ಕರ್ನಾಟಕ ಫಿಲಂ ಚೇಂಬರ್‍ಗೆ ಹೊಸ ಸಾರಥಿಗಳ ಆಗಮನವಾಗಿದೆ. ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಇಂದು ನೂತನ ಸದಸ್ಯರು ಆದಿಕಾರ ಸ್ವೀಕರಿಸಲಿದ್ದಾರೆ. ಇಂದು 11 ಗಂಟೆಗೆ ವಿಜಯಶಾಲಿಯಾಗಿರುವ ಸದಸ್ಯರು ಪದಗ್ರಹಣ ಮಾಡಲಿದ್ದಾರೆ.
ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಎ.ಚಿನ್ನೇಗೌಡ, 551 ಮತಗಳನ್ನು ಪಡೆದು ಜಯಶಾಲಿಯಾದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಮಾರ್ಸ್ ಸುರೇಶ್, 317 ಮತಗಳನ್ನು ಪಡೆದರು.
ಇದು ನನ್ನ ಗೆಲುವಲ್ಲ, ಚಿತ್ರೋದ್ಯಮದ ಗೆಲುವು. ಒಳ್ಳೆಯ ಕೆಲಸ ಮಾಡುವುದಕ್ಕೆ ಸಿಕ್ಕ ಒಳ್ಳೆಯ ಅವಕಾಶ ಇದು. ವಾಣಿಜ್ಯ ಮಂಡಳಿಯ ಘನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿದ್ದಾರೆ ಚಿನ್ನೇಗೌಡ.
ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನದಲ್ಲಿ ಗೆದ್ದವರು ಕರಿಸುಬ್ಬು (338 ಮತ), ತೀವ್ರ ಪೈಪೋಟಿ ಒಡ್ಡಿದ್ದ ಪ್ರಮೀಳಾ ಜೋಷಾಯ್ (277) ಹಾಗೂ ದಿನೇಶ್ ಗಾಂಧಿ (253) ಮತಗಳನ್ನು ಪಡೆದು ಪರಾಭವಗೊಂಡರು.
ವಿತರಕರ ವಲಯದ ಉಪಾಧ್ಯಕ್ಷ ಸ್ಥಾನ ಒಲಿದಿದ್ದು ಕೆ.ಮಂಜು (274) ಅವರಿಗೆ. ಕೆ. ಮಂಜು ಅವರ ಸಮೀಪದ ಪ್ರತಿಸ್ಪರ್ಧಿಯಾಗಿದ್ದು ನಾಗಣ್ಣ (238). ಕುಟ್ಟಿ(153), ಕುಪ್ಪಸ್ವಾಮಿ(47), ಬಿ.ಆರ್.ಕೇಶವ(156) ಮತ ಪಡೆದರಷ್ಟೇ. ಅಂತಿಮವಾಗಿ ಗೆಲುವು ಒಲಿದಿದ್ದು ಕೆ. ಮಂಜುಗೆ.
ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನ ಗೆದ್ದವರು ಭಾಮಾ ಹರೀಶ್(573 ಮತ). ಪ್ರತಿಸ್ಪರ್ಧಿಯಾಗಿದ್ದ ಎ.ಗಣೇಶ್ (345 ಮತ) ಪಡೆದರು.
ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನ ಒಲಿದಿದ್ದು ಶಿಲ್ಪ ಶ್ರೀನಿವಾಸ್(295 ಮತ) ಅವರಿಗೆ. ಪ್ರತಿಸ್ಪರ್ಧಿಗಳಾಗಿದ್ದ ಜಿ.ವೆಂಕಟೇಶ್ (255), ಕೆ.ರಾಜಶೇಖರ್ (80) ಹಾಗೂ ಪಾರ್ಥಸಾರಥಿ (238) ಮತಗಳನ್ನಷ್ಟೇ ಪಡೆದರು.
ಗೌರವ ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಎಂ.ವೀರೇಶ್ 452 ಮತಗಳನ್ನು ಪಡೆದು ವಿಜಯಶಾಲಿಯಾದರು. ಸಮೀಪದ ಪ್ರತಿಸ್ಪರ್ಧಿ ಜಯಸಿಂಹ ಮುಸುರಿ 416 ಮತ ಪಡೆದು ಪರಭಾವಗೊಂಡರು.
ಪ್ರದರ್ಶಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದ ಕಾರಣ, ಚುನಾವಣೆ ನಡೆಯಲಿಲ್ಲ. ಪ್ರದರ್ಶಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದು, ಆ ಸ್ಥಾನಕ್ಕೂ ಚುನಾವಣೆ ನಡೆಯಲಿಲ್ಲ.
ಇಂದು ಬೆಳಗ್ಗೆ 11 ಗಂಟೆಗೆ ನೂತನ ಅಧ್ಯಕ್ಷ ಚಿನ್ನೇಗೌಡರು ಹಾಗೂ ನೂತನ ಸದಸ್ಯರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.