ಉಪೇಂದ್ರ ತಮ್ಮ ಎಂದಿನ ಶೈಲಿಯಲ್ಲಿ ಒಂದು ಪೋಸ್ಟರ್ ಬಿಟ್ಟು, ತಲೆಗೆ ಕುತೂಹಲದ ಹುಳ ಬಿಟ್ಟು, ಏನನ್ನೂ ಹೇಳದೆ.. ನೋಡುವವರ ಕಲ್ಪನೆಗೇ ಎಲ್ಲವನ್ನೂ ಬಿಟ್ಟು.. ಮೂರು ನಾಮ ಅಥವಾ ತಿರುಪತಿ ನಾಮ ಅಥವಾ ಯು&ಐ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದೇನೆ ಎಂಬ ಸುಳಿವನ್ನು ಕೊಟ್ಟು.. ಸುಮ್ಮನಾಗಿಬಿಟ್ಟಿದ್ದಾರೆ.
ಆ ಸಿನಿಮಾ ಕಥೆ ಏನು? ಸಸ್ಪೆನ್ಸ್.
ಅದು ನಾನು ಮತ್ತು ನೀನು ಫಿಲಾಸಫಿ ಸ್ಟೋರಿನಾ? ಗೊತ್ತಿಲ್ಲ.
ಉಪೇಂದ್ರ ಮತ್ತು ಉಪ್ಪಿ2. ಎರಡೂ ಚಿತ್ರಗಳ ಮುಂದುವರಿದ ಭಾಗನಾ? ಗೊತ್ತಿಲ್ಲ.
ಉಪ್ಪಿ ಸ್ಟೈಲಿನ ಪೊಲಿಟಿಕಲ್ ಡ್ರಾಮಾನಾ? ಗೊತ್ತಿಲ್ಲ.
ಯಾವಾಗ ಶುರುವಾಗುತ್ತೆ? ಗೊತ್ತಿಲ್ಲ. ಆದರೆ.. ಉಪ್ಪಿ ಕೈಲಿರೋ ಸಿನಿಮಾಗಳು ಮುಗಿದ ಮೇಲೆ ಅನ್ನೋದು ಮಾತ್ರ ಪಕ್ಕಾ.
ಕಾರಣ ಇಷ್ಟೆ, ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಿಗೇ ನಟಿಸಿರುವ ತ್ರಿಶೂಲಂ (ತೆಲುಗಿನ ಬಲುಪು ರೀಮೇಕ್) ರಿಲೀಸ್ ಆಗೋಕೆ ರೆಡಿಯಾಗಿದೆ. ಓಂಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂಗೆ ಕನಕಪುರ ಶ್ರೀನಿವಾಸ್ ನಿರ್ಮಾಪಕ.
ಉಪೇಂದ್ರ, ವೇದಿಕಾ, ತಾನ್ಯಾ ಹೋಪ್ ನಟಿಸಿರುವ ಹೋಮ್ ಮಿನಿಸ್ಟರ್ ಕೂಡಾ ರೆಡಿಯಾಗಿದೆಯಂತೆ.
ಇನ್ನು ಉಪ್ಪಿ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿಗೆ ಜೋಡಿಯಾಗಿರುವ ಲಗಾಮ್ ಶೂಟಿಂಗ್ ನಡೆಯುತ್ತಿದೆ. ಕೆ.ಮಾದೇಶ್ ನಿರ್ದೇಶನದ ಲಗಾಮ್ ಬೇಗನೇ ಮಗಿಯುವ ಸೂಚನೆಗಳಿವೆ.
ಬುದ್ದಿವಂತ 2 ಚಿತ್ರದ ಶೂಟಿಂಗ್ ಇನ್ನೂ ಶುರುವಾಗಬೇಕಿದೆ. ರಾಮ್ ಗೋಪಾಲ್ ವರ್ಮಾ ಚಿತ್ರದ ಸ್ಟೇಟಸ್ ಯಾವಾಗ ಅಪ್‍ಡೇಟ್ ಆಗುತ್ತೋ ಗೊತ್ತಿಲ್ಲ.
ಇದೆಲ್ಲದರ ಮಧ್ಯೆ ಉಪೇಂದ್ರ ಅವರ ಬಹುನಿರೀಕ್ಷಿತ ಕಬ್ಜ, ಕುತೂಹಲ ಹುಟ್ಟಿಸುತ್ತಿದೆ. ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಕಬ್ಜ ಚಿತ್ರದ ಮೇಕಿಂಗ್ ಅದ್ಧೂರಿಯಾಗಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕಬ್ಜ, 2022ರ ಆರಂಭದಲ್ಲಿ ರಿಲೀಸ್ ಆಗಬಹುದು.
ಸ್ಸೋ.. ಉಪ್ಪಿ ಡೈರೆಕ್ಷನ್ ಯಾವಾಗ ಶುರು ಎಂಬ ಪ್ರಶ್ನೆಗೆ ಈ ಎಲ್ಲ ಉತ್ತರಗಳಲ್ಲಿಯೇ ಉತ್ತರವೂ ಇದೆ.