ಕಿರುತೆರೆಯಲ್ಲಿ ಖ್ಯಾತರಾಗಿರುವ ನಟ ಚಂದನ್ ಮೇಲೆ ತೆಲುಗು ಧಾರಾವಾಹಿಯ ಚಿತ್ರೀಕರಣ ವೇಳೆ ತಂತ್ರಜ್ಞರು ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಸ್ವತಃ ಚಂದನ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.
ಹಲ್ಲೆ ನಡೆದ ದಿನ ಏನಾಯ್ತು?
ಧಾರಾವಾಹಿಯ ಎಪಿಸೋಡ್‍ಗಳು ಮುಗಿದು ಹೋಗಿವೆ, ಬನ್ನಿ ಎಂದರು. ನನ್ನ ಶೆಡ್ಯೂಲ್ ಇಲ್ಲದೇ ಇದ್ದರೂ ಹೋದೆ. ಹಿಂದಿನ ದಿನವಷ್ಟೇ ನನ್ನ ಅಮ್ಮ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ನೋಡಿಕೊಳ್ಳುತ್ತಿದ್ದ ಕಾರಣ ನಿದ್ರೆಯೂ ಸರಿಯಾಗಿ ಆಗಿರಲಿಲ್ಲ. ಆದರೂ ಸೆಟ್ಟಿಗೆ ಹೋದೆ. ಆದರೆ.. ಈಗ ಶುರುವಾಗಲಿದೆ ಎಂದು ಹೇಳುತ್ತಲೇ ಮೂರು ಗಂಟೆಗೂ ಹೆಚ್ಚು ಕಾಲ ಕಾಯಿಸಿದರು. ಆ ಗ್ಯಾಪ್‍ನಲ್ಲಿ ನಾನು ಮಲಗಿದ್ದೆ. ಈ ಮಧ್ಯೆ ಅಸಿಸ್ಟೆಂಟ್ ಆಗಿದ್ದ ರಂಜಿತ್`ನನ್ನು ಯಾವಾಗ ಚಿತ್ರೀಕರಣ ಎಂದೂ ಕೇಳಿದ್ದೆ. ಆದರೆ ಇನ್ನೂ ಶುರುವಾಗಿಲ್ಲ ಎಂದವನು, ನಾನು ಮಲಗಿದ್ದಾಗ ಇದ್ದಕ್ಕಿದ್ದಂತೆ ಕೆಟ್ಟದಾಗಿ ಮಾತನಾಡಿದ. ಅವಾಚ್ಯ ಶಬ್ಧಗಳಿಂದ ಬಯ್ಯೋಕೆ ಶುರು ಮಾಡಿದ. ಮೈಮೇಲೆ ಹೊಡೆಯುವವನಂತೆ ಏರಿ ಬಂದ. ನಾನು ದೂರ ತಳ್ಳಿದೆ. ಆತ ಅದನ್ನು ದೊಡ್ಡದು ಮಾಡಿದ. ಸೆಟ್‍ನಲ್ಲಿದ್ದವರೆಲ್ಲ ಒಟ್ಟಾದರು. ನನಗೆ ಹೊಡೆದರು.
ಚಂದನ್ ಮಾಡಿದ್ದೇನು?
30-40 ಜನ ಸುತ್ತುವರೆದಿರುವಾಗ ನಾನೊಬ್ಬ ಏನು ಮಾಡೋಕೆ ಸಾಧ್ಯ. ಅವನ ಮೇಲೆ ಕೈ ಮಾಡಿದ್ದಕ್ಕೆ ನಾನು ಕ್ಷಮೆ ಕೇಳಿದೆ. ಅವರು ಕ್ಷಮೆ ಕೇಳಿಲ್ಲ.
ಮುಂದೇನು ಮಾಡ್ತೀರಿ? ದೂರು ಕೊಡ್ತೀರಾ?
ಇಲ್ಲ. ದೂರು ಕೊಡಲ್ಲ. ಆದರೆ ಅವರು ಕ್ಷಮೆ ಕೇಳುವವರೆಗೆ ಆ ಧಾರಾವಾಹಿಯಲ್ಲಿ ನಾನು ಇನ್ನು ಮುಂದೆ ನಟಿಸುವುದಿಲ್ಲ. ಆ ಧಾರಾವಾಹಿಯ ನಿರ್ಮಾಪಕರು ಕೂಡಾ ಕನ್ನಡಿಗರೇ. ಪ್ರಶಾಂತ್ ಅಂತ ಅವರ ಹೆಸರು. ಅವರಿಗೆ ಹೇಳಿದ್ದೇನೆ.
ಈ ಹಲ್ಲೆಯ ಹಿಂದೆ ಬೇರೆ ಉದ್ದೇಶ ಇರಬಹುದೇ?
ಈ ಘಟನೆ ಆದ ನಂತರ ಧಾರಾವಾಹಿಗಳಲ್ಲಿ ಕೆಲಸ ಮಾಡುವವರು ಚಾನೆಲ್ ಮುಖ್ಯಸ್ಥರಿಗೆ ಕನ್ನಡಿಗರಿಗೆ ಇಲ್ಲಿ, ತೆಲುಗು ಧಾರಾವಾಹಿಗಳಲ್ಲಿ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದ್ದಾರಂತೆ.
ಹುನ್ನಾರ ಇರಬಹುದು ಎನ್ನಿಸುತ್ತಿರುವುದು ಇದೇ ಕಾರಣಕ್ಕೆ. ನೀವು ತೆಲುಗಿನ ಯಾವುದೇ ಚಾನೆಲ್ ನೋಡಿ. ಸ್ಟಾರ್, ಝೀ ತೆಲುಗು, ಜೆಮಿನಿ, ಈಟಿವಿ ತೆಲುಗು.. ಹೀಗೆ ಯಾವ ಚಾನೆಲ್ ತಿರುಗಿಸಿದರೂ.. ಅಲ್ಲಿ ಬರುವ ಧಾರಾವಾಹಿಗಳಲ್ಲಿ ಕಾಣುವುದು ಕನ್ನಡದ ಮುಖಗಳೇ. ತೆಲುಗು ಧಾರಾವಾಹಿಗಳ ನಿರ್ಮಾಪಕ-ನಿರ್ದೇಶಕರು ಯಾಕೆ ಕನ್ನಡದ ಕಲಾವಿದರನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸುತ್ತಿದ್ದಾರೋ.. ಗೊತ್ತಿಲ್ಲ. ಆದರೆ.. ಕನ್ನಡದ ಕಲಾವಿದರಿಗೆ ಅಲ್ಲಿ ಸಿಗುತ್ತಿರುವ ಅವಕಾಶ, ಗೌರವ.. ಅಲ್ಲಿನವರನ್ನು ಕೆರಳಿಸಿರುವ ಸಾಧ್ಯತೆಯಂತೂ ಇದೆ. ಹೀಗಾಗಿ.. ಕೆಲಸದ ಬದಲು ತಂತ್ರಗಳ ಮೂಲಕ ಎದಿರೇಟು ಕೊಡುವ ಹುನ್ನಾರ ಇದಾಗಿರಬಹು ಎನ್ನಲಿಕ್ಕೆ ಅಡ್ಡಿಯಿಲ್ಲ. ಆದರೆ.. ಅಧಿಕೃತ ವಾಸ್ತವ ಕಥೆ ಬೇರೆನೋ ಇರುವಂತಿದೆ.