ಮಂಜರಿ, ಹಾರರ್ ಸಿನಿಮಾ. ರೂಪಿಕಾ ಒಂದೂವರೆ ವರ್ಷದ ಗ್ಯಾಪ್ ನಂತರ ನಟಿಸಿರುವ ಚಿತ್ರ, ಪ್ರೇಕ್ಷಕರ ಕುತೂಹಲ ಕೆರಳಿಸಿರುವುದು ನಿಜ. ಮಂಜರಿ ಸರಣಿಯ 3 ಚಿತ್ರಗಳಿಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಮೊದಲ ಭಾಗವನ್ನಷ್ಟೇ ತೆರೆಗೆ ತಂದಿದೆ. ಚಿತ್ರದ ನಿರ್ದೇಶಕ ವಿಶ್ರುತ್ ನಾಯಕ್.
ವಿಶ್ರುತ್ ಯಾರು ಎಂದರೆ, ಒಂದ್ಸಲ ರಿಂಗ್ ಮಾಸ್ಟರ್ ಸಿನಿಮಾ ನೆನಪು ಮಾಡಿಕೊಳ್ಳಿ. ಅರುಣ್ ಸಾಗರ್ ಅಭಿನಯದ ಆ ಚಿತ್ರ ತನ್ನ ವಿಭಿನ್ನತೆಯಿಂದಲೇ ಗಮನ ಸೆಳೆದಿದ್ದ ಚಿತ್ರ. ಆ ಚಿತ್ರದ ನಿರ್ದೇಶಕರ ಎರಡನೇ ಪ್ರಯತ್ನವೇ ಮಂಜರಿ. ವಿಶ್ರುತ್ ಕುಟುಂಬದಲ್ಲೇ ರಂಗಕಲಾವಿದರಿದ್ದಾರೆ. ತಾಯಿ ಸೋಬಾನೆ ಸಿದ್ಧಮ್ಮ ಆಕಾಶವಾಣಿಯಲ್ಲೂ ಹಾಡುತ್ತಿದ್ದ ಜಾನಪದ ಗಾಯಕಿ. ಆದರೆ, ಆ ಕಲೆಯ ಹಿನ್ನೆಲೆ ಚಿತ್ರರಂಗಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿಗೆ ಬಂದು ಏನೇನೆಲ್ಲ ಕೆಲಸ ಮಾಡಿದ ವಿಶ್ರುತ್‍ಗೆ ನಿರ್ದೇಶಕನಾಗುವ ಹಾದಿಯಲ್ಲಿ ಮೊದಲ ಹೆಜ್ಜೆ ಇಡಿಸಿದವರು ಅವರ ಪತ್ನಿ.
ನಿರ್ದೇಶಕರ ಸಂಘದಲ್ಲಿ ತರಬೇತಿ ಪಡೆಯಲು ಕಳಿಸಿಕೊಟ್ಟರಂತೆ ಅವರ ಪತ್ನಿ. ಅಲ್ಲಿ ವಿಶ್ರುತ್‍ಗೆ ಜೋಸೈಮನ್, ಸಿದ್ದಲಿಂಗಯ್ಯನವರ ಮಾರ್ಗದರ್ಶನ ಸಿಕ್ಕಿತು. ಶ್ರೇಷ್ಟ ಸಿನಿಮಾಗಳನ್ನು ನೋಡುವ ಅವಕಾಶ ಸಿಕ್ಕಿತು. ಆ ಎಲ್ಲ ಅನುಭವವೂ ಚಿತ್ರದಲ್ಲಿ ಹದವಾಗಿ ಬೆರೆತಿದೆ.
ಹಾರರ್ ಚಿತ್ರ ಎಂದರೆ, ರಾತ್ರಿ, ಕತ್ತಲು ಎನ್ನುವುದು ಸಾಮಾನ್ಯ. ಆದರೆ, ಈ ಚಿತ್ರದಲ್ಲಿ ದೆವ್ವ ಬರೋದೇ ಹಗಲು ಹೊತ್ತಿನಲ್ಲಿ. ಹೀಗೇ ರೂಲ್ಸ್ ಬ್ರೇಕ್ ಮಾಡಿಯೇ ಸಿನಿಮಾ ಮಾಡಿರುವ ವಿಶ್ರುತ್, ಅಭಿಮಾನಿಗಳ ಕರತಾಡನವನ್ನು ಎದುರು ನೋಡುತ್ತಿದ್ದಾರೆ.