`ನನ್ನನ್ನು ಅರ್ಜುನ್ ಸರ್ಜಾ ಅಲ್ಲಿಗೆ ಕರೆದ್ರು, ಇಲ್ಲಿಗೆ ಕರೆದ್ರು ಅಂತೀರಲ್ಲ. ಒಂದು ದಿನ ನೇರವಾಗಿ ಅವರ ಮನೆಗೇ ಹೋಗಿ.. ಅವರ ಪತ್ನಿಯ ಎದುರು ನಿಂತು.. ನೋಡಿ ನಿಮ್ಮ ಯಜಮಾನರು ನನ್ನನ್ನು ರೆಸಾರ್ಟ್‍ಗೆ ಕರೀತಿದ್ದಾರೆ. ಖಾಸಗಿಯಾಗಿ ನನ್ನ ಜೊತೆ ಇರಬೇಕಂತೆ. ರೆಸಾರ್ಟ್‍ಗೆ ಯಾಕೆ ಅಂತ ಮನೆಗೇ ಬಂದೆ...'' ಎಂದು ಹೇಳಿದ್ದರೆ, ನಿಮ್ಮ ಪ್ರತಿಭಟನೆಯನ್ನ ನಿಜಕ್ಕೂ ಒಪ್ಪಿಕೊಳ್ಳಬಹುದಿತ್ತು. ತಪ್ಪು ಮಾಡಿದ್ದವರಿಗೆ ಅದೇ ಸರಿಯಾದ ಶಿಕ್ಷೆಯಾಗುತ್ತಿತ್ತು. ಇಂಥಾದ್ದೊಂದು ಮಾತು ಹೇಳಿದವರು ಡೈರೆಕ್ಟರ್ ಗುರುಪ್ರಸಾದ್. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಚಿತ್ರದ ನಿರ್ದೇಶಕ ಗುರುಪ್ರಸಾದ್.
ಶೃತಿ ಹರಿಹರನ್ ಸಿಡಿಸಿದ ಮೀಟೂ ಬಾಂಬ್‍ಗೆ ಅರ್ಜುನ್ ಸರ್ಜಾ ಫ್ಯಾಮಿಲಿ ಉತ್ತರಿಸೋಕೆ ಹೋರಾಡುತ್ತಿರುವಾಗಲೇ ಗುರುಪ್ರಸಾದ್, ಮೀಟೂ ಎಂದ ಪ್ರತಿಯೊಬ್ಬರ ವಿರುದ್ಧವೂ ಸಿಡಿದುಬಿದ್ದಿದ್ದಾರೆ.
ನಾನು ಮೀಟೂ ಆರೋಪದ ವ್ಯಾಪ್ತಿಯಲ್ಲಿಲ್ಲ. ಆದರೆ, ನನ್ನ ಚಿತ್ರದ ನಾಯಕಿಯಾಗಿದ್ದ ಸಂಗೀತಾ ಭಟ್ ಮೀಟೂ ಎಂದಿದ್ದಾರೆ. ಆ ಕಾರಣಕ್ಕೆ ನಾನು ಮಾತನಾಡುತ್ತಿದ್ದೇನೆ. ಆಕೆ ಆರೋಪಿಸಿರುವ ಪ್ರಸಿದ್ಧ ನಿರ್ದೇಶಕ ನಾನೇ ಆಗಿದ್ದರೆ, ಸಂಗೀತಾ ಭಟ್ ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ ಗುರು.
ನನ್ನ ಎರಡನೇ ಸಲ ಚಿತ್ರದಲ್ಲಿ ಹಾಟ್ ಸೀನ್‍ಗಳಿವೆ. ರೊಮ್ಯಾಂಟಿಕ್ ಮತ್ತು ಅರೆಬೆತ್ತಲೆ ಬೆನ್ನಿನ ದೃಶ್ಯಗಳೂ ಇವೆ ಎಂದು ಸಂಗೀತಾ ಭಟ್‍ಗೆ ಹೇಳಿದಾಗ, ಆಕೆ ನನಗೆ ಕಳುಹಿಸಿರುವ ಫೋಟೋಗಳನ್ನು ನೋಡಿದರೆ ನೀವೇ ಶಾಕ್ ಆಗುತ್ತೀರಿ. ಅದನ್ನೂ ಮೀರಿ ತೋರಿಸೋಕೆ ರೆಡಿ ಎನ್ನುವಂತಿದ್ದವು ಆ ಫೋಟೋಗಳು. ಅಷ್ಟಕ್ಕೂ ಆ ಸೀನ್‍ಗಳನ್ನು ಚಿತ್ರೀಕರಿಸುವಾಗ ಸೆಟ್‍ನಲ್ಲಿ ನನ್ನ ಹೆಂಡತಿ ಮತ್ತು ಮಗಳೂ ಇದ್ದರು. ಇದು ಸಂಗೀತಾ ಭಟ್‍ಗೆ ಗುರು ಹೇಳಿರುವ ಉತ್ತರ.
ಮೀಟೂ ಗಲಾಟೆ ಮಾಡುವವರು ಎಷ್ಟು ಸುಸಂಸ್ಕøತುರು..? ಮದುವೆಯಾಗಿದ್ದರೂ ತಮ್ಮ ಗಂಡನ ಹೆಸರನ್ನೇ ಮುಚ್ಚಿಟ್ಟು ಚಲಾವಣೆ ಆದವರು. ಸತ್ಯ ಮುಚ್ಚಿಟ್ಟು ಚಿತ್ರರಂಗದಲ್ಲಿ ಚಲಾವಣೆ ಆಗೋದು ಹೇಗೆ, ಪತಿವ್ರತೆ ಎಂದು ಸಾಬೀತು ಮಾಡೋದು ಹೇಗೆ ಅನ್ನೋದನ್ನ ಇವರನ್ನ ನೋಡಿ ಕಲಿಯಬೇಕು ಎಂದಿರೋ ಗುರುಪ್ರಸಾದ್, ಇವರಿಗಿಂತ ಸನ್ನಿಲಿಯೋನ್ ಎಷ್ಟೋ ವಾಸಿ. ಅಟ್‍ಲೀಸ್ಟ್ ಅವರು ಪ್ರೊಫೆಷನಲ್ ಆಗಿರುತ್ತಾರೆ ಎಂದಿದ್ದಾರೆ.
ನೀವು ನಟಿಯರೇ ಇಷ್ಟು ಕಣ್ಣೀರು ಹಾಕಿ ನಾಟಕ ಮಾಡಿದರೆ, ನಿಮ್ಮಿಂದ ನಟನೆ ಮಾಡಿಸೋ ಡೈರೆಕ್ಟರುಗಳು ನಾವು. ನಾವೆಷ್ಟು ನಾಟಕ ಆಡಿಸಬಹುದು. ಕಲ್ಪನೆ ಇದೆಯಾ..? ನಾವು ಸೈಲೆಂಟ್ ಆಗಿದ್ದೇವೆ ಅಂದ್ರೆ, ಅದು ನಮ್ಮ ದೌರ್ಬಲ್ಯ ಅಲ್ಲ. ನಿಮ್ಮ ಮೇಲಿರೋ ಕನಿಕರ ಎಂದಿರುವ ಗುರುಪ್ರಸಾದ್, ನೀವು ಚಿತ್ರರಂಗ ಬಿಟ್ಟು ಹೋದರೆ, ಕೊಳೆ ಹೋಯ್ತು ಎಂದುಕೊಳ್ತೇವೆ ಅಷ್ಟೆ ಎಂದಿದ್ದಾರೆ.
ಸಿನಿಮಾದಲ್ಲಿ ಎಲ್ಲವೂ ಮುಗಿದು, ಗಂಡ, ಮನೆ, ಮಕ್ಕಳು ಎಂದು ಸೆಟ್ಲ್ ಆಗುವಾಗ ಅಯ್ಯೋ.. ನಾನು ತಪ್ಪು ಮಾಡಿಬಿಟ್ಟೆ ಎಂಬ ಪಾಪಪ್ರಜ್ಞೆ ಕಾಡುತ್ತೆ. ಗಂಡ, ಅತ್ತೆ, ಮಾವಂದಿರ ಎದಿರು ನಾನು ಪತಿವ್ರತೆ, ಸತಿ ಸಾವಿತ್ರಿ ವಂಶದವಳು ಎಂದು ತೋರಿಸಿಕೊಳ್ಳೋ ಹಂಬಲ ಶುರುವಾಗುತ್ತೆ. ಆಗ ಶುರುವಾಗುವುದೇ ಈ ಮೀಟೂ. ಇದು ಗುರುಪ್ರಸಾದ್ ವಿಶ್ಲೇಷಣೆ.