ಅದು ಕುದುರೆ ಲಾಳವಾ..? ಯು ಮತ್ತು ಐ ಎರಡೂ ಅಕ್ಷರಗಳ ಜೊತೆ ಉಪ್ಪಿ ಆಡಿರೋ ಆಟವಾ..? ನಾನು..ನೀನು ಅನ್ನೋ ಸಿಂಬಲ್ಲಾ..? ಮೂರು ನಾಮವಾ..?ಕಲ್ಕಿಯಾ..?
ಅರ್ಥವಾಗದೆ ಪ್ರೇಕ್ಷಕ ತಲೆಕೆಡಿಸಿಕೊಳ್ಳುತ್ತಿದ್ದಾನೆ. ಏಕೆಂದರೆ ಅದು ಉಪ್ಪಿ ಹುಳ. ಉಪ್ಪಿ ಬದಲಾಗಿಲ್ಲ. ಹುಳ ಬಿಡೋದನ್ನೂ ಬಿಟ್ಟಿಲ್ಲ. ಕನ್‍ಫ್ಯೂಷನ್ ಇಷ್ಟಕ್ಕೇ ನಿಲ್ಲಲ್ಲ.
ಪೋಸ್ಟರ್‍ನಲ್ಲಿ ಕುದುರೆ ಉಂಟು. ಆದರೆ ಆ ಕುದರೆಗೆ ಕೊಂಬುಗಳೂ ಉಂಟು. ಯಾವ ಕಾಲದಲ್ಲಿ ಕುದುರೆಗೆ ಕೊಂಬುಗಳಿದ್ದವು..? ದೇವಸ್ಥಾನ..ಚರ್ಚು.. ಮಸೀದಿ.. ರೈಲು.. ಉಪಗ್ರಹ.. ಎಲ್ಲವೂ ಇರೋ ಚಿತ್ರದ ಕಥೆಯಾದರೂ ಏನಿರಬಹುದು?
ಅದು ನಿಮಗೇ ಬಿಟ್ಟಿದ್ದು. ನಾನು ಈ ಕಥೆ ಹೇಳುತ್ತಿರೋದು ನೀವು ಕೊಟ್ಟಿರೋ ಫೀಡ್‍ಬ್ಯಾಕ್‍ನಿಂದ. ಹೀಗಾಗಿ ಇದು ನಿಮ್ಮದೇ ಕಥೆ. ನೀವೇ ಹೇಳಿರೋ ಕಥೆ. ಹಾಗಾಗಿ ಇದನ್ನು ಯಾವ ರೀತಿ ಕರೆಯುತ್ತೀರೋ ಅದು ನಿಮಗೇ ಬಿಟ್ಟಿದ್ದು ಅಂತಾರೆ ಉಪೇಂದ್ರ. ಕೆ.ಪಿ.ಶ್ರೀಕಾಂತ್, ಲಹರಿ ಮನೋಹರ್ ನಿರ್ಮಾಪಕರಾಗಿದ್ದಾರೆ. ಚಿತ್ರದ ಶೂಟಿಂಗ್ ಮೇ ತಿಂಗಳಲ್ಲಿ ಶುರುವಾಗಲಿದೆ.
ಹೀಗೆ ಹುಳ ಬಿಡೋದು ಉಪ್ಪಿಗೆ ಹೊಸದೇನಲ್ಲ. ಶ್ ಚಿತ್ರದಿಂದ ಶುರುವಾದ ಟ್ರೆಂಡ್ ಇದು. ಶ್, ಓಂ, ಎ, ಸ್ವಸ್ತಿಕ್, ?, ಉಪೇಂದ್ರ, ಉಪ್ಪಿ 2, ಸೂಪರ್.. ಹೀಗೆ ಉಪೇಂದ್ರ ನಿರ್ದೇಶಿಸಿದ ಪ್ರತಿ ಚಿತ್ರದ ಟೈಟಲ್‍ನಲ್ಲೂ ಹುಳ ಬಿಟ್ಟಿರೋದು ಉಪ್ಪಿ ಹೆಗ್ಗಳಿಕೆ. ಹೀಗೆ ಅವರು ಹೇಳಿದ ಟೈಟಲ್ಲುಗಳಲ್ಲಿ ? ಒಂದು ಟೈಟಲ್ ಘೋಷಣೆಯಲ್ಲೇ ನಿಂತು ಹೋಯ್ತು.