ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗು ನೀ ಕನ್ನಡವಾಗಿರು.. ಕುವೆಂಪು ಅದ್ಯಾವ ತಂಪು ಹೊತ್ತಿನಲ್ಲಿ ಆ ಮಾತು ಹೇಳಿದರೋ.. ಏನೋ.. ಕನ್ನಡಿಗರಿಗೆ ಆ ಮಾತು ಕಿವಿಗೇ ಬೀಳಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ಅನ್ನ ಕೊಡುವ ಭಾಷೆಯಲ್ಲ. ಇಂಗ್ಲಿಷು ಕಲಿಯದಿದ್ದರೆ ಉಳಿಗಾಲವಿಲ್ಲ ಎನ್ನುವುದು ಒಂದು ನೆಪವಾದರೆ (ಅದು ನೆಪವೇ ಹೊರತು, ಕಾರಣ ಅಲ್ಲ) ಇಂಗ್ಲಿಷ್‍ನಲ್ಲಿ ಮಾತನಾಡುವುದನ್ನೇ ಪ್ರತಿಷ್ಟೆ, ಹೆಮ್ಮೆ ಎಂದು ಭಾವಿಸಿದವರು ಮತ್ತೊಂದು ಕಡೆ.
ಸಮಸ್ಯೆ ಇರುವುದೇ ಇಲ್ಲಿ. ಹಾಗೆ ಆಡುವವರಿಗೆ ಕನ್ನಡವೂ ಗೊತ್ತಿರಲ್ಲ. ಇಂಗ್ಲೀಷು ಮೊದಲೇ ಬರಲ್ಲ. ಇಲ್ಲಿ ಕನ್ನಡ ಭಕ್ತರದ್ದೂ ತಪ್ಪುಗಳಿವೆ. ಕನ್ನಡದಲ್ಲಿ ಇರುವ ಪ್ರತಿ ಪದಗಳೂ ಕನ್ನಡದಿಂದಲೇ ಉದ್ಭವವಾದವುಗಳಲ್ಲ. ಸಂಸ್ಕøತ, ಪರ್ಷಿಯನ್, ಪಾರ್ಸಿ, ಉರ್ದು.. ಹೀಗೆ ಹಲವು ಭಾಷೆಗಳಿಂದ ಕನ್ನಡದಲ್ಲಿ ಪದಗಳು ಹುಟ್ಟಿವೆ. ಆದೆರ, ಅವೆಲ್ಲವುಗಳನ್ನೂ ಕನ್ನಡದ್ದೇ ಪದಗಳು ಎಂಬಂತೆ ಒಪ್ಪಿಕೊಂಡಿರುವ ನಾವು, ಇಂಗ್ಲಿಷ್‍ನ ಬಗ್ಗೆ ಇಲ್ಲಸಲ್ಲದ ಮಡಿವಂತಿಕೆ ತೋರಿಸಲು ಹೊರಡುತ್ತೇವೆ. ಇಂಗ್ಲಿಷ್‍ನ ಒಂದೇ ಒಂದು ಪದವೂ ಕನ್ನಡದಲ್ಲಿರದಂತೆ ಜಾಗ್ರತೆ ವಹಿಸಲು ಹೋಗುತ್ತೇವೆ. ಅದು ವಾಸ್ತವಕ್ಕೆ ದೂರವಾದ ಕಲ್ಪನೆಯೇ ಹೊರತು ಬೇರೇನಲ್ಲ.
ಅವೆಲ್ಲವನ್ನೂ ಪಕ್ಕಕ್ಕಿಟ್ಟು ಕನ್ನಡ ಚಿತ್ರರಂಗದತ್ತ ಒಮ್ಮೆ ಕಣ್ಣು ಹಾಯಿಸಿದರೆ, ಎಲ್ಲಿಂದಲೋ ಬಂದವರು ಇಲ್ಲಿನವರಾಗಿ ಕನ್ನಡವನ್ನೇ ಅನ್ನ, ನೀರಾಗಿ ಮಾಡಿಕೊಂಡವರಿದ್ದಾರೆ. ತುಂಬಾ ಹಿಂದಕ್ಕೆ ಹೋದರೆ, ಇಂಥವರ ಸಂಖ್ಯೆ ಇನ್ನಷ್ಟು ಸಿಗಬಹುದೇನೋ.. ಆದರೆ, ಈಗ ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರ ಕನ್ನಡ ಪ್ರೇಮವನ್ನೊಮ್ಮೆ ಗಮನಿಸಿ.
ಅಭಿನವ ವಜ್ರಮುನಿ ಎಂದೇ ಕರೆಸಿಕೊಳ್ಳುತ್ತಿರುವ ರವಿಶಂಕರ್, ತಾವು ತೆಲುಗರು ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಅದು ಎಷ್ಟರಮಟ್ಟಿಗೆಂದರೆ, ಕನ್ನಡ ನನ್ನ ಹೃದಯದಲ್ಲಿದೆ, ಕನ್ನಡಿಗರ ಅಭಿಮಾನಕ್ಕೆ ನಾನು ಚಿರಋಣಿ ಎಂದು ಬೇರೆ ಭಾಷಿಕರ ವೇದಿಕೆಯಲ್ಲೂ ಹೇಳುವಷ್ಟರ ಮಟ್ಟಿಗೆ.
ಪ್ರಿಯಾಂಕಾ ಉಪೇಂದ್ರ ಮೂಲತಃ ಬೆಂಗಾಳಿ. ಉಪೇಂದ್ರ ಅವರನ್ನು ಮದುವೆಯಾದ ಮೇಲೆ ಕನ್ನಡ ಕಲಿಯಲು ಶುರು ಮಾಡಿದ್ದು. ಈಗ.. ಬೇಕಾದರೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡದ ಪಾಠ ಹೇಳಿಕೊಡುವಷ್ಟು ಕಲಿತಿದ್ದಾರೆ.
ನಟಿ ರಾಗಿಣಿ ದ್ವಿವೇದಿಯೂ ಅಷ್ಟೆ. ಮೊದ ಮೊದಲು ಕನ್ನಡ ಮತ್ತು ಇಂಗ್ಲಿಷ್‍ನ್ನು ಮಿಕ್ಸ್ ಮಾಡಿ ಮಾತನಾಡುತ್ತಿದ್ದ ರಾಗಿಣಿ, ಈಗ ಕನ್ನಡವನ್ನು ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾರೆ. ನಾನು ಕನ್ನಡ ಕಲಿಯತ್ತೇನೆ ಎಂದರೆ, ಕನ್ನಡಿಗರು ಸಹಾಯ ಮಾಡುತ್ತಾರೆ. ಪ್ರೋತ್ಸಾಹಿಸುತ್ತಾರೆ ಎನ್ನುವುದು ಅವರ ಅನುಭವದ ಮಾತು.
ಐಂದ್ರಿತಾ ರೇ ಕೂಡಾ ಅಷ್ಟೆ.. ಬೆಂಗಾಳಿ. ದಿಗ್‍ದಿಗಂತವನ್ನು ಗೆದ್ದರೆ, ಕರ್ನಾಟಕದ ಸೊಸೆಯಾಗಬಹುದು. ಅವರಿಗೆ ಕನ್ನಡವಷ್ಟೇ ಅಲ್ಲ, ಕರ್ನಾಟಕದ ಇತಿಹಾಸದ ಬಗ್ಗೆ ಒಮದು ಗಂಟೆ ಕಾಲ ನಿರರ್ಗಳವಾಗಿ ಮಾತನಾಡಬಲ್ಲರು ಕೂಡಾ. ಸಂಜನಾ ಗರ್ಲಾನಿಯ ವಿಚಾರ ಬಿಡಿ, ಆಕೆ ತಾನು ದೆಹಲಿಯವರು ಎಂದು ಹೇಳಿದರೂ ಯಾರೂ ನಂಬಲು ಸಾಧ್ಯವಿಲ್ಲ.
ಪೂಜಾ ಗಾಂಧಿ ಕನ್ನಡವನ್ನು ಮೊದ ಮೊದಲು ಆಡಿಕೊಳ್ಳುತ್ತಿದ್ದವರಿಗೆ ಈಗ ಅವರ ಕನ್ನಡ ಪ್ರೀತಿ ಇಷ್ಟವಾಗುತ್ತಿದೆ. ಅಷ್ಟೆಲ್ಲ ಯಾಕೆ.. ಕನ್ನಡ ಚಿತ್ರರಂಗವನ್ನು ದಶಕಗಳ ಕಾಲ ಆಳಿದ.. ಮಹಾರಾಣಿ ಮಾಲಾಶ್ರೀ ಕೂಡಾ ಕನ್ನಡತಿಯಲ್ಲ. ಆದರೀಗ ಅವರ ಮನೆಯಲ್ಲಿ ಕನ್ನಡವೇ ಎಲ್ಲ. ಶಾನ್ವಿ ಶ್ರೀವಾಸ್ತವ ಈಗ ಕನ್ನಡ ಕಲಿಯುವ ಹಂತದಲ್ಲಿದ್ದಾರೆ. ಕೆಲವೇ ದಿನದಲ್ಲಿ ನಿಮಗೇ ಕನ್ನಡ ಕಲಿಸ್ತೀವಿ ಎನ್ನುವಷ್ಟು ಆತ್ಮವಿಶ್ವಾಸ ಅವರ ಮಾತಿನಲ್ಲಿದೆ.
ಸ್ವಲ್ಪ ಹಿಂದಕ್ಕೆ ಹೋದರೆ, ಸುಹಾಸಿನಿ, ಸರಿತಾ, ಮಾಧವಿ, ಗೀತಾ, ಲಕ್ಷ್ಮಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಎಸ್.ಜಾನಕಿ ಇವರು ಯಾರೂ ಕನ್ನಡದವರಲ್ಲ. ಆದರೆ, ಅವರ ಕನ್ನಡ.. ಕನ್ನಡದ ಮೇಲಿನ ಹಿಡಿತ ಇಷ್ಟವಾಗುತ್ತೆ.
ಇದೆಲ್ಲವನ್ನೂ ಹೇಳೋಕೆ ಕಾರಣ ಇಷ್ಟೆ. ಐ ಡೋಂಟ್ ನೋ ಕನ್ನಡ ಯಾರ್.. ಐ ಕುಡಂಟ್ ಅಂಡರ್‍ಸ್ಟಾಂಡ್‍ನಾ.. ಪ್ಲೀಸ್ ಮಾ.. ಟೆಲ್ ಮಿ ಇನ್ ಇಂಗ್ಲಿಷ್.. ಎನ್ನುತ್ತಾ ಕನ್ನಡವನ್ನೇ ಮರೆಯುತ್ತಿರುವವರಿಗೆ ಇವರು ಪಾಠ. ಎಲ್ಲ ಓಕೆ.. ಕನ್ನಡವನ್ನು ಕಲಿಸೋದು ಹೇಗೆ..?
ಒಂದು ಸಿಂಪಲ್ ಸೂತ್ರ ಇಲ್ಲಿದೆ ನೋಡಿ. ಪಾನಿಪೂರಿ ಮಾರುವವನ ಬಳಿ ದೋ ಪ್ಲೇಟ್ ದೇದೋ ಭಯ್ಯಾ ಅನೋದನ್ನು ಬಿಡಿ, ವ್ಯವಹಾರ ಮಾಡಲೆಂದು ಬಂದವನು ಅವನು. ನಮ್ಮ ಭಾಷೆಯನ್ನು ಅವನು ಕಲಿಯಬೇಕೇ ಹೊರತು, ನಾವಲ್ಲ. ಮಾಲ್‍ಗಳಿಗೆ ಹೋದಾಗ, ಕನ್ನಡದಲ್ಲಿ ಮಾತನಾಡಿದರೆ ಅವಮಾನವೇನೋ ಎಂಬಂತಾಡುವುದನ್ನು ಬಿಡಿ, ಅವರು ವ್ಯವಹಾರಸ್ಥರು. ವ್ಯಾಪಾರ ಆಗಲ್ಲ ಎಂದರೆ, ಕನ್ನಡ ಕಲಿತೇ ಕಲೀತಾರೆ. ಸ್ಟಾರ್ ಹೋಟೆಲ್‍ಗಳಿಗೆ ಹೋದಾಗ.. ಕನ್ನಡ ಗೊತ್ತಿಲ್ಲ ಎನ್ನುವವರತ್ತ ಒಂದು ಆಕ್ರೋಶದ ನೋಟವೊಂದನ್ನು ಬಿಸಾಕಿ, ಕನ್ನಡ ಬರಲ್ವಾ.. ವಾಟ್ ಎ ಶೇಮ್ ಎನ್ನಿ. ಅವರು ಕನ್ನಡ ಕಲೀತಾರೆ.
ಅಂದಹಾಗೆ ನಮ್ಮ ಊರಿನ ಹೆಸರಲ್ಲಿಯೇ ಕರುಣೆ ಇದೆ. ಹಾಗೆಂದು ಕರುನಾಡು ಎಂದರೆ ಕರುಣೆಯ ನಾಡಾಬೇಕೇ ಹೊರತು, ಕರುಣಾಜನಕವಾಗಬಾರದು ಅಲ್ಲವೇ..?