ಈ ವಾರ ತೆರೆಗೆ ಬರುತ್ತಿರುವುದು ಒಟ್ಟು ಮೂರು ಸಿನಿಮಾ. ಈ ಮೂರರಲ್ಲಿ ಎರಡು ಚಿತ್ರಗಳ ನಾಯಕಿ ಮೇಘನಾ ರಾಜ್. ಒಬ್ಬರೇ ನಾಯಕಿಯಾಗಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಈ ವಾರದ ವಿಶೇಷ. ಮೇಘನಾ ರಾಜ್, ಜಿಂದಾ ಮತ್ತು ನೂರೊಂದು ನೆನಪು ಎರಡೂ ಚಿತ್ರಗಳ ನಾಯಕಿ.
ಜಿಂದಾ ಚಿತ್ರ ಒಂದು ರೀತಿಯಲ್ಲಿ ರಾ ಸಿನಿಮಾ. ಚಿತ್ರದ ಮೇಕಿಂಗ್ ಮತ್ತು ಫಿಲ್ಟರ್ ಇಲ್ಲದ ಡೈಲಾಗ್ಗಳು ಈಗಾಗಲೇ ಸದ್ದು ಮಾಡಿವೆ. ಚಿತ್ರದಲ್ಲಿನ ಗಂಡಸರ ಕುರಿತ ಮೇಘನಾ ರಾಜ್ ಪಾತ್ರದ ಡೈಲಾಗ್, ಚಿತ್ರದ ವಿರುದ್ಧ ಪ್ರತಿಭಟನೆಗೂ ಕಾರಣವಾಗಿತ್ತು. ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್. ಸೀನಿಯರ್ ನಟ ದೇವರಾಜ್, ಶ್ರೀನಿವಾಸ ಮೂರ್ತಿ ಸೇರಿದಂತೆ ಕೆಲವು ಕಲಾವಿದರನ್ನು ಉಳಿದವರೆಲ್ಲ ಹೊಸಬರು. ದತ್ತ ಫಿಲಂಸ್ ಲಾಂಛನದಲ್ಲಿ ಬರುತ್ತಿರುವ ಚಿತ್ರದ ನಿರ್ಮಾಪಕರು ದತ್ತಾತ್ತ್ರೇಯ ಬಚ್ಚೇಗೌಡ ಹಾಗು ಬಾನು ದತ್.
ಈ ವಾರದ ಮತ್ತೊಂದು ಆಕರ್ಷಣೆ ಆ ದಿನಗಳು ಚೇತನ್ ನಟಿಸಿರುವ ನೂರೊಂದು ನೆನಪು ಚಿತ್ರ. ಚಿತ್ರದ ಹೆಸರು ಕೇಳಿದರೆ, ಬಂಧನ ಚಿತ್ರದ ಹಾಡು ನೆನಪಾಗುವುದು ಖಂಡಿತಾ. ಮರಾಠಿ ಸಾಹಿತಿ ಸುಹಾಸ್ ಶಿವಾಲ್ಕರ್ ಅವರ ನಾಟಕವನ್ನಾಧರಿಸಿ ನಿರ್ಮಾಣವಾಗಿದ್ದ ದುನಿಯಾ ದಾರಿ ಚಿತ್ರದ ರಿಮೇಕ್ ನೂರೊಂದು ನೆನಪು. ನಟಿ ಮೇಘನಾ ರಾಜ್ ನಾಯಕಿ. ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಡಿಂಗ್ರಿ ಚಿತ್ರದ ಇನ್ನೊಬ್ಬ ನಾಯಕ. ನಿರ್ದೇಶಕ ಕುಮರೇಶ್ಗೆ ಇದು ಚೊಚ್ಚಲ ಚಿತ್ರ. ಸೂರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ ಚಿತ್ರದ ನಿರ್ಮಾಪಕರು. 80ರ ದಶಕದ ಕಾಲೇಜು ದಿನಗಳನ್ನು ನೆನಪಿಸುವ ಕಥೆ ಚಿತ್ರದಲ್ಲಿದೆಯಂತೆ.
ಮತ್ತೊಂದು ಚಿತ್ರ ಯುಗಪುರುಷ. ಇದು ರವಿಚಂದ್ರನ್ ಅಭಿನಯಿಸಿದ್ದ ಯುಗಪುರುಷ ಚಿತ್ರವನ್ನು ನೆನಪಿಗೆ ತರುತ್ತೆ.
ಚಿತ್ರದ ನಿರ್ದೇಶಕ ಮಂಜು ಮಸ್ಕಲ್ಮಟ್ಟಿ ಕೂಡಾ ಕ್ರೇಜಿ ಸ್ಟಾರ್ ಅಭಿಮಾನಿ. ಅರ್ಜುನ್ ದೇವ್ ನಾಯಕನಾಗಿರುವ ಚಿತ್ರವೂ ಇದೇ ವಾರ ತೆರಗೆ ಬರುತ್ತಿದೆ. ಅನಾಥಾಶ್ರಮದಲ್ಲಿ ಬೆಳೆದ ನಾಯಕ ಮತ್ತು ಗ್ಯಾಂಗ್ವಾರ್ಗಳ ಕಥೆ ಚಿತ್ರದಲ್ಲಿದೆ. ಚಿತ್ರವನ್ನು ಮಂಜುನಾಥ್ ಬಾಬು ಮತ್ತು ಮಿತ್ರರು ಸೇರಿ ನಿರ್ಮಿಸಿದ್ದಾರೆ.