ಎಷ್ಟೂಂತ ಹೀರೋಯಿಸಂ ಸಿನಿಮಾ ಮಾಡೋದು... ಸಾಕು.. ಈ ಮಾತನ್ನು ಶಿವಣ್ಣ ಹೇಳ್ತಿರೋದು ಇದೇ ಮೊದಲಲ್ಲ. ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ನಿರ್ದೇಶಕರು ಅಭಿಮಾನಿಗಳನ್ನು ಮುಂದಿಟ್ಟು ಹೀರೋಯಿಸಂ ಮಾಡಿಸುತ್ತಾರೆ. ಹೀಗಾಗಿಯೇ ಇತ್ತೀಚೆಗೆ ಶಿವಣ್ಣ ಮನೆ, ರಸ್ತೆಗಳನ್ನು ಶುಚಿ ಮಾಡುವ ತೋಟಿಯ ಪಾತ್ರ ಮಾಡುವ ಆಸೆಯಿದೆ ಎಂದು ಹೇಳಿಕೊಂಡಿದ್ದರು. ಸಲಗ ಚಿತ್ರದ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದರು ಶಿವಣ್ಣ. ಈಗ ಭಜರಂಗಿ 2 ಟ್ರೇಲರ್ ಬಂದಿದೆ.
ಹೀರೋಯಿಸಂ ಸಾಕು ಎನ್ನುವ ಶಿವಣ್ಣ ಮಾತಿಗೆ ತಕ್ಕಂತೆಯೇ ಟ್ರೇಲರ್ ಹೊರಬಿದ್ದಿದೆ.
`ಇದೊಂದು ಡಿವೋಷನಲ್ ಮಾಸ್ ಸಿನಿಮಾ. ದೇವರು ಮತ್ತು ರಾಕ್ಷಸರು, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧ. ಒಂದಿಷ್ಟು ಮಾಸ್ ಡೈಲಾಗ್, ಬಿಲ್ಡಪ್ ಇಟ್ಟು ಟ್ರೇಲರ್ ಮಾಡೋದು ಸಾಮಾನ್ಯ. ಆದರೆ, ಅದು ಕಥೆಗೆ ಸೂಕ್ತವಾಗಿದೆಯಾ ಅನ್ನೋದನ್ನೂ ನೋಡಬೇಕು. ಹೀಗಾಗಿ ಭಜರಂಗಿ ಟ್ರೇಲರ್‍ನ್ನು ಮ್ಯೂಸಿಕ್ ಇಟ್ಟುಕೊಂಡೇ ಮಾಡಿದ್ದೇವೆ. ಪ್ರತಿ ಪಾತ್ರವೂ ಹೈಲೈಟ್ ಆಗಿದೆ. ಖಡಕ್ ಆಗಿದೆ. ಹೊಸ ಪ್ರಯತ್ನದಲ್ಲಿ ನಾವು ಗೆದ್ದಿದ್ದೇವೆ' ಎಂದಿದ್ದಾರೆ ಶಿವಣ್ಣ.
ಎ.ಹರ್ಷ ನಿರ್ದೇಶನದ ಭಜರಂಗಿ 2, ಭಜರಂಗಿಯ ಕಂಟಿನ್ಯೂ ಅಲ್ಲ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹೀರೋ, ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಒಬ್ಬರೇ ಆದರೂ.. ಇದು ಬೇರೆಯದೇ ಕಥೆ. ಜಾಕಿ ಭಾವನಾ, ಶೃತಿ, ಭಜರಂಗಿ ಲೋಕಿ ವಿಭಿನ್ನವಾಗಿ ಕಾಣಿಸುತ್ತಿರೋದು, ಟ್ರೇಲರ್‍ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸದ್ದು ಮಾಡ್ತಿರೋದು ನಿರ್ಮಾಪಕ ಜಯಣ್ಣ ಮತ್ತು ಭೋಗೇಂದ್ರ ಅವರಿಗೆ ಖುಷಿ ಕೊಟ್ಟಿರುವುದಂತೂ ಹೌದು.