ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಅನಂತ್‍ನಾಗ್ ಪ್ರಶಸ್ತಿ ಸಿಕ್ಕಿದೆ. ಯಾರು..? ಯಾವಾಗ..? ಎಂದು ಕೇಳಬೇಡಿ. ಕೊಟ್ಟಿರುವುದು ಸ್ವತಃ ಅನಂತ್‍ನಾಗ್. ನಿರ್ದೇಶಕ ಹೇಮಂತ್ ಅವರನ್ನು ಮನಸಾರೆ ಮೆಚ್ಚಿಕೊಂಡಿರುವ ಅನಂತ್, ಹೇಮಂತ್‍ಗೆ ಮೆಚ್ಚುಗೆಯ ಅಭಿಮಾನದ ಪ್ರಶಸ್ತಿ ನೀಡಿದ್ದಾರೆ.
ಒಬ್ಬ ಹುಡುಗ ಬಂದಿದ್ದ. ನೋಡೋಕೆ ಚೆನ್ನಾಗಿದ್ದ. ಎಂಜಿನಿಯರ್ ಅಂತೆ, ಮುಖದಲ್ಲಿ ಸಿನ್ಸಿಯಾರಿಟಿ ಇದೆ. ಅಲ್ಲೊಂದು ಸ್ಕ್ರಿಪ್ಟ್ ಕೊಟ್ಟು ಹೋಗಿದ್ದಾರೆ.. ನೋಡಿ.. ಎಂದು ಅನಂತ್‍ಗೆ ಮೊದಲು ಹೇಳಿದ್ದವರು ಗಾಯತ್ರಿ. ಅದು ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಸ್ಕ್ರಿಪ್ಟ್. ಪತ್ನಿಯ ಮಾತು ಕೇಳಿದ ಒಂದೆರಡು ದಿನಗಳ ನಂತರ ಸ್ಕ್ರಿಪ್ಟ್ ಕೈಗೆತ್ತಿಕೊಂಡ ಅನಂತ್‍ನಾಗ್‍ಗೆ ಸ್ಕ್ರಿಪ್ಟ್ ಪ್ರತಿ ಹಂತದಲ್ಲೂ ಇಷ್ಟವಾಗುತ್ತಾ ಹೋಯ್ತು. ತಕ್ಷಣ ಹೇಮಂತ್‍ಗೆ ಕರೆ ಮಾಡಿ ತಮ್ಮನ್ನು ಭೇಟಿ ಮಾಡಲು ಹೇಳಿದರು. ಆಗ ಹೇಮಂತ್ ಬ್ರಿಟಿಷ್ ಮತ್ತು ಅಮೆರಿಕನ್ ಶೈಲಿಯ ಸಿನಿಮಾಗಳ ಬಗ್ಗೆ ಮಾತನಾಡಿದಾಗ ನನ್ನ ನಂಬಿಕೆ ಗಟ್ಟಿಯಾಯ್ತು. ಹೀಗೆ ಹೇಳುತ್ತಾ ಹೋಗುವ ಅನಂತ್, ಗೋಬಸಾಮೈ ಚಿತ್ರವನ್ನು ರಿಲೀಸ್‍ಗೂ ಮೊದಲೇ ನೋಡಿದ್ದರಂತೆ. ತಮ್ಮ ಚಿತ್ರಗಳನ್ನಷ್ಟೇ ಅಲ್ಲ, ಸಾಧಾರಣವಾಗಿ ಸಿನಿಮಾಗಳನ್ನೇ ಕಡಿಮೆ ನೋಡುವ ಅನಂತ್‍ನಾಗ್‍ಗೆ ಚಿತ್ರವೂ ಇಷ್ಟವಾಯ್ತು. ಹೀಗಾಗಿಯೇ ಕವಲುದಾರಿ ಚಿತ್ರವನ್ನು ಒಪ್ಪಿಕೊಂಡೆ. ಹೇಮಂತ್ ಒಬ್ಬ ಭರವಸೆಯ ನಿರ್ದೇಶಕ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅನಂತ್.
ಕವಲುದಾರಿ ಚಿತ್ರದ ಸ್ಕ್ರಿಪ್ಟ್‍ನ್ನು ನೀಡದೆ, ನೆರೇಷನ್ ನೀಡಿದ್ದರಂತೆ ಹೇಮಂತ್. ಆ ನರೇಷನ್ ಬಹಳ ಇಷ್ಟವಾಯ್ತು. ಹೀಗಾಗಿ ಒಪ್ಪಿಕೊಂಡೆ, ಚಿತ್ರದಲ್ಲಿ ಮತ್ತೊಮ್ಮೆ ಹೇಮಂತ್ ಆ ಭರವಸೆ ಉಳಿಸಿಕೊಂಡಿದ್ದಾರೆ ಎಂದಿದ್ದಾರೆ ಅನಂತ್‍ನಾಗ್.
ಕವಲುದಾರಿ ಚಿತ್ರದಲ್ಲಿ ಅನಂತ್‍ನಾಗ್, ರಿಷಿ, ಸುಮನ್ ರಂಗನಾಥ್, ರೋಷನಿ ಪ್ರಕಾಶ್, ಅಚ್ಯುತ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.