ಮೀಟೂ ಆರೋಪದಲ್ಲಿ ಸಿಲುಕಿರುವ ನಟ ಅರ್ಜುನ್ ಸರ್ಜಾ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪೊಲೀಸರ 40 ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಸತತ 3 ಗಂಟೆಗಳ ವಿಚಾರಣೆಯಲ್ಲಿ ಪೊಲೀಸರು 40 ಪ್ರಶ್ನೆ ಕೇಳಿದ್ದರೆ, ಆ 40 ಪ್ರಶ್ನೆಗಳಿಗೂ ಅರ್ಜುನ್ ಸರ್ಜಾ ಉತ್ತರಗಳನ್ನು ನೀಡಿದ್ದಾರೆ. ಲಿಖಿತ ಹೇಳಿಕೆಯನ್ನೂ ಕೊಟ್ಟಿದ್ದಾರೆ.
ವಿಸ್ಮಯ ಚಿತ್ರದಲ್ಲಿ ನಿರ್ದೇಶಕರು ಹೇಳಿದಂತೆ ನಟಿಸಿದ್ದೇನೆ. ಸಿನಿಮಾದ ಶೂಟಿಂಗ್ 50 ಜನರ ಎದುರು ನಡೆದಿದೆ. ಸೆಟ್‍ನಲ್ಲಿ ಶೃತಿ ಅವರನ್ನು ತಬ್ಬಿಕೊಂಡಿದ್ದು, ಚಿತ್ರೀಕರಣದ ಒಂದು ಭಾಗ. ಹೀಗಾಗಿ ಆರೋಪವೇ ದುರುದ್ದೇಶದಿಂದ ಕೂಡಿದೆ.
ನನ್ನ ಮೇಲೆ ಆರೋಪ ಹೊರಿಸುತ್ತಿರು ನಟಿ ಶೃತಿ ಹರಿಹರನ್, ಚಿತ್ರದ ಬಿಡುಗಡೆ ಸಂದರ್ಭದಲ್ಲಿ ನನ್ನನ್ನು ಹಾಡಿ ಹೊಗಳಿದ್ದರು. ಚಿತ್ರೀಕರಣದ ವೇಳೆ ನನ್ನೆದುರಾಗಲೀ, ಚಿತ್ರತಂಡದ ಯಾರ ಎದುರೇ ಆಗಲಿ.. ಅಕೆ ಕಣ್ಣೀರು ಹಾಕಿರಲಿಲ್ಲ. ಬೇಕಿದ್ದರೆ, ಚಿತ್ರೀಕರಣದ ವಿಡಿಯೋ ತರಿಸಿಕೊಂಡು ಪರಿಶೀಲನೆ ಮಾಡಿ.
ರೂಮಿಗೆ ಬನ್ನಿ, ಮಜಾ ಮಾಡೋಣ ಎಂದು ನಾನು ಶೃತಿ ಅವರನ್ನು ಕರೆದಿಲ್ಲ. ಸೆಟ್‍ನ ಎಲ್ಲರನ್ನೂ ಊಟಕ್ಕೆ ಕರೆದಿದ್ದೆ. ಎಲ್ಲರೊಂದಿಗೇ ಊಟ ಮಾಡಿದ್ದೆ. ಆಗ ಶೃತಿ ಅವರನ್ನೂ ಕರೆದಿದ್ದೇನೆ. ಯುಬಿ ಸಿಟಿಯಲ್ಲಿದ್ದಾಗ ಕೂಡಾ ನಾನು ಅವರನ್ನು ಕೊಠಡಿಗೆ ಕರೆದಿಲ್ಲ. ಅವರನ್ನಷ್ಟೇ ಅಲ್ಲ, ಯಾರನ್ನೂ ನಾನು ನನ್ನ ರೂಮಿಗೆ ಕರೆದಿಲ್ಲ.
ಶೃತಿ ಅವರ ಆಯ್ಕೆ ವೇಳೆಯೂ ನಾನು ಇರಲಿಲ್ಲ. ನಿರ್ದೇಶಕ ಅರುಣ್ ಹೇಳಿದ ಮೇಲಷ್ಟೇ ಆಕೆ ಬಗ್ಗೆ ಗೊತ್ತಾಗಿದ್ದು. ಚಿತ್ರೀಕರಣದಲ್ಲಷ್ಟೇ ನಾನು ಆಕೆಯನ್ನು ಮೊದಲ ಬಾರಿಗೆ ನೋಡಿದ್ದು. ಅದಕ್ಕೂ ಮೊದಲು ಆಕೆಯನ್ನು ನೋಡಿರಲಿಲ್ಲ. ಪರಿಚಯವೂ ಇರಲಿಲ್ಲ.
ಪೊಲೀಸರ ಎಲ್ಲ ಪ್ರಶ್ನೆಗಳಿಗೂ ಅರ್ಜುನ್ ಸರ್ಜಾ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ವಿಚಾರಣೆ ವೇಳೆ ಸ್ಟೇಷನ್‍ಗೆ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಆಪ್ತರಾದ ಪ್ರಶಾಂತ್ ಸಂಬರಗಿ ಹಾಗೂ ಮ್ಯಾನೇಜರ್ ಶಿವಾರ್ಜುನ್ ಕೂಡಾ ಬಂದಿದ್ದರು.