳಿಸಿದ್ದಾರೆ. ಅಶ್ವಿನಿ ಪುನೀತ್ ನಿರ್ಧಾರಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.