ನಾನು ನನ್ನ ಸಿನಿಮಾದ ಸೆನ್ಸಾರ್ ಆಗದ ಪ್ರೋಮೋ/ಹಾಡುಗಳನ್ನು ಟಿವಿ ಚಾನೆಲ್ಗಳಲ್ಲಿ ಹಾಗೂ ಸೋಷಿಯಲ್ ಮೀಡಿಹಯಾಗಳಲ್ಲಿ ಪ್ರಸಾರ ಮಾಡುವುದಿಲ್ಲ. ಭವಿಷ್ಯದಲ್ಲಿಯೂ ಕೂಡಾ ನಾನು ನನ್ನ ಸಿನಿಮಾದ ಸೆನ್ಸಾರ್ ಆದ ದೃಶ್ಯ, ಪ್ರೋಮೋ, ಹಾಡುಗಳನ್ನು ಮಾತ್ರವೇ ಪ್ರಸಾರ ಮಾಡುತ್ತೇನೆ.
ಕರ್ನಾಟಕದ ಸೆನ್ಸಾರ್ ಬೋರ್ಡ್ ಅಧಿಕಾರಿಗಳು, ಇಂಥಾದ್ದೊಂದು ಪ್ರಮಾಣಪತ್ರಕ್ಕೆ ಚಿತ್ರದ ನಿರ್ಮಾಪಕರಿಂದ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಇದು ಸೆಂಟ್ರಲ್ ಸೆನ್ಸಾರ್ ಬೋರ್ಡ್ನ ಅಧಿಕೃತ ಪ್ರಕ್ರಿಯೆ. ಆದರೆ, ಇಲ್ಲಿ ಕರ್ನಾಟಕ ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಒಂದು ಪ್ರಮಾದ ಎಸಗಿದ್ದಾರೆ.
ಸೋಷಿಯಲ್ ಮೀಡಿಯಾ ನಿರ್ಬಂಧ ಕಾನೂನಿನಲ್ಲೇ ಇಲ್ಲ..!
ಸಮಸ್ಯೆ ಇರುವುದು ಇಲ್ಲೇ ಏಕೆಂದರೆ, ಸಿನಿಮಾಟೋಗ್ರಫಿ ಕಾಯ್ದೆ ಪ್ರಕಾರ, ಸೆನ್ಸಾರ್ ಆಗದ ದೃಶ್ಯ, ಪ್ರೋಮೋ ಅಥವಾ ಹಾಡುಗಳನ್ನು ಪ್ರಸಾರ ಮಾಡುವ ಹಾಗಿಲ್ಲ. ಆದರೆ, ಆ ಕಾಯ್ದೆಯಲ್ಲಿ ಸೋಷಿಯಲ್ ಮೀಡಿಯಾ ಇಲ್ಲವೇ ಇಲ್ಲ. ಸೋಷಿಯಲ್ ಮೀಡಿಯಾ ಎನ್ನುವುದು ವೈಯಕ್ತಿಕ ಮಾಧ್ಯಮವಾಗಿರುವ ಕಾರಣ ಹಾಗೂ ಕಾಯ್ದೆ ಜಾರಿಗೆ ಬಂದಾಗ ಸೋಷಿಯಲ್ ಮೀಡಿಯಾ ಕಲ್ಪನೆಯೇ ಇಲ್ಲದ ಕಾರಣದಿಂದ ಕಾಯ್ದೆಯಲ್ಲಿ ಸೋಷಿಯಲ್ ಮೀಡಿಯಾವನ್ನು ಸೇರಿಸಿಯೇ ಇಲ್ಲ. ಹೀಗಿದ್ದರೂ, ಕರ್ನಾಟಕದ ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಕಾನೂನು ಪುಸ್ತಕದಲ್ಲಿಯೇ ಇಲ್ಲದ ಕಾನೂನನ್ನು ಚಿತ್ರ ನಿರ್ಮಾಪಕರ ಮೇಲೆ ಹೇರಲು ಹೊರಟಿದ್ದಾರೆ.
ಅಂದಹಾಗೆ ಕೇಂದ್ರ ಸೆನ್ಸಾರ್ ಬೋರ್ಡ್ನ ಪ್ರಮಾಣ ಪತ್ರದಲ್ಲಿ ಕೂಡಾ ಸೋಷಿಯಲ್ ಮೀಡಿಯಾ ಎಂಬ ಪದ ಇಲ್ಲ. ಚಿತ್ರಲೋಕ ತಂಡ, ಸಿಬಿಎಫ್ಸಿ ಇಂಡಿಯಾದ ಎಲ್ಲ ಮಾಹಿತಿಗಳನ್ನೂ ಜಾಲಾಡಿದಾಗ ಕೂಡಾ ಅಲ್ಲಿ ಸೋಷಿಯಲ್ ಮೀಡಿಯಾ ಎಂಬ ಪದವೂ ಇಲ್ಲ ಎನ್ನುವುದು ಗೊತ್ತಾಗಿದೆ. ಕಳೆದ 2 ತಿಂಗಳಿಂದ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಅಧಿಕಾರಿಯಾದ ಶ್ರೀನಿವಾಸಪ್ಪ, ಈ ರೀತಿಯ ಅಫಿಡವಿಟ್ಗೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ.
ಇಲ್ಲದ ಕಾನೂನನ್ನು ಪ್ರಾದೇಶಿಕ ಚಿತ್ರಗಳ ಮೇಲಷ್ಟೇ ಹೇರುತ್ತಿರುವುದು ಏಕೆ..? ಇದರಿಂದ ಪ್ರಾದೇಶಿಕ ಚಿತ್ರಗಳಿಗೆ, ಅದರಲ್ಲೂ ಕನ್ನಡ ಚಿತ್ರಗಳಿಗೆ ಸಮಸ್ಯೆಯಲ್ಲವೇ..? ಕಾನೂನು ಪುಸ್ತಕದಲ್ಲಿಯೇ ಇಲ್ಲದ ಕಾನೂನನ್ನು ಹೇರುವುದು ಕಾನೂನು ಬಾಹಿರವಲ್ಲವೇ..? ಹಿಂಬಾಗಿಲಿನಲ್ಲಿ ಬರುತ್ತಿರುವ ಇಂಥ ‘ಅದೃಶ್ಯ ಕಾನೂನು’ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಬಹುದು. ? ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಇದಕ್ಕೆ ಉತ್ತರಿಸುವರೇ..?
Also View