ಪುನೀತ್ ರಾಜಕುಮಾರ್ ಇನ್ನಿಲ್ಲವಾಗಿ ವರ್ಷವಾಗುತ್ತಾ ಬರುತ್ತಿದೆ. ಅಭಿಮಾನಿಗಳ ಹೃದಯದಲ್ಲಿ ಪುನೀತ್ ಇಂದಿಗೂ ಅಚ್ಚಹಸಿರು. ಈಗಲೂ.. ಈ ಕ್ಷಣಕ್ಕೂ ಪುನೀತ್ ಸತ್ತಿಲ್ಲ ಎಂದೇ ನಂಬುವ ಸಾವಿರಾರು ಮಂದಿ ಅಭಿಮಾನಿಗಳಿದ್ದಾರೆ. ಬದುಕಿರುವವರೆಗೆ ಹೀರೋ ಆಗಿದ್ದ, ರಾಜಕುಮಾರನಾಗಿದ್ದ ಅಪ್ಪು, ಈಗ ದೇವರೇ ಆಗಿಬಿಟ್ಟಿದ್ದಾರೆ. ಪುನೀತ್ ಇಲ್ಲದೆ ಆಚರಿಸುತ್ತಿರುವ ಗಣೇಶನ ಹಬ್ಬದಲ್ಲಿ ಪುನೀತ್ ಗಣಪನ ಜೊತೆ ಜೊತೆಯಲ್ಲೇ ಬಂದಿದ್ದಾರೆ.
ಗಣೇಶನ ವಿಗ್ರಹದ ಜೊತೆ ಪುನೀತ್ ವಿಗ್ರಹವೂ ಇರುವ ಸಾವಿರಾರು ವಿಗ್ರಹಗಳು ಪ್ರತ್ಯಕ್ಷವಾಗಿವೆ. ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿಯೇ ಅಪ್ಪುಗಣೇಶ ವಿಗ್ರಹಗಳು ಮಾರಾಟವಾಗುತ್ತಿವೆ.
ಪುನೀತ್ ಮತ್ತು ಗಣೇಶ ಒಟ್ಟಿಗೇ ಇರುವ ಗಣೇಶನ ವಿಗ್ರಹಗಳ ಬೆಲೆ 10ರಿಂದ 20 ಸಾವಿರ ರೂ.ವರೆಗೆ ಇದೆ. ಮೊದಲೇ ಪ್ಲಾನ್ ಮಾಡಿ ಮಾಡಿಸಿಕೊಂಡಿದ್ದವರಿಗೆ ನಿಗದಿತ ಬೆಲೆಯಲ್ಲಿಯೇ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಅಪ್ಪು ಜೊತೆ ಗಣೇಶ ಇರುವ ವಿಗ್ರಹಗಳ ಸಂಖ್ಯೆ ಕಡಿಮೆಯಿದ್ದು, ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ವಿಗ್ರಹಕ್ಕೆ 50 ಸಾವಿರ ರೂ.ವರೆಗೂ ಡಿಮ್ಯಾಂಡ್ ಬಂದಿದೆ.
ಗಣೇಶನ ವಿಗ್ರಹಗಳನ್ನು ಮಾರಾಟ ಮಾಡುವ ಎಲ್ಲಿಗೇ ಹೋದರೂ ಅಲ್ಲಿ ಅಪ್ಪುಗಣೇಶ ಇದ್ದಾನೆ.