ಕಣ್ಣಿಲ್ಲದ ನಾಯಕ, ನಾಯಕಿಯ ಪ್ರೇಮಕಥೆ, ಕಾಲಿಲ್ಲದವರ ಲವ್‍ಸ್ಟೋರಿಗಳನ್ನು ನೀವು ಹಲವು ಚಿತ್ರಗಳಲ್ಲಿ ನೋಡಿದ್ದೀರಿ. ಆದರೆ, ಕಣ್ಣು ಕಾಣದ, ಕಿವಿ ಕೇಳದ, ಮಾತನಾಡಲು ಆಗದವನ ಪ್ರೇಮಕಥೆಯನ್ನು ಎಲ್ಲಾದರೂ ಕೇಳಿದ್ದೀರಾ..? ಅಂಥಾದ್ದೊಂದು ಅದ್ಭುತ ಪ್ರೇಮಕಥೆ, 3 ಗಂಟೆ, 30 ದಿನ 30 ಸೆಕೆಂಡ್ ಚಿತ್ರದಲ್ಲಿದೆ.
ಚಿತ್ರದಲ್ಲಿ ದೇವರಾಜ್ ಕ್ಯಾ.ಸುಂದರಮ್ ಪಾತ್ರದಲ್ಲಿ ನಟಿಸಿದ್ದಾರೆ. ಅದು ಪಾಕ್ ವಿರುದ್ಧದ ಯುದ್ಧದಲ್ಲಿ ತನ್ನ ಜೀವವನ್ನೇ ಮುಡುಪಾಗಿಟ್ಟು, ದೇಶವನ್ನು ರಕ್ಷಿಸಿದ ಯೋಧನ ಕಥೆ. ದೇಶವನ್ನು ಗೆಲ್ಲಿಸಿದರೂ, ದೇಹದ ಮೇಲೆ ನಿಯಂತ್ರಣವನ್ನೇ ಕಳೆದುಕೊಳ್ಳುವ ಸೈನಿಕನಿಗೆ ಆಸರೆಯಾಗಿ ಬರುವುದು ಸುಧಾರಾಣಿ.
ಸುಲೋಚನಾ ಪಾತ್ರದಲ್ಲಿ ನಟಿಸಿರುವ ಸುಧಾರಾಣಿ, ದೇವರಾಜ್‍ರ ದೇಶಪ್ರೇಮವೇ ಇಷ್ಟವಾಗಿ ಪ್ರೀತಿಸುತ್ತಾರೆ. ಅವರಿಬ್ಬರ ನಡುವಿನ 25 ವರ್ಷಗಳ ಪ್ರೀತಿಯಲ್ಲಿ ಅವರಿಬ್ಬರ ಮಧ್ಯೆ ಒಂದು ವಿಚಿತ್ರ ಭಾಷೆಯೊಂದು ಬೆಳೆಯುತ್ತದೆ.
ಈ ಹಿಂದೆ ಹಲವು ಚಿತ್ರಗಳಲ್ಲಿ ಸುಧಾರಾಣಿ ಮತ್ತು ದೇವರಾಜ್ ಒಟ್ಟಿಗೇ ನಟಿಸಿದ್ದಾರೆ. ಆದರೆ, ಇದು ಸಂಪೂರ್ಣ ವಿಭಿನ್ನ. ಮಧುಸೂದನ್ ಗೌಡ ನಿರ್ದೇಶನದ ವಿಭಿನ್ನ ಕಥಾಹಂದರದ ಸಿನಿಮಾ ವಿಭಿನ್ನ ಅನುಭವ ನೀಡುವುದು ಸುಳ್ಳಲ್ಲ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಚಿತ್ರ, ಒಂದು ವಿಶೇಷ ಪ್ರೇಮಕಥೆ ಹೇಳಲಿದೆ.