ಕಟ್ಟೆ ಚಿತ್ರದ ಸೋಲಿನ ನಂತರ ನಿರ್ದೇಶಕ ಓಂ ಪ್ರಕಾಶ್ ರಾವ್ ಹೆಚ್ಚೂ ಕಡಿಮೆ ನಾಪತ್ತೆಯಾಗಿಬಿಟ್ಟಿದ್ದರು. ಈಗ ಒಟ್ಟೊಟ್ಟಿಗೇ 5 ಚಿತ್ರಗಳ ಸಮೇತ ಬರುತ್ತಿದ್ದಾರೆ. ಹುಚ್ಚ-2, ಅಯ್ಯ-2, ಚಂದ್ರಲೇಖ ರಿಟರ್ನ್, ತ್ರಿವಕ್ರಮ ಹಾಗೂ ಹೀರೋ.
ಅಯ್ಯ-2 ಚಿತ್ರಕ್ಕೆ ಹೀರೋ ಆಗಿದ್ದವರು ಚಿರಂಜೀವಿ ಸರ್ಜಾ. ಒಂದು ಹಂತದ ಶೂಟಿಂಗ್ ಕೂಡಾ ಆಗಿತ್ತು. ಈಗ ಚಿರಂಜೀವಿ ಸರ್ಜಾ ಮೇಲೆ ಮುನಿಸಿಕೊಂಡಿರೋ ಓಂ, ಆ ಚಿತ್ರಕ್ಕೆ ನಾಯಕರನ್ನಾಗಿ ವಿನೋದ್ ಪ್ರಭಾಕರ್ ಅವರನ್ನ ಹಾಕಿಕೊಂಡಿದ್ದಾರೆ.
ಇನ್ನು ಹೀರೋ ಚಿತ್ರಕ್ಕೂ ಅಷ್ಟೆ. ಮೊದಲು ಆಯ್ಕೆಯಾಗಿದ್ದವರು ಧನಂಜಯ್. ಈಗ ಆ ಜಾಗಕ್ಕೆ ಬೇರೊಬ್ಬ ಹೀರೋನನ್ನು ತರುತ್ತಿದ್ದಾರಂತೆ. ಧನಂಜಯ್ ಬಗ್ಗೆ ಓಂಪ್ರಕಾಶ್ ಕೆಂಡಕಾರಿದ್ದಾರೆ.
ಓಂ ನಿರ್ದೇಶನದ ಮತ್ತೊಂದು ಚಿತ್ರ ತ್ರಿವಿಕ್ರಮ. ಶಿವರಾಜ್ ಕುಮಾರ್ ಜೊತೆಯಲ್ಲಂತೆ. ಶಿವರಾಜ್ ಕುಮಾರ್‍ಗೆ ಎಕೆ 47, ಸಿಂಹದ ಮರಿ ಮೊದಲಾದ ಚಿತ್ರ ನಿರ್ದೇಶಿಸಿದ್ದ ಓಂಪ್ರಕಾಶ್, ಚಿತ್ರದ ಒನ್‍ಲೈನ್ ಕಥೆ ಹೇಳಿದ್ದಾರಂತೆ. ಶಿವಣ್ಣ ಒಪ್ಪಿದ್ದು, ಚಿತ್ರಕಥೆ ಕೆಲಸ ಶುರುವಾಗಬೇಕಿದೆ.
ಇನ್ನು ಹುಚ್ಚ 2 ಮತ್ತು ಚಂದ್ರಲೇಖ ರಿಟರ್ನ್ ಚಿತ್ರದಲ್ಲಿ ಹೀರೋ ಆಗಿರುವುದು ಮದರಂಗಿ ಕೃಷ್ಣ.
ಒಟ್ಟಿನಲ್ಲಿ ಓಂ ಪ್ರಕಾಶ್ ರಾವ್ ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ.