ಇದು ಸರ್ಕಾರಿ ಅಧಿಕಾರಿಗಳ ಕಥೆಯಾ?
ಭ್ರಷ್ಟಾಚಾರದ ಕಥೆಯಾ?
ಭ್ರಷ್ಟಾಚಾರದ ವಿರುದ್ಧ ಹೋರಾಟದ ಕಥೆಯಾ?
ಗೆಲ್ಲೋದು ಯಾರು? ಭ್ರಷ್ಟರೋ? ಅಧಿಕಾರಿಯೋ? ನ್ಯಾಯವೋ..?
ಇಂಥಾದ್ದೊಂದು ಪ್ರಶ್ನೆ ಮತ್ತು ಕುತೂಹಲ ಎರಡನ್ನೂ ನೋಡುಗರ ಮುಂದಿಟ್ಟಿದೆ ಹೋಪ್ ಚಿತ್ರದ ಟ್ರೇಲರ್.
ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರೋ ಸಿನಿಮಾದಲ್ಲಿ ಸುಮಲತಾ ಅಂಬರೀಷ್ ಕೂಡಾ ಇದ್ದಾರೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ.. ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಚಿತ್ರದಲ್ಲಿದೆ. ಅವಧಿಗೆ ಮುನ್ನವೇ ವರ್ಗವಾಗುವ.. ಭ್ರಷ್ಟಾಚಾರದ ವಿರುದ್ಧ ನಿಂತಿದ್ದಕ್ಕೆ.. ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕುವ ಮಹಿಳಾ ಆಫೀಸರ್ ಒಬ್ಬರು ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುವ ಕಥೆ ಹೋಪ್. ಎಲ್ಲ ಕಡೆ ಅನ್ಯಾಯ ಆದಾಗಲೇ ಅಲ್ವಾ ಸರ್, ನ್ಯಾಯಾಲಯಕ್ಕೆ ಬರೋದು ಅನ್ನೋ ಲೈನ್ ಮೂಲಕ ಎಂಡ್ ಆಗುವ ಟ್ರೇಲರ್ ಬೇರೆಯದೇ ಫೀಲ್ ಕೊಡುತ್ತೆ. ಚಿತ್ರದ ನಿರ್ದೇಶಕ ಎಂ.ಅಂಬರೀಷ್. ಹಿಂದೆ ಜ್ವಲಂತ ಸಿನಿಮಾ ನಿರ್ದೇಶಿಸಿದ್ದವರು. ಚಿತ್ರಕ್ಕೆ ಕಥೆ ಬರೆದಿರೋದು ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್. ನಿರ್ಮಾಣವೂ ಅವರದ್ದೇ. ಜುಲೈ 8ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.