ಅನುಭವ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಅಭಿನಯ ಅವರಿಗೆ ಜೈಲು ಶಿಕ್ಷೆ ಪ್ರಕಟವಾಗಿದೆ. ಇದು ಈಗಿನ ಕೇಸ್ ಅಲ್ಲ, 20 ವರ್ಷಗಳ ಹಿಂದಿನ ಕೇಸ್. 2002ರದಲ್ಲಿ ಅಭಿನಯ ಅವರ ಅತ್ತಿಗೆ ಲಕ್ಷ್ಮಿದೇವಿ ಅಭಿನಯ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದರು. ಚಂದ್ರಾ ಲೇಔಟ್‍ನಲ್ಲಿ ಕೇಸ್ ಆಗಿತ್ತು. ಅಭಿನಯ ಅಣ್ಣ ಶ್ರೀನಿವಾಸ್ ಎಂಬುವವರ ಪತ್ನಿಯೇ ದೂರು ನೀಡಿದ್ದ ಲಕ್ಷ್ಮಿದೇವಿ. ಅಭಿನಯ ಅವರಷ್ಟೇ ಅಲ್ಲ, ಪತಿ ಶ್ರೀನಿವಾಸ್ ಸೇರಿದಂತೆ ರಾಮಕೃಷ್ಣ, ಚೆಲುವರಾಜ್, ಜಯಮ್ಮ ವಿರುದ್ಧವೂ ಕೇಸ್ ಆಗಿತ್ತು. ಇವರಲ್ಲಿ ಪತಿ ಶ್ರೀನಿವಾಸ್ ಹಾಗೂ ರಾಮಕೃಷ್ಣ ಈಗ ಇಲ್ಲ.
ಲಕ್ಷ್ಮಿದೇವಿ ಅವರನ್ನು 1998ರಲ್ಲಿ ಶ್ರೀನಿವಾಸ್ ಮದುವೆಯಾಗಿದ್ದರು. ಮದುವೆಯಲ್ಲಿ 80 ಸಾವಿರ ಕ್ಯಾಷ್, 250 ಗ್ರಾಂ ಚಿನ್ನಾಭರಣ ಕೊಟ್ಟಿದ್ದರು. 1998ರಲ್ಲಿ. ಆದರೆ ಮದುವೆಯಾದ ಮೇಲೆ ಅಷ್ಟಕ್ಕೇ ನಿಲ್ಲದೆ ಮತ್ತೆ 1 ಲಕ್ಷ ತಗೊಂಡು ಬಾ ಎಂದು ತವರು ಮನೆಗೆ ಕಳಿಸಿದ್ದರಂತೆ. 20 ಸಾವಿರ ಕೊಟ್ಟಿದ್ದರೂ ಉಳಿದ ಹಣ ಎಲ್ಲಿ ಎಂದು ಕಿರುಕುಳ ಕೊಟ್ಟಿದ್ದರಂತೆ. ಅಲ್ಲದೆ ಅಭಿನಯ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ನನ್ನನ್ನೂ ಅದಕ್ಕೆ ತಳ್ಳಲು ನೋಡಿದ್ದರು. ಒಪ್ಪದ ಕಾರಣಕ್ಕೆ ಕಿರುಕುಳ ನೀಡಿದ್ದರು ಎಂದು ಹೇಳಿಕೆ ನೀಡಿದ್ದಾರೆ ಲಕ್ಷ್ಮೀದೇವಿ.
2012ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಅಭಿನಯ ವಿರುದ್ಧದ ಆರೋಪಗಳಿಗೆ ಶಿಕ್ಷೆ ಘೋಷಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅಭಿನಯ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದರು. ಜಿಲ್ಲಾ ಸೆಷನ್ಸ್ ಕೋರ್ಟಿನಲ್ಲಿ ಅಭಿನಯ ಮತ್ತವರ ವಿರುದ್ಧದ ಕೇಸುಗಳು ವಜಾ ಆಗಿದ್ದವು. ಈ ತೀರ್ಪನ್ನು ಪ್ರಶ್ನಿಸಿ ಲಕ್ಷ್ಮೀದೇವಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಈಗ 2 ವರ್ಷ ಜೈಲು ಶಿಕ್ಷೆ ಘೋಷಿಸಿದೆ. ಎ1 ಪತಿ ಶ್ರೀನಿವಾಸ್, ಎ2 ರಾಮಕೃಷ್ಣ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉಳಿದ ಮೂವರಿಗೆ ಶಿಕ್ಷೆ ಘೋಷಿಸಲಾಗಿದೆ. ಅಭಿನಯ ತಾಯಿ ಜಯಮ್ಮ ಎ3ಗೆ 5 ವರ್ಷ ಜೈಲು, ಎ4 ಚೆಲುವರಾಜ್ ಹಾಗೂ ಎ5 ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋದಾಗಿ ಹೇಳಿರೊ ಅಭಿನಯ ಈ ಮೊದಲು ನಾವು ಕೇಸ್ ಗೆದ್ದಿದ್ವಿ. ಈಗ ನಮ್ಮ ವಿರುದ್ಧವಾಗಿ ಬಂದಿದೆ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಮುಂದೇನಾಗುತ್ತೋ ನೋಡೋಣ.. ಎಂದು ಹೇಳಿದ್ದಾರೆ ನಟಿ ಅಭಿನಯ.