ಅನಂತ್ ನಾಗ್ ಆಡುವ ಗೊಂಬೆಯಾಗುತ್ತಿದ್ದಾರೆ. ಅನಂತ್‍ರನ್ನು ಆಡುವ ಗೊಂಬೆಯನ್ನಾಗಿಸುತ್ತಿರುವುದು ಬೇರ್ಯಾರೂ ಅಲ್ಲ. ಲಕ್ಷ್ಮಿಯನ್ನು ಚಂದನದ ಗೊಂಬೆಯನ್ನಾಗಿಸಿದ ಭಗವಾನ್.
ಭಗವಾನ್ ತಮ್ಮ 85ನೇ ವಯಸ್ಸಿನಲ್ಲಿ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಇಷ್ಟು ಹಿರಿಯ ವಯಸ್ಸಿನಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿರುವ ಭಗವಾನ್, ಕನ್ನಡದ ಮಟ್ಟಿಗೆ ದೊಡ್ಡ ಸಾಧನೆಯನ್ನೇ ಮಾಡುತ್ತಿದ್ದಾರೆ.
ಅನಂತ್-ಭಗವಾನ್ ಜೋಡಿ ಒಟ್ಟಿಗೇ 9 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಒಂಭತ್ತಕ್ಕೆ, ಒಂಭತ್ತೂ ಸೂಪರ್ ಸಕ್ಸಸ್ ಎನ್ನುವುದೇ ಆಡುವ ಗೊಂಬೆಯ ಕುತೂಹಲ ಹೆಚ್ಚಿಸಿದೆ. ಎಂದಿನಂತೆ ಇದೊಂದು ಕೌಟುಂಬಿಕ ಚಿತ್ರ.
ಕಾಲಕ್ಕೆ ತಕ್ಕಂತೆ ಬದಲಾಗಿದ್ದೇನೆ. ಈಗಿನ ಟ್ರೆಂಡ್‍ಗೆ ತಕ್ಕಂತೆ ಸಿನಿಮಾ ಇರಲಿದೆ. ಚಿತ್ರದಲ್ಲಿ ಅನಂತ್‍ನಾಗ್ ಕಾಫಿ ಎಸ್ಟೇಟ್ ಮಾಲೀಕನ ಪಾತ್ರ ನಿರ್ವಹಿಸಲಿದ್ದಾರೆ. ಆತ, ಆತನ ಸಂಸಾರ, ಆತನ ಬಯಕೆಗಳು, ಅದಕ್ಕೆ ವಿರುದ್ಧವಾಗಿ ನಡೆಯುವ ಬೆಳವಣಿಗೆಗಳೇ ಚಿತ್ರದ ಕಥೆ ಎಂದಿದ್ದಾರೆ ಭಗವಾನ್.
ಚಿತ್ರಕ್ಕೆ ಹಣ ಹೂಡುತ್ತಿರುವುದು ಟೆಕ್ಕಿಗಳಾದ ಸತೀಶ್ ಮತ್ತು ವೇಣು ಗೋಪಾಲ್. ಅವರು ಭಗವಾನ್ ಅಭಿಮಾನಿಗಳು.ತಾವು ಸಿನಿಮಾ ಮಾಡಿದರೆ, ಅದನ್ನು ಭಗವಾನ್ ಅವರೇ ನಿರ್ದೇಶಿಸಬೇಕೆಂದು ಕನಸು ಕಂಡಿದ್ದವರು. ಅವರ ಕನಸು ಆಡುವ ಗೊಂಬೆಯಲ್ಲಿ ನನಸಾಗುತ್ತಿದೆ.
ಅನಂತ್ ನಾಗ್‍ಗೆ ಜೋಡಿಯಾಗುತ್ತಿರುವ ಸುಧಾ ಬೆಳವಾಡಿ. ಚಿತ್ರದಲ್ಲಿ ಸಂಚಾರಿ ವಿಜಯ್, ನಿರುಷಾ, ಸೀಮಾ ಗೌಡ, ರಿಷಿಕಾ ಮಲ್ನಾಡ್ ಮೊದಲಾದವರು ನಟಿಸುತ್ತಿದ್ದಾರೆ.
ಭಗವಾನ್ ಚಿತ್ರಗಳಲ್ಲಿನ ಇನ್ನೊಂದು ಮುಖ್ಯ ಅಂಶ, ಹಾಡುಗಳು. ಅವರ ಚಿತ್ರಗಳಲ್ಲಿನ ಹಾಡುಗಳು ಇಂದಿಗೂ ಗುನುಗುವಂತಿವೆ. ಅಂತಹ ಮಾಧುರ್ಯ ಭರಿತ ಗೀತೆಗಳೇ ಆಡುವ ಗೊಂಬೆಯಲ್ಲೂ ಇರುತ್ತವಾ..? ಪ್ರೇಕ್ಷಕರು ಗೊಂಬೆಗಳಂತೆಯೇ ಕಾಯುತ್ತಿದ್ದಾರೆ.