ಕಳೆದ ವಾರ ಕನ್ನಡದ ಯಾವುದೇ ಹೊಸ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಕ್ಯೂಬ್ ಹಾಗೂ ಯುಎಫ್‍ಓ ಸಂಸ್ಥೆಯ ಏಕಸ್ವಾಮ್ಯದ ವಿರುದ್ಧ ಸಮರ ಸಾರಿದ್ದ ದಕ್ಷಿಣ ಭಾರತ ಚಿತ್ರರಂಗ ಹೊಸ ಸಿನಿಮಾ ಬಿಡುಗಡೆಯನ್ನೇ ನಿಲ್ಲಿಸಿತ್ತು. ಆರಂಭದಲ್ಲಿ ಹಠಮಾರಿತನ ತೋರಿಸಿದ್ದ ಎರಡೂ ಸಂಸ್ಥೆಗಳು ಈಗ ಮಾತುಕತೆ ಅಂಗಳಕ್ಕೆ ಬಂದಿವೆ. ನಿರ್ಮಾಪಕರ ಬೇಡಿಕೆಗೆ ಸ್ಪಂದಿಸುವ ಭರವಸೆ ಕೊಟ್ಟಿವೆ. ಹೀಗಾಗಿ ಹೊಸ ಸಿನಿಮಾ ಬಿಡುಗಡೆಗೆ ನಿರ್ಬಂಧ ಹಾಕಿಕೊಂಡಿದ್ದ ಚಿತ್ರರಂಗ ಈಗ ಹೊಸ ಸಿನಿಮಾಗಳ ಬಿಡುಗಡೆಗೆ ತಾತ್ಕಾಲಿಕ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹೀಗಾಗಿ ಈ ವಾರ ಅಂದರೆ ಮಾರ್ಚ್ 16ರಂದು 3 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ದಂಡುಪಾಳ್ಯ 3, ಇದಂ ಪ್ರೇಮಂ ಜೀವನಂ, ನಂಗಿಷ್ಟ ಚಿತ್ರಗಳು ಚಿತ್ರಮಂದಿರ ಪ್ರವೇಶಿಸಲಿವೆ. ಅಂದಹಾಗೆ ಇದು ತಾತ್ಕಾಲಿಕ ಪರಿಹಾರವಷ್ಟೆ. ಅಂತಿಮ ತೀರ್ಮಾನ ಇನ್ನೂ ಹೊರಬಿದ್ದಿಲ್ಲ. ಸಂಧಾನ ನಡೆದು, ಚಿತ್ರ ನಿರ್ಮಾಪಕರ ಬೇಡಿಕೆಗೆ ಕ್ಯೂಬ್ & ಯುಎಫ್‍ಓ ಸಂಸ್ಥೆಗಳು ಮಣಿಯಬೇಕಷ್ಟೆ. ಏಕೆಂದರೆ, ಎರಡೂ ಸಂಸ್ಥೆಗಳು ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಿತ್ರಗಳ ಮೇಲೆ ದುಬಾರಿ ಶುಲ್ಕ ವಿಧಿಸುತ್ತಿವೆ. ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಿಗೆ ಹೋಲಿಸಿದರೆ, ಪ್ರಾದೇಶಿಕ ಭಾಷೆಗಳಿಗೆ ವಿಧಿಸುತ್ತಿರುವ ಶುಲ್ಕ 10 ಪಟ್ಟು ಹೆಚ್ಚು. ಹೀಗಾಗಿಯೇ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳು ಒಗ್ಗಟ್ಟಿನಿಂದ ಯುಎಫ್‍ಒ ಹಾಗೂ ಕ್ಯೂಬ್ ಸಂಸ್ಥೆಗಳ ವಿರುದ್ಧ ಸಮರ ಸಾರಿದ್ದವು.
ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಮೂರೂ ಚಿತ್ರಗಳು ಹಳೆಯ ಬಾಡಿಗೆಯನ್ನೇ ಈ ಸಂಸ್ಥೆಗಳಿವೆ ನೀಡಲಿವೆ. ಆದರೆ, ಇದಕ್ಕೆ 15 ದಿನಗಳ ಗಡುವು ಮಾತ್ರ. ಆನಂತರ ಈ ಚಿತ್ರಗಳ ಶೇ.50ರಷ್ಟು ಹಣವನ್ನು ಈ ಸಂಸ್ಥೆಗಳು ಆ ನಿರ್ಮಾಪಕರಿಗೆ ವಾಪಸ್ ನೀಡಬೇಕು. 15 ದಿನಗಳ ಒಳಗೆ ಸಮಸ್ಯೆ ಬಗೆಹರಿಯದೇ ಇದ್ದರೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಫಿಲಂ ಚೇಂಬರ್ ನಿರ್ಧರಿಸಿದೆ. ಈಗಾಗಲೇ ಇನ್ನೊಂದು ಸಂಸ್ಥೆಯ ಜೊತೆಗೆ ಮಾತುಕತೆಯೂ ಶುರುವಾಗಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ನಿರ್ಮಾಪಕರಿಗೆ ತೊಂದರೆ ಹಾಗೂ ನಷ್ಟವಾಗಲು ಬಿಡುವುದಿಲ್ಲ ಎಂದು ಗೋವಿಂದು ಭರವಸೆ ಕೊಟ್ಟಿದ್ದಾರೆ.