ನಿನ್ನೆ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಬಗ್ಗೆ ಯಾರಿಗೂ ಒಂದು ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಅಂಥಾದ್ದೊಂದು ಸ್ಪಷ್ಟ ರೂಪ ಸಿಕ್ಕ ಮೇಲೆ ಹಲವು ರಾಜಕಾರಣಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ತಂದೆ, ತಾಯಿ ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ. ಇನ್ನೂ ಕೆಲವರು ನೋಡೋಣ.. ಏನ್ ಮಾಡ್ತೀರಿ ಅಂತಾ ಕಾಲೆಳೆದಿದ್ದಾರೆ. ವಿಷ್ ಮಾಡಲ್ಲ ಎಂದವರೂ ಇದ್ದಾರೆ. ಯಾರು ಯಾರು ಏನೇನು ಹೇಳಿದ್ದಾರೆ ಅನ್ನೋದನ್ನು ಬದಿಗಿಟ್ಟು ನೋಡೋದಾದ್ರೆ, ರಾಜ್ಯದಲ್ಲಿ ವಿದ್ಯಾರ್ಥಿಗಳು ಉಪೇಂದ್ರ ಅವರಿಗೆ ಶುಭ ಕೋರಿದ್ದಾರೆ. ಯುವಕ ಯುವತಿಯರು ಉಪ್ಪಿ ಐಡಿಯಾಗಳಿಗೆ ಥ್ರಿಲ್ ಆಗಿದ್ದಾರೆ. ಕೆಲವರು ಇದು ಭ್ರಮೆ. ವಾಸ್ತವಕ್ಕೆ ದೂರ ಎಂದಿದ್ದಾರೆ. ಒಟ್ಟಾರೆ ಅಭಿಪ್ರಾಯಗಳಲ್ಲಿ ನಾಯಕರ ಮಾತುಗಳು ಇಲ್ಲಿವೆ ನೋಡಿ.
ಅವನಿಗೆ ಚಿಕ್ಕಂದಿನಿಂದ ರಾಜಕೀಯದ ಆಸೆ ಇತ್ತು. ಅವನು ಒಳ್ಳೆಯದನ್ನೇ ಮಾಡ್ತಾನೆ. ಸಂತೋಷವಾಗಿದೆ. ನಮ್ಮ ಜೊತೆ ಏನೂ ಚರ್ಚೆ ಮಾಡಿರಲಿಲ್ಲ.
ಅನುಸೂಯಮ್ಮ, ಉಪೇಂದ್ರ ತಾಯಿ
ನನ್ನ ಮಗನ ಮೇಲೆ ನಂಬಿಕೆ ಇದೆ. ಏನೇ ಮಾಡಿದರೂ ಯೋಚಿಸಿಯೇ ಮಾಡುತ್ತಾನೆ. ಎಲ್ಲವನ್ನೂ ವಿನಾಯಕ ನಡೆಸಿಕೊಡುತ್ತಾನೆ
ಮಂಜುನಾಥ್, ಉಪೇಂದ್ರ ತಂದೆ
ಇಷ್ಟು ದಿನ ಉಪೇಂದ್ರ ಬಣ್ಣ ಹಚ್ಚಿಕೊಂಡು ಸಿನಿಮಾ ಮಾಡ್ತಾ ಇದ್ರು. ಈಗ ಬಣ್ಣ ಹಚ್ಚದೇ ರಾಜಕೀಯ ಮಾಡಲಿ. ಜಾತ್ಯತೀತ ತತ್ವದಡಿ ಉಪೇಂದ್ರ ರಾಜಕೀಯ ಮಾಡಲಿ. ಅವರಿಗೆ ಸ್ವಾಗತ.
ಡಿ.ಕೆ. ಶಿವಕುಮಾರ್, ಸಚಿವ
ಉಪೇಂದ್ರ ಹೊಸ ಪಕ್ಷ ಸ್ಥಾಪಿಸಲು ಸ್ವತಂತ್ರರಿದ್ದಾರೆ. ಉಪೇಂದ್ರ ಹೊಸ ಪಕ್ಷ ಸ್ಥಾಪನೆ ಮಾಡುವುದಕ್ಕಿಂತ ತಮ್ಮ ಐಡಿಯಾಲಜಿಗೆ ಒಪ್ಪುವಂತಹ ಪಕ್ಷಕ್ಕೆ ಸೇರ್ಪಡೆಯಾಗಲಿ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬರುವುದಾದರೆ ಬರಲಿ
ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ವಿಪಕ್ಷ ನಾಯಕ
ನಾನು ಅವರಿಗೆ ಶುಭಾಶಯ ಕೋರುವುದಿಲ್ಲ. ಹೊಸ ಪಕ್ಷ ಕಟ್ಟುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಅದನ್ನು ತಡೆಯುವಂತಿಲ್ಲ. ಕರ್ನಾಟದಲ್ಲಿ ಹೊಸ ಪಕ್ಷ ಕಟ್ಟಿ ಯಶಸ್ವಿಯಾದ ನಟರಿಲ್ಲ
ಪ್ರಮೋದ್ ಮಧ್ವರಾಜ್, ಸಚಿವ
ಉಪೇಂದ್ರ ಅವರ ಆಲೋಚನೆ ಯೋಜನೆ ಚೆನ್ನಾಗಿದೆ . ಅದರಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತಾರೆ ಎಂಬುದು ಪ್ರಶ್ನೆ. ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ.
ಸುರೇಶ್ ಕುಮಾರ್, ಬಿಜೆಪಿ ಶಾಸಕ
ನಟ ಉಪೇಂದ್ರ ಅವರಲ್ಲಿ ವಿಭಿನ್ನ ಆಲೋಚನೆಗಳಿವೆ. ಉಪೇಂದ್ರರ ಪ್ರಶ್ನೆಗಳಿಗೆ ರಾಜ್ಯದ ಜನ ತಲೆಬಾಗಬೇಕು. ನಾನೂ ಕೂಡಾ ತಲೆಬಾಗುತ್ತೇನೆ. ಉಪೇಂದ್ರ ಅವರೇ ಬೇರೆ ಪಕ್ಷಗಳಿಗೆ ಹೋಗಬೇಡಿ. ನೀವೇ ಹೊಸ ಪಕ್ಷವನ್ನು ಕಟ್ಟಿ. ನನ್ನ ಬೆಂಬಲ ಇದೆ.
ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
ಉಪೇಂದ್ರ ಆಲೋಚನೆ ಚೆನ್ನಾಗಿದೆ. ಅವರಿಗೆ ಶ್ರೀರಾಮ ಸೇನೆ ಬೆಂಬಲ ನಿಡಲಿದೆ
ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖಂಡ
ಅವರು ಜನರಿಗೇನು ಸೇವೆ ಕೊಟ್ಟಿದ್ದಾರೆ. ಜನ ಸಾಮಾನ್ಯರಿಗೆ ಏನು ಕೊಟ್ಟರು ಅನ್ನೋದು ಮುಖ್ಯ. ರಾಜ್ಕುಮಾರ್ ರಾಜಕಾರಣವೇ ಬೇಡ ಎಂದು ದೂರ ಹೋಗಿದ್ದರು. ಇವರೇನು ಮಾಡ್ತಾರೆ ನೋಡೋಣ.
ಶಿವಳ್ಳಿ, ಶಾಸಕ
ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಗೊತ್ತಿಲ್ಲ. ಚುನಾವಣೆ ಹತ್ತಿರ ಬಂದಾಗ ಹಲವರು ಹೊರಬರುತ್ತಾರೆ. ಅವರಿಂದ ನಮ್ಮ ಪಕ್ಷಕ್ಕೆ ಲಾಭವೂ ಇಲ್ಲ. ನಷ್ಟವೂ ಇಲ್ಲ. ಅವರ ಬಳಿ ತುಂಬಾ ದುಡ್ಡಿರಬೇಕು. ಅದಕ್ಕೇ ಬಂದಿದ್ದಾರೆ.
ವಿನಯ್ ಕುಲಕರ್ಣಿ, ಶಾಸಕ