36 ವರ್ಷದ ಹಿಂದೆ ಚಿತ್ರರಂಗಕ್ಕೆ ಶಿವ ರಾಜಕುಮಾರ್ ಎಂಬ ಹುಡುಗ ಕಾಲಿಟ್ಟಾಗ ಆತನಿಗಿನ್ನೂ 24 ವರ್ಷ. ಡಾ.ರಾಜ್ ಮಗ.. ಆತನಿಗೆ ಕನ್ನಡ ಬರುತ್ತೋ ಬರಲ್ವೋ.. ಅಣ್ಣಾವ್ರ ಮನ ಅನ್ನೋ ಕಾರಣಕ್ಕೆ.. ಅಮ್ಮಮ್ಮಾ ಅಂದ್ರೆ ಎರಡ್‍ಮೂರು ಚಿತ್ರಗಳಲ್ಲಿ ನಟಿಸಿ ಸೈಡಿಗೆ ಹೋಗ್ತಾನೆ ಎಂದುಕೊಂಡಿದ್ದವರಿಗೆಲ್ಲ ಉತ್ತರ ಅವರ ಜರ್ನಿಯಲ್ಲೇ ಇದೆ. ಅವರಿಗೀಗ 60 ವರ್ಷ. ಚಿತ್ರರಂಗಕ್ಕೆ ಬಂದು 36 ವರ್ಷ. 36 ವರ್ಷದ ಹೇಗೆ ಟುವ್ವಿ ಟುವ್ವಿ ಎನ್ನುತ್ತಾ ಕುಣಿಯುತ್ತಾ ಬಂದರೋ.. ಇವತ್ತಿಗೂ ಅದೇ ಎನರ್ಜಿ.
ಶಿವಣ್ಣ ಅಭಿನಯದಲ್ಲಿ ಈಗಾಗಲೇ 123 ಚಿತ್ರಗಳು ರಿಲೀಸ್ ಆಗಿವೆ. ಈಗಲೂ ಶಿವಣ್ಣ ನಿರ್ಮಾಪಕರು ಮತ್ತು ನಿರ್ದೇಶಕರ ಡಾರ್ಲಿಂಗ್. ನಿರ್ಮಾಪಕರಿಗೆ ಶಿವಣ್ಣನಿಗೆ ಹಾಕಿದ ದುಡ್ಡಿಗೆ ಮೋಸವಾಗಲ್ಲ ಅನ್ನೋ ನಂಬಿಕೆಯಾದರೆ.. ನಿರ್ದೇಶಕರಿಗೆ ಶಿವಣ್ಣ ಬ್ಲೆಂಡ್ ಆಗುವ ರೀತಿ ಇಷ್ಟ. ಹೊಸಬರೇ ಇರಲಿ.. ಹಳಬರೇ ಇರಲಿ.. ನಿರ್ದೇಶಕರಿಗೆ ಶಿವಣ್ಣ ಕೊಡೋ ಗೌರವವೇ ಬೇರೆ. ಈಗ ಅವರ ಕೈಲಿ ಹತ್ತಕ್ಕೂ ಹೆಚ್ಚು ಸಿನಿಮಾಗಳಿವೆ.
125ನೇ ಸಿನಿಮಾ ವೇದಕ್ಕೆ ಗೀತಾ ಶಿವರಾಜಕುಮಾರ್ ನಿರ್ಮಾಪಕರು. ಹರ್ಷ ಡೈರೆಕ್ಟರ್.
ಅದು ಮುಗಿದ ನಂತರ ರಾಕ್‍ಲೈನ್ ಬ್ಯಾನರ್‍ನಲ್ಲಿ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ಶುರುವಾಗುತ್ತಿದೆ. ಮುಹೂರ್ತವೂ ಆಗಿದೆ. ಪ್ರಭುದೇವ ಜೊತೆಗೆ ನಟಿಸುತ್ತಿದ್ದಾರೆ ಶಿವಣ್ಣ.
ಬೀರ್‍ಬಲ್ ಖ್ಯಾತಿಯ ಶ್ರೀನಿ ಜೊತೆ ಘೋಸ್ಟ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಸಂದೇಶ್ ನಾಗರಾಜ್ ಪ್ರೊಡ್ಯೂಸರ್.
ಅರ್ಜುನ್ ಜನ್ಯಾ 45 ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಸಿನಿಮಾ. ರಮೇಶ್ ರೆಡ್ಡಿ ನಿರ್ಮಾಪಕರು. ಇದ ಬಹುಭಾಷೆಯಲ್ಲಿ ಮೂಡಿ ಬರಲಿರೋ ಸಿನಿಮಾ.
ಆರ್. ಕೇಶವ್ (ರೈತ) ಎಂಬುವವರ ಮೊದಲ ನಿರ್ಮಾಣದ ಸಿನಿಮಾಗೆ ಶಿವಣ್ಣನೇ ಹೀರೋ.
ಸುಯೋಧನ. ಈ ಚಿತ್ರಕ್ಕೆ ಸುಬ್ರಾಯ ಹರಿಶ್ಚಂದ್ರ ವಾಳ್ಗೆ ನಿರ್ಮಾಪಕರು. ನಿರ್ದೇಶಕರು ಫೈನಲ್ ಆಗಿಲ್ಲ.
ಕೊಟ್ರೇಶ್ ಕುಮಾರ್ ನಿರ್ದೇಶನದಲ್ಲಿ ಒಂದು ಸಿನಿಮಾ, ರೋಹಿತ್ ನಿರ್ದೇಸನದಲ್ಲಿ ಸತ್ಯಮಂಗಲ ಫೈನಲ್ ಆಗಿದೆ.
ತಮಿಳಿನಲ್ಲಿ ರಜನಿಕಾಂತ್ ಜೊತೆ ನಟಿಸುತ್ತಿರೋ ಸಿನಿಮಾ ಕೂಡಾ ಟೇಕ್ ಆಫ್ ಆಗಿದೆ.
ಇವಿಷ್ಟೂ ನಿರ್ದೇಶಕರಲ್ಲಿ ಯೋಗರಾಜ್ ಭಟ್ ಮತ್ತು ಹರ್ಷ ಅವರನ್ನು ಸೀನಿಯರ್ ಪಟ್ಟಿಗೆ ಸೇರಿಸಬಹುದು. ಹರ್ಷ, ಶಿವಣ್ಣ ಚಿತ್ರಗಳನ್ನು ನಿರ್ದೇಶಿಸುತ್ತಲೇ ಸೀನಿಯರ್ ಆದವರು. ಶ್ರೀನಿ ಕೂಡಾ ಕೆಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರೂ ಸೀನಿಯರ್ ಲಿಸ್ಟಿಗೆ ಹೋಗಿಲ್ಲ. ಉಳಿದವರೆಲ್ಲ ಹೊಸಬರು. ನಿರ್ಮಾಪಕರಲ್ಲೂ ಅಷ್ಟೆ, ರಾಕ್`ಲೈನ್ ಮತ್ತು ಸಂದೇಶ್ ನಾಗರಾಜ್ ಹಳಬರಾದರೆ, ಉಳಿದವರು ಹೊಸಬರು. ಇನ್ನು ಡಿಸ್ಕಷನ್ ಹಂತದಲ್ಲಿರೋ ಚಿತ್ರಗಳ ಸಂಖ್ಯೆ ಇನ್ನೂ ಇನ್ನೂ ಇವೆ.
ಇದೆಲ್ಲದರ ಮಧ್ಯೆಯೇ ಶಿವಣ್ಣ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೆಲ್ಲದರ ಮಧ್ಯೆ ಈ ಸಂಭ್ರಮದ ಮಧ್ಯೆ ಅವರೊಬ್ಬರಿದ್ದಿದ್ದರೆ.. ಶಿವಣ್ಣ ಪಾಲಿಗೆ ಅವರಿಲ್ಲದೆ ನಡೆಯುತ್ತಿರುವ ಮೊದಲ ಹುಟ್ಟು ಹಬ್ಬ ಇದು.